ಕಥೆಗಾರ ಹನುಮಂತ ಹಾಲಿಗೇರಿ ಅವರ ’ಅಲೈದೇವ್ರು’ ನಾಟಕ ಕೃತಿಯಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಲೇಖಕ ಪೀರಭಾಷಾ ಅವರು ‘ಅಲೈದೇವ್ರು ನಾಟಕದ ಕಟ್ಟ ಕಡೆಯ ದೃಶ್ಯದಲ್ಲಿ ಆತ್ಯಂತಿಕ ಮಾರ್ಗವೆಂಬಂತೆ ಮೋನಪ್ಪಜ್ಜ “ತಾ ಇಲ್ಲಿ ಹಲಗಿ, ನಾವು ನಮ್ಮ ಕೆಲಸ ಮಾಡಾನು, ಅವ್ರು ಬೇಕಾದ್ರೆ ತಮ್ಮ ಕೆಲಸ ಮಾಡಿಕೊಳ್ಲಿ” ಎಂದು ಹಲಗೆ ಬಾರಿಸತೊಡಗುತ್ತಾನೆ. ಅಂತಿಮ ನಿರ್ಣಯವೆಂಬಂತಹ ಈ ಹಲಗೆ ಸದ್ದು, ಕೂಡಿದ ಸರ್ವದೈವವನ್ನೂ ಎಚ್ಚರಿಸುವ, “ಬೈಠಕ್-ಜಮಾತ್’ ನವರನ್ನು ಮೆಟ್ಟಿನಿಲ್ಲುವ, ಶಶಿಕಲಾ-ರಫೀಕರ’ ಪ್ರೇಮವನ್ನು ಲೋಕಕ್ಕೆ ಸಾರುವ ಸಂದೇಶವಾಗುತ್ತದೆ. ಕೊನೆಯ ಸನ್ನಿವೇಶದಲ್ಲಿ ಸಣ್ಣಗೆ ಹೊಮ್ಮುವ ಗಾಂಧೀ ‘ಸ್ವರ’ ಈ ನಾಟಕವು ಹೊಮ್ಮಿಸುವ ತಾತ್ವಿಕತೆಯನ್ನು ಸದ್ದಿಲ್ಲದೆ ಧ್ವನಿಸುತ್ತದೆ. ಇಲ್ಲಿ ಪಾತ್ರ ಮತ್ತು ಸನ್ನಿವೇಶಗಳಿಗೆ ಈ ಬಗೆಯ ಮೌಲ್ಯವನ್ನು ತಂದುಕೊಟ್ಟಿರುವುದರಿಂದಲೇ ‘ಅಲೈದೇವ್ರು’ ನಾಟಕ ಈ ಕಾಲಕ್ಕೆ ಮಹತ್ವದ್ದೆನಿಸುತ್ತದೆ.
©2024 Book Brahma Private Limited.