ದಿ. ಬಿ.ಆರ್. ವಾಡಪ್ಪಿ ಅವರು ನವೋದಯ ಕಾಲದ ಲಲಿತ ಪ್ರಬಂಧಕಾರರು. ಕೆಲವು ಪ್ರಬಂಧಗಳು ಬೇರೆ ಬೇರೆ ಸಂಚಿಕೆಗಳಲ್ಲಿ ಪ್ರಕಟಗೊಂಡಿವೆ. ಶ್ರೀರಂಗ, ಬೇಂದ್ರೆ ಅವರ ಒಡನಾಟವಿದ್ದ ವಾಡಪ್ಪಿ ಅವರು ಕಥೆ-ಕವನಗಳನ್ನೂ ಬರೆದಿದ್ದಾರೆ. ಆದರೆ, ಅವರು ಗುರುತಿಸಿಕೊಂಡಿದ್ದು ಮಾತ್ರ ಉತ್ತಮ ಪ್ರಬಂಧಕಾರರು ಎಂದು. ಇಲ್ಲಿಯ ಪ್ರಬಂಧಗಳಿಗೆ ಕಾವ್ಯದ ಚಿತ್ರಶಕ್ತಿ ಇದೆ. ಅನುಭವವೊಂದನ್ನು ಸೊಗಸಾದ ಚೌಕಟ್ಟಿನೊಳಗಿಟ್ಟು ತೋರಿಸುತ್ತದೆ ಎಂದು ಮುನ್ನುಡಿ ಬರೆದ ಸಾಹಿತಿ ಎಸ್. ದಿವಾಕರ ಅಭಿಪ್ರಾಯಪಟ್ಟಿದ್ದಾರೆ. ಬಿ.ಆರ್. ವಾಡಪ್ಪಿ ಅವರ ಸಮಗ್ರ ಲಲಿತ ಪ್ರಬಂಧಗಳನ್ನು ಅವರ ಪುತ್ರರಾದ ರಂಗನಾಥ ವಾಡಪ್ಪಿ ಹಾಗೂ ಶ್ರೀನಿವಾಸ ವಾಡಪ್ಪಿ ಸಂಪಾದಿಸಿದ್ದಾರೆ.