ಕನ್ನಡದ ಪ್ರಮುಖ ಬರಹಗಾರ ಕೆ. ಸತ್ಯನಾರಾಯಣ ಅವರು ಕರ್ನಾಟಕ ಮತ್ತು ಗೋವಾ ವಲಯದ ಆದಾಯ ತೆರಿಗೆ ಇಲಾಖೆಯ ಮುಖ್ಯ ಆಯುಕ್ತರಾಗಿ ಕೆಲಸ ಮಾಡಿದವರು. ಅವರ ಔದ್ಯೋಗಿಕ ಅನುಭವ ವಿಭಿನ್ನ ಈಗ ನಿವೃತ್ತಿಯಾಗಿರುವ ಅವರು ತಮ್ಮ ವೃತ್ತಿಯ ದಿನಗಳನ್ನು “ವೃತ್ತಿ ವಿಲಾಸ' ಎಂಬ ಶೀರ್ಷಿಕೆಯಲ್ಲಿ ಪುಸ್ತಕವಾಗಿಸಿದ್ದಾರೆ. ಆರಂಭದ ಪ್ರಸ್ತಾವನೆಯೂ ಸೇರಿದಂತೆ 30 ಅಧ್ಯಾಯಗಳಲ್ಲಿ ಅವರ ಅನುಭವ ನಿವೇದನೆ ಮಾಡಿಕೊಂಡಿದ್ದಾರೆ.
ಯಾವುದೇ ರೀತಿಯ ಬರವಣಿಗೆಯಲ್ಲಾದರೂ ಸದಾ ಹೊಸ ದಾರಿಗಳನ್ನು ಹುಡುಕುವುದು ಸತ್ಯನಾರಾಯಣ ಅವರ ಸಹಜ ಪ್ರತಿಭೆಯ ಕ್ರಮ ಮತ್ತು ವೃತ್ತಿ ಜೀವನದ ಅನುಭವಗಳನ್ನು ಒಂದು ಸಾಹಿತ್ಯ ಕೃತಿಯಾಗಿ ರೂಪಿಸುವಲ್ಲಿ ಅವರ ವಿಶಿಷ್ಟ ಬರವಣಿಗೆಯ ಕ್ರಮ ಯಶಸ್ಸನ್ನು ಪಡೆದಿದೆ. ಇಂತಹ ಕಥನಗಳನ್ನು ಇದುವರೆಗೆ ಬರೆದಿರುವವರು ಅನುಸರಿಸುವ ಕಾಲಾನುಕ್ರಮಣಿಕೆಯ ಮಾದರಿಯ ನಿರೂಪಣಾಕ್ರಮವನ್ನು ಸತ್ಯನಾರಾಯಣ ತೊರೆದಿದ್ದಾರೆ. ಬದಲಿಗೆ ಹಲವು ಸಂಗತಿ, ಪರಿಕಲ್ಪನೆ ವಿದ್ಯಮಾನಗಳನ್ನು ಕೇಂದ್ರವಾಗಿ ಇಟ್ಟುಕೊಂಡು ಅವುಗಳಿಗೆ ಸಂಬಂಧಿಸಿದ ಅನುಭವ-ವಿಚಾರ- ವಿಶ್ಲೇಷಣೆ ಒಳನೋಟಗಳನ್ನು ಹೆಣೆದು ಒಂದು ವ್ಯಾಪಕವಾದ ಪರಿಪ್ರೇಕ್ಷ್ಯವನ್ನು ವಿಸ್ತರಿಸುತ್ತಾ ಓದುಗನನ್ನು ಚಿಂತನೆಗೆ ಹಚ್ಚುದ ಪ್ರಬಂಧ ಕಥನದ ಸ್ವರೂಪಿ ಬರಹಗಳು ಇಲ್ಲಿವೆ. ಕೆಲವೊಮ್ಮೆ ಮೂರು ನಾಲ್ಕು ಪ್ರಬಂಧಗಳು ಒಂದಾಗಿ ಹೋಸ ಸಂಕಥನವೊಂದು ಕೂಡ ರೂಪುಗೊಂಡಿದೆ. ಸತ್ಯನಾರಾಯಣ ತಮ್ಮ ಅನುಭವಗಳನ್ನು ಮನುಷ್ಯನ ದಿನನಿತ್ಯದ ಬದುಕಿನ ಮತ್ತು ಇತರರೊಂದಿಗಿನ ಒಡನಾಟದ ಕೌತುಕಗಳು, ವಿಪರ್ಯಾಸಗಳು, ವೈಚಿತ್ರ್ಯಗಳ ಭಾಗವಾಗಿಯೇ ನೋಡುವುದರಿಂದ ಇದು ಸಾಧ್ಯವಾಗಿದೆ.
©2024 Book Brahma Private Limited.