’ಜಗವೆ ದೇವನ ದೇಹ’ ಕೃತಿಯು ಲೇಖಕ ಚಿದಂಬರ ಬಂಡಗರ ಅವರ ಪ್ರಬಂಧ ಸಂಕಲನ. 11 ಪ್ರಬಂಧಗಳನ್ನು ಒಳಗೊಂಡಿದೆ. ಪ್ರಬಂಧಗಳು ಅರ್ಥವಂತಿಕೆಯಿಂದ ಶೋಭಿಸಿವೆ. ಕೃತಿಗೆ ಮುನ್ನುಡಿ ಬರೆದಿರುವ ಸಾಹಿತಿ ಚನ್ನಪ್ಪ ಕಟ್ಟಿ, ‘ಇಂದಿನ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಕಾಂಡ ಕೊರೆಯುವ ಹುಳುಗಳ ಹಾಗೆ ಇರುವ ಇತರ ಸಮಸ್ಯೆಗಳ ಮೇಲೂ ಬೆಳಕು ಚೆಲ್ಲಿದ್ದಾರೆ. ಮಕ್ಕಳನ್ನು ’ಅಂಕವೀರ’ ರನ್ನಾಗಿಸುವ ಹಂಬಲದ ಪಾಲಕರು ಹಾಗೂ ಹೊರ ಒಳಗುಗಳು ಭಿನ್ನವಾಗಿರುವ ಶಿಕ್ಷಕರು-ಇವರಿಬ್ಬರ ಮಧ್ಯೆ ಬಾಲಕರ ವ್ಯಕ್ತಿತ್ವ ಅರಳದೆ ಹೋಗುವ ಬಿಕ್ಕಟ್ಟಿನ ಕುರಿತು ಈ ಪ್ರಬಂಧ ಚರ್ಚಿಸುತ್ತದೆ. ‘ಗುರುಶಕ್ತಿ’ ಎನ್ನುವ ಪ್ರಬಂಧವು ಗುರುವಿನ ವಿರಾಟ್ ದರ್ಶನವನ್ನು ಮಾಡಿಸುತ್ತದೆ. ಗುರು ಎನ್ನುವುದು ಒಂದು ಅಕ್ಷಯವಾದ ಶಕ್ತಿ. ಎಷ್ಟೆಲ್ಲಾ ಬಳಕೆಯ ನಂತರವೂ ಅದು ಕ್ಷೀಣಿಸುವುದಿಲ್ಲ. ಶಕ್ತಿಯ ಕಣಗಳು ಗುಣಲಬ್ಧಗೊಂಡು ಎಷ್ಟೇ ಸಂಖ್ಯೆಯಾದರೂ ಅದರ ಶಕ್ತಿ ಕುಗ್ಗುವುದಿಲ್ಲ’ ಎನ್ನುವ ಲೇಖಕನ ಮಾತಿನಲ್ಲಿ ಗುರುವಿನ ಅಪಾರ ಶಕ್ತಿಯ ಬಗೆಗೆ ಗೌರವಿಸುವುದನ್ನು ಕಾಣುತ್ತೇವೆ. ‘ಬದ್ದತೆಯ ಬದುಕಿನ ಮಾದರಿಗಳು’ ಎನ್ನುವ ಪ್ರಬಂಧವೂ ಇಂಥದ್ದೇ ಕಾಳಜಿಯಲ್ಲಿ ರಚಿತವಾಗಿವೆ. ಸರ್ದಾರ ಪಟೇಲ, ಬಿ. ಆರ್. ಅಂಬೇಡ್ಕರ್, ಮಹಾತ್ಮ ಗಾಂಧೀಜಿ, ಭಗತ್ ಸಿಂಗ್, ಲಾಲಬಹಾದ್ದೂರ ಶಾಸ್ತ್ರೀ ಮುಂತಾದ ಧೀಮಂತರ ಬದ್ದತೆಯ ಅಖಂಡ ವ್ಯಕ್ತಿತ್ವವನ್ನು ಚಿತ್ರಿಸುವ ಮೂಲಕ ಯುವಜನಾಂಗಕ್ಕೆ ಮಾದರಿಯನ್ನು ಪೂರೈಸುತ್ತವೆ. ‘ಹೋರಾಟದ ಸವ್ಯಸಾಚಿಗಳು’ ಪ್ರಬಂಧವು ಮಾರ್ಗರೂಪಿ ಇತಿಹಾಸದ ನಿರೂಪಣೆಯ ಆಚೆಗೆ ಉಳಿದುಕೊಂಡಿರುವ ಕಿರು ದ್ವೀಪಗಳಂತಹ ಚೇತನಗಳಾದ ವಾಸುದೇವ ಬಲವಂತ ಫಡಕೆ, ನಾರಾಯಣ ಮಹಾದೇವ ಡೋಣಿ, ಕಾಶೀಬಾಯಿ ದೇಸಾಯಿ, ಪದ್ಮಾವತಿಬಾಯಿ ಬುರ್ಲಿ ಮುಂತಾದವರ ಪುಟ್ಟ ಪುಟ್ಟ ಜೀವನ ಚರಿತ್ರೆಗಳು `ಸಂಗ್ರಾಮ’ ಸಮಗ್ರ ಚಿತ್ರಣ ಕಟ್ಟಿಕೊಳ್ಳುವಲ್ಲಿ ಸಹಕಾರಿಯಾಗುತ್ತವೆ. ಮುಂಚೂಣಿಯ ನಾಯಕರನ್ನೇ ಕೇಂದ್ರದಲ್ಲಿರಿಸಿ ರಚನೆಗೊಳ್ಳುವ ಪಾರಂಪರಿಕ ಚರಿತ್ರೆಗಿಂತ ಭಿನ್ನವಾಗಿ ಇಂಥ ಕಿರು ಚರಿತ್ರೆಗಳು ಆ ಕಾಲಘಟ್ಟದ ಸಮಗ್ರ ಚರಿತ್ರೆಯನ್ನು ನಿರ್ವಹಿಸಿಕೊಳ್ಳಲು ಸಹಕಾರಿಯಾಗುತ್ತವೆ’ ಎನ್ನುತ್ತಾರೆ.
ಲೇಖಕ ಚಿದಂಬರ ಮಲ್ಲಣ್ಣ ಬಂಡಗರ ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ದೇವರನಾವದಗಿಯವರು. ಎಂ.ಎ, ಬಿ.ಇಡಿ. ಕೆ.ಇ.ಎಸ್ ಪದವೀಧರರು. 2010 ರಲ್ಲಿ ಕೆ.ಇ.ಎಸ್ ಪರೀಕ್ಷೆ ಪಾಸ್ ಮಾಡಿ ಸರಕಾರಿ ಪೌಢ್ರ ಶಾಲಾ ಮುಖ್ಯ ಗುರುಗಳಾಗಿ ನೇಮಕರಾದರು. ಪ್ರಸ್ತುತ ಇಂಡಿ ತಾಲೂಕಿನ ಕ್ಷೇತ್ರ ಸಮನ್ವಯ ಅಧಿಕಾರಿಗಳಾಗಿದ್ದಾರೆ. ಕೃತಿಗಳು: ಜಗವೆ ದೇಹನ ದೇಹ, ನೆಲದ ನಕ್ಷತ್ರಗಳು, ರಂಗಕರ್ಮಿ ಸೋಮಶೇಖರ: ಬದುಕು -ಬಣ್ಣ (ರಂಗಕರ್ಮಿಯೊಬ್ಬರ ಜೀವನ ಕೃತಿ ). ...
READ MORE