1926ರಲ್ಲಿ ಮೊದಲ ಬಾರಿಗೆ ಪ್ರಕಟವಾದ ಈ ನಾಟಕ ಕುವೆಂಪು ಅವರ ಮೊದಲ ಮಕ್ಕಳ ಗೀತ ನಾಟಕ. ಒಂದೇ ದೃಶ್ಯವನ್ನು ಹೊಂದಿರುವ ಈ ನಾಟಕಕ್ಕೆ ಐದು ಪಾತ್ರಗಳು ಜೀವ ತುಂಬುತ್ತವೆ. ವಿಶೇಷವಾಗಿ ಮೋಡ ಮತ್ತು ಹುಡುಗನ ನಡುವೆ ನಡೆಯುವಂತಹ ಸಂಭಾಷಣೆ ಬಹಳ ಆತ್ಮೀಯವಾಗಿ ಕಾಣುತ್ತದೆ. ಈ ನಾಟಕದಲ್ಲಿರುವ ಪ್ರತಿಯೊಂದು ಸಂಭಾಷಣೆಯೂ ಗೀತೆಯ ರೂಪದಲ್ಲಿದೆ. ಒಬ್ಬ ಹುಡುಗ ಮೋಡದೊಂದಿಗೆ ತಾನೂ ಬರುವೆನೆಂದು ವಿನಂತಿ ಮಾಡಿಕೊಳ್ಳುವ ಪರಿ ಓದುಗರಿಗೆ ಮುದ ನೀಡುತ್ತದೆ. ಕೇವಲ ಹದಿನೈದು ಪುಟಗಳಲ್ಲಿ ಪ್ರಕೃತಿ ಸೌಂದರ್ಯದ ಕೂಲಂಕುಷ ವರ್ಣನೆಯನ್ನು ಮಾಡಿರುವುದು ಈ ನಾಟಕದಲ್ಲಿ ಕಾಣಬಹುದು. ಮೂಲತಃ ಮಲೆನಾಡಿನವರಾದ ಕುವೆಂಪು ಅವರು, ತಮ್ಮ ಬರೆವಣಿಗೆಯಲ್ಲಿ ಹಲವು ಬಾರಿ ಮಲೆನಾಡನ್ನು ವರ್ಣಿಸಿರುವುದು ಕಾಣಬಹುದು. ಇಲ್ಲೂ ಕೂಡ ಅದೇ ರೀತಿಯ ಬರೆವಣಿಗೆ ಮುಂದುವರೆದಿದೆ ಎಂದೇ ಹೇಳಬಹುದು. ಮಲೆನಾಡಿನ ಕಾಡು, ಗಿರಿ ಶಿಖರ, ಮಳೆ, ಮೋಡವನ್ನು ಗೀತ ರೂಪಕದ ಮೂಲಕ ಓದುಗರ ಮುಂದಿಟ್ಟಿದ್ದಾರೆ ಲೇಖಕರು. ಕುವೆಂಪು ಅವರ ಪರಿಸರ ಪ್ರೇಮಕ್ಕೆ ತೆರೆದಿಟ್ಟ ಕನ್ನಡಿಯ ರೀತಿ ಈ ನಾಟಕವು ಭಾಸವಾಗುತ್ತದೆ.
©2024 Book Brahma Private Limited.