`ನಿದ್ರಾಂಗನೆಯ ಸೆಳವಿನಲ್ಲಿ’ ಕೃತಿಯು ಎನ್. ರಾಮನಾಥ್ ಅವರ ಲಲಿತ ಪ್ರಬಂಧಗಳಾಗಿವೆ. ಕೃತಿಯ ಕುರಿತು ನಳಿನಿ ಟಿ. ಭೀಮಪ್ಪ ಅವರು, ‘ಒಂದು ವಿಷಯ ಅಥವಾ ಘಟನೆಯ ಪರಿಕಲ್ಪನೆಯನ್ನು ಅದೆಷ್ಟು ವಿಶಾಲವಾಗಿ, ವಿಸ್ತಾರವಾಗಿ, ವಿನೋದವಾಗಿ ಹೇಳಬಹುದು ಎಂಬುದನ್ನು ಇವರ ಬರಹ ಓದುವಾಗ ಮನಗಾಣಬಹುದು. ಹಳೆಗನ್ನಡ, ವ್ಯಾಕರಣ, ಅಣುಕುವಾಡುಗಳು, ಪುರಾಣ, ಜಾನಪದ, ಇತಿಹಾಸ, ವರ್ತಮಾನ, ಕವನ, ಇಂಗ್ಲಿಷ್ ಎಲ್ಲವನ್ನೂ ಅವಗಾಹನೆಗೆ ತೆಗೆದುಕೊಂಡು ರಚಿಸಿರುವ ಈ ಬರಹಗಳು, ಎಲ್ಲರಿಗೂ ರುಚಿಸುವಲ್ಲಿ ಸಂಶಯವಿಲ್ಲ. ಇವರಿಗೆ ಹೊಳೆದ ವಿಷಯಗಳು, ಎಲ್ಲಿಂದ ಎಲ್ಲಿಗೋ ಹೋಗಿ, ಎಲ್ಲೆಯಿರದೇ, ಎಲ್ಲೆಲ್ಲೋ ಸುತ್ತಾಡಿಸಿ, ಮತ್ತೆ ಅಲ್ಲಿಗೇ ತಂದು ನಿಲ್ಲಿಸಿದಾಗ, ಮನ ಪ್ರಫುಲ್ಲಗೊಳಿಸುವ ಜಾಲೀ ರೈಡ್ ಅನುಭವ ಮೂಡಿಸುವುದು ನಿಜ. ಶೋಣಿತದ ಸೆಳವಿನಿಂದ ಹಿಡಿದು, ಬೋಡ ತಲೆಯ ವ್ಯಾಖ್ಯಾನ, ದೀಪಾವಳಿ, ಜಾಹೀರಾತು, ಯೋಗಾಯೋಗ, ಒಂದು ಚುಕ್ಕಿಯ ಸುತ್ತ, ಪರಿಚಯ ಎಲ್ಲಾ ಭಿನ್ನ ವಿಷಯಗಳನ್ನು ಮತ್ತಷ್ಟು ವಿಭಿನ್ನವಾಗಿ ಬರೆದಿದ್ದಾರೆ. ಬತ್ತಿಯ ಹಿಂದೆ ಎಷ್ಟೆಲ್ಲಾ ಬತ್ತದ ಬುತ್ತಿಯ ಗಂಟಿದೆ ಎನ್ನುವುದನ್ನು ಓದಿದ ಮೇಲೆ ಅಚ್ಚರಿಯಾಗುವ ಸರದಿ ನಮ್ಮದು. ಬಲ್ಲವನೇ ಬಲ್ಲ ಬೆಲ್ಲದ ರುಚಿಯ ಎನ್ನುವಂತೆ, ಬೆಲ್ಲ, ಗಲ್ಲ, ಲಾಬೆಲ್ಲ, ಎಲ್ಲವನ್ನೂ ಗುಡ-ಗುಡಿಯಲ್ಲಿ ಪ್ರಸ್ತಾಪಿಸುತ್ತಾರೆ. ಪ್ರತಿಯೊಂದು ಲೇಖನಗಳೂ ಹೊಸ, ವಿಭಿನ್ನ ಅನುಭವ ನೀಡುತ್ತವೆ’ ಎಂದು ಪ್ರಶಂಸಿಸಿದ್ದಾರೆ.
ಲೇಖಕ ಎನ್. ರಾಮನಾಥ್ ಮೂಲತಃ ಬೆಂಗಳೂರಿನವರು. ವೃತ್ತಿಯಲ್ಲಿ ಪತ್ರಕರ್ತರು. ವಿಜಯಕರ್ನಾಟಕದಲ್ಲಿ ಅಕಂಣಕಾರರಾಗಿ ‘ವೀಕೆಂಡ್ ವಿನೋದ’, ಹಾಗೂ ಹೀಗೂ ಉಂಟು, ಸಂಗ್ಯಾ ಮಂಗ್ಯಾ ದೈನಿಕ ಅಂಕಣಗಳನ್ನು ಬರೆಯುತ್ತಿದ್ದಾರೆ. ಅವರ ‘ನಿದ್ರಾಂಗನೆಯ ಸೆಳವಿನಲ್ಲಿ’ ಕೃತಿಗೆ ಡಿ. ಮಾಣಿಕರಾವ ಸ್ಮರಣಾರ್ಥ ಹಾಸ್ಯ ಸಾಹಿತ್ಯ ದತ್ತಿ ಪ್ರಶಸ್ತಿ ಲಭಿಸಿದೆ. ಕೃತಿಗಳು:ನಿದ್ರಾಂಗನೆಯ ಸೆಳವಿನಲ್ಲಿ, ಹಸಿರು ಬಾಗಿಲು (ಅನುವಾದ ಕೃತಿ) ...
READ MORE