ಬಹುತ್ವ ಸಂಸ್ಕೃತಿಗಳ ಶೋಧಿಸುವ ಹೊಸ ಹಾದಿ. ವರ್ತಮಾನದ ಆಚರಣೆಗಳನ್ನು ಅರಿತುಕೊಳ್ಳಲು ಭೂತಕಾಲದ ಬೆಳಕು ಬೇಕು, ಹಾಗೆಯೇ ಭೂತಕಾಲವನ್ನು ವರ್ತಮಾನದ ಬೆಳಕಲ್ಲಿ ಅರಿತುಕೊಳ್ಳಬೇಕು ಎನ್ನುವ ಡಿ.ಡಿ.ಕೊಸಂಬಿಯವರ ಮಾತಿನಂತೆ ಬುಡಕಟ್ಟು ಸಂಸ್ಕೃತಿಯ ಅಸ್ಮಿತೆಯನ್ನು, ಅದರ ಮೌಲ್ಯ ಮತ್ತು ಆದರ್ಶವನ್ನು ಸಮಕಾಲೀನ ನೆಲೆಯಲ್ಲಿ ಅಧ್ಯಯನ ನಡೆಸುವ ಮೂಲಕ ಅಲ್ಲಿನ ಸಾಂಸ್ಕೃತಿಕ ಲೋಕವನ್ನು ಅರಿತುಕೊಳ್ಳಲು ಸಾಧ್ಯ. ಆಧುನಿಕತೆಯ ಹಲವು ಸವಾಲುಗಳ ನಡುವೆ ಬುಡಕಟ್ಟು ಸಂಸ್ಕೃತಿಯನ್ನು ಅಧ್ಯಯನ ಮಾಡುವುದು ಒಂದು ಸವಾಲಿನ ಕೆಲಸ. ಬುಡಕಟ್ಟು ಸಮುದಾಯಗಳ ಬದುಕಿನಾಳದಲ್ಲಿ ಹುದುಗಿರುವ ಹಲವಾರು ಸಂಗತಿಗಳನ್ನು ಶೋಧಿಸಿ ಹೊರತೆಗೆಯಬೇಕಾದದ್ದು ಅನಿವಾರ್ಯವಾಗಿದೆ. ಇಲ್ಲವಾದಲ್ಲಿ ಪರಂಪರೆಯ ಪ್ರಜ್ಞೆ ತನ್ನತನವನ್ನು ಕಳೆದುಕೊಳ್ಳುವುದರಲ್ಲಿ ಸಂಶಯವಿಲ್ಲ. ಇಂಥ ಸಂದಿಗ್ದ ಸಂದರ್ಭದಲ್ಲಿ ಬುಡಕಟ್ಟು ಜನರ ಅನುಭವ ಸಂಪತ್ತಿನಿಂದ ರೂಪುಗೊಂಡಿರುವ ಬದುಕಿನ ಕ್ರಮಗಳಲ್ಲಿ ಒಂದು ಮೌಲ್ಯವಿದೆ. ಒಂದು ವಿವೇಕವಿದೆ ಎಂದು ಅರಿತು ಅವರ ಆಚಾರ, ವಿಚಾರ ಮತ್ತು ನಂಬಿಕೆಗಳ ಬಗ್ಗೆ ಅಧ್ಯಯನ ನಡೆಸಿ ಈ ಕೃತಿ ಹೊರತಂದಿರುವ ಡಾ.ಡಿ.ಎಂ.ಪ್ರಹ್ಲಾದ್ ಅವರ ಶ್ರಮ ಅಭಿನಂದನಾರ್ಹ. ಈ ಹೊತ್ತಿನ ಪಲ್ಲಟಗೊಂಡಿರುವ ಸಮಾಜಕ್ಕೆ ದೇಸೀ ಚಿಂತನೆ ಮತ್ತು ಸ್ಥಳೀಯ ಜ್ಞಾನ ಪರಂಪರೆಗಳ ದೈವಾರಾಧನೆ, ಪಶುಪಾಲನೆ, ಕೃಷಿ, ಜಾನಪದ ಕಲೆ ಮೊದಲಾದ ವಿಷಯವನ್ನೊಳಗೊಂಡ ಇಲ್ಲಿನ ಪ್ರತಿಯೊಂದು ಲೇಖನವೂ ತನ್ನದೇ ಆದ ಅಧ್ಯಯನದ ಆಶಯ ಮತ್ತು ಅಭಿವ್ಯಕ್ತಿಯ ನೆಲೆಯಲ್ಲಿ ಗಮನಾರ್ಹ ದಾಖಲೆಗಳಾಗಿವೆ. ವಿಸ್ಮೃತಿಗೆ ಒಳಗಾಗುತ್ತಿರುವ ಆಧುನಿಕ ಸಮುದಾಯಕ್ಕೆ ಪಾರಂಪರಿಕ ಬದುಕಿನ ಬಗೆ ಬಗೆಯ ಆಚರಣೆಗಳೊಳಗಿನ ಜ್ಞಾನ ಸಂಪತ್ತಿನ ಮಹತ್ವವನ್ನು ಅಧ್ಯಯನಕ್ಕೊಳಪಡಿಸುವ ಅವಶ್ಯಕತೆ ಈ ಹೊತ್ತಿನ ಅಗತ್ಯ. ತಂಗಡಿ ಗಿಡದ ಮಹತ್ವ, ದೇಸೀ ಹಣ್ಣುಗಳು, ಮತ್ತು ಜಲದ ಮಹತ್ವ ಲೇಖನಗಳು ಬುಡಕಟ್ಟು ಸಮುದಾಯದವರಿಗಿದ್ದ ನಿಸರ್ಗ ವಿವೇಕವನ್ನು ಮನನಮಾಡಿಕೊಡುವಲ್ಲಿ ಸಫಲವಾಗಿವೆ.. ಆದಿವಾಸಿ ಸಮುದಾಯಗಳ ಕೊಡುಕೊಳುವಿಕೆಯ ಕೂಡು ಸಂಸ್ಕೃತಿಯನ್ನು, ಅಲ್ಲಿ ರೂಪುಗೊಂಡ ಸೌಹಾರ್ದತೆಯ ನೆಲೆಗಳನ್ನು ಅನುಸರಿಸುತ್ತಿರುವ ಬುಡಕಟ್ಟು ಸಂಸ್ಕೃತಿಯ ಬಹುತ್ವವನ್ನು ಸಮಕಾಲೀನ ಸಂದರ್ಭಕ್ಕೆ ಒಗ್ಗಿಸಿ ಕೊಳ್ಳುವ ಅನಿವಾರ್ಯತೆಯನ್ನು ಇಲ್ಲಿನ ಲೇಖನಗಳ ಹಿನ್ನಲೆಯಲ್ಲಿ ಕಾಣಬಹುದು. ಒಟ್ಟಾರೆ ಆಧುನಿಕತೆಯ ವೈಪರೀತ್ಯಗಳಿಂದ ಕೀಳಿರಿಮೆಗೆ ಒಳಗಾದ ಬುಡಕಟ್ಟು ಸಮುದಾಯಗಳಿಗೆ ತನ್ನದೇ ಆದ ಸಾಂಸ್ಕೃತಿಕ ವೈಶಿಷ್ಟ್ಯ ಮತ್ತು ಅನನ್ಯತೆ ಇದೆ ಎನ್ನುವುದನ್ನು ಮನಗಾಣಿಸುವ ಕೆಲಸವನ್ನು ಕಾಡು ಹಾದಿಯ-ಹಾಡು ಪಾಡು ಕೃತಿ ಮೂಲಕ ಲೇಖಕರು ಕಟ್ಟಿಕೊಟ್ಟಿರುವುದನ್ನು ಕಾಣಬಹುದು. ಡಾ.ಜೆ.ಕರಿಯಪ್ಪ ಮಾಳಿಗೆ.
©2024 Book Brahma Private Limited.