‘ಐದು ಬೀದಿ ನಾಟಕಗಳು’ ಲೇಖಕ ಡಾ.ಬಸವರಾಜ ಸಬರದ ಬೀದಿ ನಾಟಕಗಳ ಸಂಕಲನ. ಈ ಕೃತಿಗೆ ಡಾ. ವಿಜಯಾ ಅವರ ಬೆನ್ನುಡಿ ಬರಹವಿದೆ. ಕೃತಿ ಮತ್ತು ಕೃತಿಕಾರರ ಕುರಿತು ಬರೆಯುತ್ತಾ ‘ಪ್ರಿಯ ಸಂಗಾತಿ ಬಸವರಾಜ ಸಬರದ ಬಿಡುವಿಲ್ಲದ ಬರಹಗಾರ. ಅವರ ಎಲ್ಲ ಬರಹವೂ ಸಮಾಜದ ಸ್ವಾಸ್ಥ್ಯಕ್ಕಾಗಿ ತುಡಿಯುತ್ತವೆ. ಈ ಐದೂ ನಾಟಕಗಳಲ್ಲಿ ಅಂಥ ಕಾಳಜಿಯೇ ಎದ್ದು ಕಾಣುತ್ತದೆ. ಕೇವಲ ಬಾಹ್ಯ ವಿವರಗಳಲ್ಲಿಯಲ್ಲದೆ ಬುದ್ಧಿ ಭಾವಗಳಲ್ಲೂ ಸಹ ಚಿಂತನೆ ಇದ್ದಾಗಲೇ ಸ್ತ್ರೀ-ಪುರುಷ ಸಮಾನತೆ ಸಾಧ್ಯ, ಅದಕ್ಕಾಗಿ ನಿನ್ನೆಗಳನ್ನು ಬಗೆದು ತೆಗೆಯಬೇಕೆಂಬಲ್ಲಿ, ಸಿದ್ಧಾರ್ಥನು ಬುದ್ಧನಾಗುತ್ತಾ ಲೋಕ ಕಲ್ಯಾಣಕ್ಕೆ ಮುಖಮಾಡುವ ವಿವರಗಳಲ್ಲಿ, ಒಟ್ಟಾರೆ ಈ ಎಲ್ಲ ನಾಟಕಗಳಲ್ಲಿ ಹೇಳಿಕೆಗೆ ಮೀರಿದ ಕಾವ್ಯಗುಣ ಪಡೆದುಕೊಳ್ಳುವುದರಲ್ಲೇ ಸಬರದರ ಕಲೆಗಾರಿಕೆ ಅಡಗಿದೆ. ಬೀದಿಯಲ್ಲಿ ನಿಂತ ಪ್ರೇಕ್ಷಕನ ಕಲ್ಪನಾ ಶಕ್ತಿಯನ್ನು ಎಷ್ಟು ಪ್ರಮಾಣದಲ್ಲಿ ದುಡಿಸಿಕೊಳ್ಳಲು ನಿರ್ದೇಶಕ ಶಕ್ತನೋ ಅಷ್ಟು ಯಶಸ್ವಿಯಾಗಬಲ್ಲ ನಾಟಕಗಳು ಇಲ್ಲಿವೆ’ ಎನ್ನುತ್ತಾರೆ ವಿಜಯಾ. ಆ ಮಟ್ಟಿಗೆ ಅವನ್ನು ಬೀದಿ ನಾಟಕದ ಸ್ವರೂಪಕ್ಕೆ ತಂದುಕೊಳ್ಳುವ ಸಾಧ್ಯತೆ ಇರುವಂಥ ನಾಟಕಗಳಿವು. ವಾಸ್ತವವಾದಿ ರಂಗವನ್ನು ಕಟ್ಟಿಕೊಡಬಲ್ಲ ಸಮರ್ಥ ನಿರ್ದೇಶಕನಿಗೆ ರಂಗದಮೇಲೆ ಒಂದು ಸವಾಲಾಗಬಲ್ಲಂಥ ನಾಟಕಗಳೂ ಇಲ್ಲಿವೆ. ಸಬರದರು ರಂಗ ಪ್ರಯೋಗದ ಬಗೆಗೂ ತಿಳಿದವರಾದ್ದರಿಂದ ಈ ಸಮನ್ವಯ ಸಾಧ್ಯವಾಗಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಇಲ್ಲಿ ಸಬರದ ಅವರ ಜೀವಜಲ, ಕಾಯಕ ಜೀವಿಗಳು, ಮಹಿಳಾ ವಿಮೋಚನೆ, ಸಿದ್ಧಾರ್ಥ, ಬೆಳಕಿನೆಡೆಗೆ ನಾಟಕಗಳು ಸಂಕಲನಗೊಂಡಿವೆ.
©2024 Book Brahma Private Limited.