‘ಸರ್ಜರಿಯ ಆ ಸುಖ’ ಗುಂಡುರಾವ್ ದೇಸಾಯಿ ಅವರ ಲಲಿತ ಪ್ರಬಂಧಗಳ ಸಂಕಲನ. ಈ ಕೃತಿಗೆ ವಸುಧೇಂದ್ರ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ದೇಸಾಯಿಯವರ ಬರವಣಿಗೆ ಒಂದು ಸೊಗಸಾದ ರಾಗಮಾಲಿಕೆಯಂತೆ ಗೋಚರಿಸುತ್ತದೆ. ಸ್ವಾಭಿಮಾನಿ ಅಪ್ಪನ ಇಳಿವಯಸ್ಸಿನ ಸಂಕಟಗಳನ್ನು ಓದುಗರಿಗೆ ದಾಟಸಿಬಿಡುವ ಈ ಲೇಖಕನ ಸಹಜ ದನಿಯಲ್ಲಿ ಯಾವುದೇ ಬಡಿವಾರವಿಲ್ಲ, ಕಹಿಯಿಲ್ಲ, ಆತ್ಮರತಿಯಿಲ್ಲ. ತನ್ನ ನೆಲೆ-ಜಲ-ಜನರನ್ನು ಇಡಿಯಾಗಿ ಸ್ವೀಕರಿಸುವ ಗುಂಡುರಾವ್, ತನ್ನದೇ ಊರಿನ ಹೋಟೆಲುಗಳ ಬಗ್ಗೆ ಬರೆಯುವಾಗಲೂ ಬೆರಗು, ಕಚಗುಳಿ, ಅಸಹಾಯಕತೆಯನ್ನು ಅನುಭವಿಸುತ್ತಾರೆ. ಕೆಲವೊಮ್ಮೆ ಊರು, ಜನರನ್ನು ಬಿಟ್ಟು ಬೇರೊಂದು ಲೋಕಕ್ಕೆ ಜಿಗಿದು, ಸ್ವರ್ಗಾಧಿಪತಿ ಸುರೇಂದ್ರನ ಕುರಿತು ಹಲವು ಸ್ವಾರಸ್ಯಕರ ಸಂಗತಿಗಳನ್ನು ನಮ್ಮ ಪುರಾಣಗಳಿಂದ ಹಕ್ಕಿ ತೆಗೆದು, ಅದನ್ನು ಆಕರ್ಷಕವಾಗಿ ಹೆಣೆದು ಅಚ್ಚರಿಯನ್ನು ಮೂಡಿಸುತ್ತಾರೆ. ಬದುಕಿನ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿರುವ ಈ ಲೇಖಕನ ಬರವಣಿಗೆಯಲ್ಲಿ ಸಣ್ಣ ಊರಿನ ಸಾವಧಾನವಿದೆ. ನಗರದ ಧಾವಂತದಲ್ಲಿ ಸವೆದು ಹೋಗಿರುವ ಜೀವಗಳಿಗೆ ತುಸು ತಂಗಾಳಿಯನ್ನು ಬೀಸಿ, ಆರಾಮ ನೀಡುವ ಈ ಬಗೆಯ ಪ್ರಬಂಧಗಳು ಇಂದಿನ ಗಡಿಬಿಡಿ ಬದುಕಿಗೆ ಅಗತ್ಯವಾಗಿ ಬೇಕಾದ ತಂಗುದಾಣಗಳಾಗಿವೆ. ಅರಳಿ ಕಟ್ಟೆಯ ಮೇಲೆ ಕುಳಿತಾಗ ಸಹಜವಾಗಿ ವಿಸ್ತಾರವಾಗುವ ಹರಟೆಗಳ ಜಾದೂ ಈ ಲೇಖನಗಳಿಗೆ ದಕ್ಕಿದೆ. ಬಿಂಕವಿಲ್ಲದ ಬದುಕನ್ನು ವಿನಯಪೂರ್ವಕವಾಗಿ ದೇಸಾಯಿಯವರ ಕಣ್ಣುಗಳಿಗೆ ಸಾಮಾನ್ಯ ಜನರಿಗೆ ಕಾಣದ ಹಲವು ವಿಶೇಷಗಳನ್ನು ಗ್ರಹಿಸುವ, ಅದನ್ನು ಅಕ್ಷರಗಳ ಮೂಲಕ ಮತ್ತೊಬ್ಬರಿಗೆ ದಾಟಿಸುವ ಶಕ್ತಿಯಿದೆ ಎಂದಿದ್ದಾರೆ.
©2024 Book Brahma Private Limited.