ಡಾ. ಸ್ವಾಮಿರಾವ್ ಕುಲಕರ್ಣಿ ಅವರು ಈ ಮೊದಲೇ ಬರೆದ ‘ದೆವ್ವದ ಬಾವಿ’ ಶೀರ್ಷಿಕೆಯ ಕಾದಂಬರಿಯನ್ನು ಸ್ವತಃ ಲೇಖಕರೇ ನಾಟಕಕ್ಕೆ ಅದೇ ಶೀರ್ಷಿಕೆಯಡಿ ರೂಪಾಂತರಿಸಿದ್ದಾರೆ. ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ತಲೆಖಾನ್ ಎಂಬ ತಮ್ಮ ಹುಟ್ಟೂರಿನಲ್ಲಿದ್ದ ‘ದೇವರ ಬಾವಿ’ಯನ್ನು ಕೇಂದ್ರೀಕರಿಸಿ ಕಾದಂಬರಿಯಲ್ಲಿ ಹೆಣೆದ ಕಥಾ ವಸ್ತುವನ್ನುಸಾಹಿತ್ಯ ಬೇರೊಂದು ರೂಪದಲ್ಲಿ ಕಟ್ಟಿಕೊಡಲು ಸಾಧ್ಯವಾಗುವ ಬಗ್ಗೆ ಲೇಖಕರು ವಿಚಾರಿಸಿದ್ದೇ ಈ ನಾಟಕ ರೂಪುಗೊಳ್ಳಲು ಕಾರಣ. ಮೂರು ತಲೆಮಾರುಗಳನ್ನು ಪ್ರತಿನಿಧಿಸುವ ಈ ‘ದೇವರ ಬಾವಿ’ ಜನಸಾಮಾನ್ಯರ ವಿಚಾರಗಳ ಸಂಘರ್ಷ-ತರ್ಕ ಹಾಗೂ ಸಾಂಪ್ರದಾಯಿಕ ನಡೆಯಿಂದಾಗಿ ಅದು ‘ದೆವ್ವದ ಬಾವಿ’ ಯಾಗಿ ಮುಂದುವರಿಯುತ್ತದೆ. ಅಚ್ಚರಿಯ ಸಂಗತಿ ಎಂದರೆ ಮೂರೂ ತಲೆಮಾರಿನವರು ಇದೇ ದೆವ್ವದ ಬಾವಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದು. ಕಾಲಕ್ರಮೇಣ ಇವರ ಆತ್ಮಹತ್ಯೆಗೆ ಕಾರಣಗಳು ಬೇರೆ ಬೇರೆ ಯಾಗಿರಬಹುದು. ಆದರೆ, ಅಂತಿಮವಾಗಿ ಈ ‘ದೆವ್ವದ ಬಾವಿ’ಯು ಈ ಜನರ ಉನ್ನತಿ ಹಾಗೂ ಅವನತಿಗೆ ಮೂಲ ಕಾರಣವಾಗುವ ಪರಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ಬಿಂಬಿಸಲಾಗಿದೆ.
ಕಥಾ ವಸ್ತು, ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಹೀಗೆ ವೈವಿಧ್ಯಮಯವಾದ ಸಾಹಿತ್ಯಕ ಅಂಶಗಳಿಂದಾಗಿ ಇಲ್ಲಿಯ ನಾಟಕವು ಓದು ಹಾಗೂ ದೃಶ್ಯ ಮಾಧ್ಯಮದ ಮೂಲಕವೂ ಗಮನ ಸೆಳೆಯುತ್ತದೆ.
©2024 Book Brahma Private Limited.