ಲೇಖಕಿ ನೀತಾ ರಾವ್ ಅವರ ಲಲಿತ ಪ್ರಬಂಧಗಳ ಹಾಗೂ ನಗೆಬರಹಗಳ ಸಂಕಲನ-ಹತ್ತನೇ ಕ್ಲಾಸಿನ ಹುಡುಗಿಯರು. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2019ನೇ ಸಾಲಿನ ದತ್ತಿ ಬಹುಮಾನ ಲಭಿಸಿದೆ. ಈ ಕೃತಿಯಲ್ಲಿ ಒಟ್ಟು 24 ಲಲಿತ ಪ್ರಬಂಧಗಳು ಹಾಗೂ 11 ನಗೆಬರಹಗಳಿವೆ. ಪರಂಪರೆ ಹಾಗೂ ಆಧುನಿಕ ಜೀವನ ಶೈಲಿಯನ್ನು ಪ್ರಬಂಧಗಳು ತಮ್ಮ ವಸ್ತುವಾಗಿಸಿಕೊಂಡಿವೆ. ಹತ್ತನೇ ಕ್ಲಾಸಿನ ಹುಡುಗಿಯರು ಈ ಪ್ರಬಂಧವು ನಗೆಬರಹವೂ ಆಗಿದೆ. ಹತ್ತನೆ ಕ್ಲಾಸಿನಲ್ಲಿರುವಾಗ ಲೇಖಕಿಯು ತಮ್ಮ ಅನುಭವಗಳನ್ನು ಸ್ವಾರಸ್ಯಕರವಾಗಿ ದಾಖಲಿಸಿದ್ದಾರೆ. ಗಣಪತಿ ಬಪ್ಪಾ ಮೋರಯಾ, ಪ್ರಿಯ ಸಂಪಾದಕರೆ, ಉಡುಗೊರೆಯೇ ಆಶೀರ್ವಾದ, ಮನೆಗಳಿಗೆ ಹಿತ್ತಲುಗಳಿಲ್ಲ. ಹಳೇ ಸಿನಿಮಾ ಹಳೇ ಥೇಟರ್, ಮಧ್ಯಮ ತಾನಧಮನು ಇಂತಹ ಲಲಿತ ಪ್ರಬಂಧಗಳು ಓದುಗರ ಗಮನ ಸೆಳೆಯುತ್ತವೆ.
ಈ ಸಂಕಲನದ ಬೆನ್ನುಡಿಯಲ್ಲಿ ಲೇಖಕಿ ನೀತಾ ರಾವ್ ಅವರು ತಮ್ಮ ಪ್ರಬಂಧಗಳ ಬಗ್ಗೆ ಬರೆದ ಟಿಪ್ಪಣಿ ಇಲ್ಲಿದೆ-
ದಿನನಿತ್ಯವೂ ಈ ಜೀವನವೆಂಬ ರಂಗಸ್ಥಳದ ಮೇಲೆ ನೂರಾರು ಬಗೆಯ ನಾಟಕಗಳನ್ನು ಮಾಡುತ್ತ ಮನಸೆಳೆದು ವಿಷಯಗಳ ಹೂರಣವನ್ನೊದಗಿಸಿ ಅವುಗಳನ್ನೇ ತುಂಬಿ ಕರಿಗಡಬು-ಹೋಳಿಗೆಗಳ ಸವಿಪಾಕವನ್ನು ತಯಾರಿಸಲು ಪ್ರೇರೇಪಿಸುವ ಸುತ್ತಮುತ್ತಲಿನ ಸಕಲ ಜೀವರಾಶಿಗೆ ಕರಗಳನ್ನು ಜೋಡಿಸಿ ವಂದಿಸಲೇ ಬೇಕು. ವಿಷಯ ವೈವಿಧ್ಯಗಳಿಂದ ತುಂಬರುವ ಈ ಜಗತ್ತು ಅತ್ಯಂತ ಶ್ರೀಮಂತವಾಗಿದ್ದು ಆಗೀಗ ತನ್ನ ಸಂಪತ್ತಿನ ಒಂದಿಷ್ಟು ಹರಳು, ಮುತ್ತುಗಳನ್ನು ನಮ್ಮತ್ತ ಎಸೆಯುತ್ತಿರುತ್ತದೆ. ಅದರಲ್ಲೇ ಒಂದೆರಡನ್ನು ಕೈಚಾಚಿ ಬಾಚಿಕೊಳ್ಳುವ ಭಾಗ್ಯ ನನ್ನದಾಗಿರುತ್ತದೆ. ಸುತ್ತಮುತ್ತಲೂ ನೋಡ ಸಿಗುವ ದಿನನಿತ್ಯದ ಪ್ರಸಂಗಗಳು, ಬಾಲ್ಯದಲ್ಲಿ ಸಹಜವೆಂಬಂತೆ ಘಟಿಸಿ ಇದೀಗ ಮೋಜನ ಪ್ರಸಂಗಗಳಾಗಿಯೋ, ರೋಚಕ ವಿಷಯಗಳಾಗಿಯೋ ನೆನಪಿಗೆ ಬಂದು ಕಾಡುವ ಒಂದಿಷ್ಟು ಸಂಗತಿಗಳನ್ನು ನನ್ನದೇ ಧಾಟಿಯಲ್ಲಿ ನಿಮ್ಮೆದುರಿಗಿಡುವ ಭಾಗ್ಯ ನನ್ನದಾಗಿದೆ. ಲಲಿತ ಪ್ರಬಂಧಗಳೆಲ್ಲದರಲ್ಲಿ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ "ನಾನು" ರೌಂಡು ಹೊಡೆಯುತ್ತೇನಾದ್ದರಿಂದ ಅವುಗಳಲ್ಲಿ ನನ್ನ ಸ್ವಂತದ ಅನುಭವಗಳೂ, ನೋಡಿದ ಸಂಗತಿಗಳೂ ಹಸಿಹಸಿಯಾಗಿ ನಿರೂಪಿತವಾಗಿರಬಹುದು. ಇನ್ನು ಹಾಸ್ಯ ಪ್ರಸಂಗಗಳೂ ವಾಸ್ತವದ ನೆಲೆಗಟ್ಟಿನ ಮೇಲೆಯೇ ಕಟ್ಟಿದ ಕಲ್ಪನೆಯ ಮಹಲುಗಳು.
©2024 Book Brahma Private Limited.