ಲೇಖಕ ಎನ್ ಎಸ್. ಶ್ರೀಧರ ಮೂರ್ತಿ ಅವರ ಪ್ರಬಂಧ ಸಂಕಲನ ಕೃತಿ ʻಅಂದದ ಹೆಣ್ಣಿನ ನಾಚಿಕೆʼ. ಪುಸ್ತಕದ ಮುನ್ನುಡಿಯಲ್ಲಿ ಲೇಖಕ ಕೆ. ಸತ್ಯನಾರಾಯಣ ಅವರು, “ಗೆಳೆಯರಾದ ಶ್ರೀಧರ ಮೂರ್ತಿಯವರ ಇಲ್ಲಿಯ ಲೇಖನಗಳ ಮರ್ಮವನ್ನು ಹಿಡಿದು ಪ್ರತಿಯೊಬ್ಬ ಓದುಗನು ಪುಸ್ತಕದಲ್ಲಿ ಅಡಕವಾಗಿರುವ ಪರಿಕಲ್ಪನೆಗಳು ಮತ್ತು ವಿದ್ಯಮಾನಗಳ ಸುತ್ತ ಮುತ್ತ ತನ್ನದೇ ನೆನಪುಗಳ ಮೂಲಕ ಇನ್ನೊಂದು ಪುಸ್ತಕವನ್ನು ಕಟ್ಟಿಕೊಳ್ಳುತ್ತಾನೆ. ಎರಡು ಮೂರು ತಲೆಮಾರುಗಳ ಓದುಗರಿಗೂ ಹೀಗೇ ಆಗುತ್ತದೆ. ಕನ್ನಡ ಚಲನಚಿತ್ರ ಲೋಕ ನಮ್ಮೆಲ್ಲರ ಭಾವನಾತ್ಮಕ ಬೆಳವಣಿಗೆಯ ಅವಿಭಾಜ್ಯ ಅಂಗವೇ ಆಗಿರುವುದರಿಂದ ಈ ರೀತಿಯ connection (ಸಂಬಂಧ) ಸಾಧ್ಯವಾಗುತ್ತದೆ. ಇಂತಹ ಸಂಬಂಧಗಳನ್ನು ಉದ್ದೀಪಿಸುವ ಲೇಖಕರ ಬಗ್ಗೆ ಕೃತಜ್ಞತೆ ಮೂಡುತ್ತದೆ. ಚಿತ್ರರಂಗದ ಬಗ್ಗೆ ಬರೆಯುವಾಗ ಓದುಗರಿಗೆ ಎಷ್ಟು ರೋಚಕತೆ ನೀಡಬಹುದು ಎಂಬ ಕಡೆಗೇ ಬಹುಪಾಲು ಲೇಖಕರ ಗಮನವಿರುತ್ತದೆ. ಆದರೆ ಶ್ರೀಧರ ಮೂರ್ತಿಯವರ ಉದ್ದೇಶ GLAMOROUS ಲೋಕವನ್ನು DEGLASMOURISE ಮಾಡುವುದು. ಹೀಗೆ ಮಾಡುವುದರ ಹಿಂದೆ ಶ್ರೀಧರ ಮೂರ್ತಿಯವರ ವ್ಯಕ್ತಿತ್ವ, ಸ್ವಭಾವ ಕೂಡ ಕೆಲಸ ಮಾಡಿದಂತಿದೆ. ತನ್ನ ವ್ಯಕ್ತಿತ್ವವನ್ನು ಮುಂದೆ ಮಾಡಿಕೊಳ್ಳುವ, ಪ್ರತಿಷ್ಟಾಪಿಸುವ, ತನ್ನ ಸುತ್ತಲೇ ಒಂದು ಅಧಿಕಾರ-ಪ್ರಭಾವದ ವಲಯವನ್ನು ಪ್ರಜ್ಞಾಪೂರ್ವಕವಾಗಿ ಕಟ್ಟಿಕೊಳ್ಳುವ ಹೊಸ ತಲೆಮಾರಿನ ಬಹುಪಾಲು ಪತ್ರಕರ್ತರ ಸ್ವಭಾವ-ಸ್ವರೂಪವನ್ನು ನಾನು ಶ್ರೀಧರ ಮೂರ್ತಿಯವರಲ್ಲಿ ಕಂಡಿಲ್ಲ. ದಾಢಸೀ ವ್ಯಕ್ತಿತ್ವ ಅವರದಲ್ಲ. ಇಂತಹ ಸ್ವಭಾವದ ಕನ್ನಡ ಪತ್ರಿಕಾಲೋಕದ ಉತ್ತಮ ಮಾದರಿಗಳೆಂದರೆ ಹಿಂದಿನ ತಲೆಮಾರಿನ ಈಶ್ವರಯ್ಯ, ಜಿ.ಎಸ್.ಸದಾಶಿವ, ಜಿ.ಎನ್. ರಂಗನಾಥ ರಾವ್ ಇಂತಹವರು. ಇನ್ನು ಒಂದು ಅಂಶವನ್ನು ಇಲ್ಲಿ ಪ್ರಸ್ತಾಪಿಸ ಬೇಕು. ಚಿತ್ರರಂಗದ ಒಳ ಪ್ರಪಂಚದ ದೀರ್ಘಕಾಲದ ಅನುಭವವಿದ್ದರೂ ಶ್ರೀಧರ ಮೂರ್ತಿ ಹೊರಗಿನವರಂತೆಯೇ ವಸ್ತುನಿಷ್ಠ ಮಾಧ್ಯಮದ ವಿದ್ಯಾರ್ಥಿಯಂತೆಯೇ ಬರೆಯುತ್ತಾರೆ. ಇಲ್ಲೆಲ್ಲ ಅವರು ಕೇವಲ ಪತ್ರಕರ್ತರು ಇತಿಹಾಸಕಾರರು ಮಾತ್ರವಲ್ಲ ಸಾಹಿತ್ಯ ವಿಮರ್ಶಕ ಧೋರಣೆ ವ್ಯಕ್ತಿತ್ವವನ್ನು ಉಳ್ಳವರು” ಎಂದು ಹೇಳಿದ್ದಾರೆ.
ಎನ್.ಎಸ್.ಶ್ರೀಧರಮೂರ್ತಿ ಮಂಗಳೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಚಿನ್ನದ ಪದಕ ಮತ್ತು ರ್‍ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿಯನ್ನು ಪಡೆದವರು. ಉಪನ್ಯಾಸಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಇವರು 'ಮಲ್ಲಿಗೆ' ಮಾಸಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಬಂದು ಕಳೆದ ಎರಡು ದಶಕದಿಂದ ಸಾಂಸ್ಕೃತಿಕ ಪತ್ರಿಕೋದ್ಯಮವನ್ನು ಉಳಿಸುವಲ್ಲಿ ವಿವಿಧ ಪತ್ರಿಕೆಗಳ ಮೂಲಕ ಶ್ರಮಿಸುತ್ತಿದ್ದಾರೆ. ಚಲನಚಿತ್ರ ಇತಿಹಾಸದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಇವರು ಸಾಹಿತ್ಯ ಮತ್ತು ಆಧ್ಯಾತ್ಮ ಕ್ಷೇತ್ರದಲ್ಲಿಯೂ ಕೆಲಸ ಮಾಡಿದ್ದಾರೆ. ‘ಸಿಂಹಾವಲೋಕನ, ನಗುವ ನಯನ ಮಧುರ ಮೌನ, ಮಂಜುಳಾ ಎಂಬ ಎಂದೆಂದೂ ಮರೆಯದ ಹಾಡು, ಸಾಹಿತ್ಯ ಸಂವಾದ, ಹಾಡು ಮುಗಿಯುವುದಿಲ್ಲ, ಸಿನಿಮಾ ಎನ್ನುವ ನಾಳೆ’ ಅವರ ಪ್ರಮುಖ ಕೃತಿಗಳು. ಕನ್ನಡ ಚಿತ್ರಗೀತೆಗಳ ಸಾಂಸ್ಕೃತಿಕ ...
READ MORE