ಮೂಲತಃ ಮೈಸೂರಿನವರಾದ (ಜನನ: 15-12-1935) ಬಿ.ಎಸ್. ಕೇಶವರಾವ್ ಶಿಕ್ಷಣ ಇಲಾಖೆಯ ಪ್ರಾಧ್ಯಾಪಕ, ನಟ, ರಂಗಕರ್ಮಿ. ತಂದೆ ಬಿ.ಕೆ. ಸುಬ್ಬರಾವ್, ತಾಯಿ ನಾಗಲಕ್ಷ್ಮಮ್ಮ. ಮೈಸೂರಿನ ಸೇಂಟ್ ಫಿಲೋಮಿನ ಕಾಲೇಜಿನಿಂದ ಇಂಟರ್ ಮೀಡಿಯೆಟ್, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಂಜನಿಯರಿಂಗ್‌ನಿಂದ ಡಿಪ್ಲೊಮಾ, ಮದರಾಸಿನ ಟೆಕ್ನಿಕಲ್ ಟೀಚಿಂಗ್ ಇನ್‌ಸ್ಟಿಟ್ಯೂಟಿನಿಂದ ಪದವಿ ಪಡೆದರು.
ಹಿಂದೂಸ್ತಾನ್ ಕನ್‌ಸ್ಟ್ರಕ್ಷನ್ ಕಂಪನಿಯಲ್ಲಿ ಮೇಲ್ವಿಚಾರಕರಾಗಿ. ನಂತರ ಕಡಕ್‌ವಾಸ್ಲಾ, ಪೂನ, ಧೂಂಡ್‌ನಲ್ಲಿ ಕೆಲಕಾಲ. ನಂತರ ಅವರು ಶಿಕ್ಷಣ ಇಲಾಖೆಯಲ್ಲಿ ಅಧ್ಯಾಪಕರಾಗಿ ವಿವಿಧೆಡೆ ಸೇವೆ ಸಲ್ಲಿಸಿ ನಿವೃತ್ತರಾದರು.
ರಂಗ ಕಲಾವಿದರಾಗಿ, ಆಕಾಶವಾಣಿ ಕಲಾವಿದರಾಗಿ ಹಲವಾರು ನಾಟಕಗಳಲ್ಲಿ ನಟಿಸಿ ನಿರ್ದೇಶಿಸಿದರು. ಶಿವರಾಮಕಾರಂತರ ಅಧ್ಯಕ್ಷತೆಯಲ್ಲಿ (1955) ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾರಂತರ ನಾಟಕ ‘ಗರ್ಭಗುಡಿ’ಯನ್ನು ನಿರ್ದೇಶಿಸಿದ್ದರು.ತ್ರಿ-ರಂಗಭೂಮಿ ರಚಿಸಿ ಪರ್ವತ ವಾಣಿಯವರ ಸುಂದೋಪಸುಂದ್ರು (1957) ಪ್ರಯೋಗಿಸಿದ್ದರು.
ಬೇಂದ್ರೆಯವರ ಸಮ್ಮುಖದಲ್ಲಿ ನಾಟಕ ಪ್ರಯೋಗ. ಅ.ನ.ಕೃ.ರವರ ಕಿತ್ತೂರರಾಣಿ ಚೆನ್ನಮ್ಮ, ಕಣ್ಣೀರು ; ತರಾಸುರವರ ದುರ್ಗಾಸ್ತಮಾನ ಕಾದಂಬರಿಗಳ ರಂಗರೂಪ ನೀಡಿದ್ದರು. ಇವರ ಕಾವ್ಯನಾಮ ‘ಹಂಸ’. ಕನ್ನಡಪ್ರಭ ಪತ್ರಿಕೆಯಲ್ಲಿ ವಿಮರ್ಶೆ ಅಂಕಣ. ಕರ್ಮವೀರ ಪತ್ರಿಕೆಯಲ್ಲಿ ರಂಗಾಂತರಂಗ ಅಂಕಣ ಬರೆಯುತ್ತಿದ್ದರು. ದೂರದರ್ಶನ ವಾಹಿನಿಗಳಲ್ಲಿ ನಟನೆ. ರಸಿಕರಂಜನಿ ಸಂಸ್ಥೆಯ ಚುಕ್ಕಾಣಿ ಹಿಡಿದಿದ್ದರು.
ಕೃತಿಗಳು: ಬೀಚಿ-ಬುಲೆಟ್ಸು-ಬಾಂಬ್ಸು-ಭಗವದ್ಗೀತೆ. ಕಂದರ ಕಾರಂಜಿ, ಪ್ರಸಂಗ ಪ್ರವಾಹ, ಪ್ರಸಂಗ ತರಂಗ, ಕನ್ನಡದ ಕೋಗಿಲೆ ಕಾಳಿಂಗರಾಯರು, ಅಪೂರ್ವರೊಡನೆ, ಕನ್ನಡಕ್ಕೊಬ್ಬನೇ ಕೈಲಾಸಂ, ಕನ್ನಡದ ಕಟ್ಟಾಳು ಅ.ನ.ಕೃ, ನಾ ಕಂಡ ಪುಂಡ ಪಾಂಡವರು, ಸೂತ್ರಧಾರ ಬಿ.ವಿ. ಕಾರಂತ, ಮರೆಯಲಾಗದವರು, ಕೈಲಾಸಂ ಜೋಕ್ಸು-ಸಾಂಗ್ಸು, ಕೈಲಾಸಂ ಸಮಗ್ರ ಕೃತಿಗಳು (ಸಂಪಾದಿತ).
ಇವರಿಗೆ ಕೈಲಾಸಂ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಕುವೆಂಪು ಸಾಹಿತ್ಯಶ್ರೀ ಪ್ರಶಸ್ತಿ ಲಭಿಸಿವೆ.