ನಮ್ಮಮ್ಮ ನಮ್ಮೂರಿನ ಫ್ಲಾರೆನ್ಸ್ ನೈಟಿಂಗಲ್-ಕೃತಿಯು ಲೇಖಕ ಸಿ.ಜಿ. ವೆಂಕಟೇಶ್ವರ ಅವರ ಪ್ರಬಂಧಗಳ ಸಂಕಲನ. ವ್ಯಕ್ತಿ,ಸಂದರ್ಭ ಸನ್ನಿವೇಶಗಳನ್ನು ಸರಳವಾಗಿ ನಿರ್ಮಿಸಿರುವ ಸೃಜನಶೀಲ ಬರವಣಿಗೆ ಇರುವ ಈ ಪುಸ್ತಕ ಒಟ್ಟು 35 ಪ್ರಬಂಧಗಳನ್ನು ಒಳಗೊಂಡಿದೆ. ಜೀವನದ ಅನುಭವಗಳನ್ನು ಬರಹರೂಪಕ್ಕೆ ಇಳಿಸಿ ಬದುಕಿನ ಸೂಕ್ಷ್ಮಗಳನ್ನು ಸಮಗ್ರವಾಗಿ ಚಿತ್ರಿಸಿದಂತೆ ಇದೆ. ಈ ಹೊತ್ತಿಗೆಯ ಎಲ್ಲ ಪ್ರಬಂಧಗಳು ಓದುಗರ ಮನಸ್ಸಿಗೆ ಸುಲಭವಾಗಿ ತಲುಪಬಲ್ಲವು.
ನಮ್ಮಮ್ಮ ನಮ್ಮೂರಿನ ಫ್ಲಾರೆನ್ಸ್ ನೈಟಿಂಗಲ್: ಕೃತಿ ವಿಮರ್ಶೆ
ನಾವು ನಮ್ಮ ನಿತ್ಯ ಜೀವನದಲ್ಲಿ ಕಂಡುಂಡ ಅನುಭವಗಳಿಂದ ಪಕ್ವಗೊಂಡ ಆಲೋಚನೆಗಳು ಅಭಿವ್ಯಕ್ತಿಗಳನ್ನು ಬೆಸೆದ ಭಾವ ಲಹರಿಗಳನ್ನು ಬರಹರೂಪಕ್ಕೆ ಇಳಿಸುವ ವಿಧಾನಗಳಲ್ಲಿ ಪ್ರಬಂಧವೂ ಕೂಡ ಒಂದು ಸಾಹಿತ್ಯದ ಪ್ರಕಾರ.. ವ್ಯಕ್ತಿಯ ಅಥವಾ ಲೇಖಕರ ವೈಚಾರಿಕ ಆಲೋಚನೆಗಳನ್ನು ಓದುಗರಿಗೆ ಸರಳ ನಿರೂಪಣಾ ಶೈಲಿಯಲ್ಲಿ ತಲುಪುವ ಗದ್ಯ ರೂಪದ ಬರವಣಿಗೆಗಳೇ ಈ ಪ್ರಬಂಧಗಳು ಅದರಲ್ಲೂ ಲಲಿತಪ್ರಬಂಧಗಳು ಭಾಷೆ ಮತ್ತು ಭಾವಗಳ ಲಾಲಿತ್ಯಗಳಂತೆ ನಿರೂಪಣಾ ಶೈಲಿಯಲ್ಲಿ ನವಿರಾದ ಹಾಸ್ಯ ಬೆಸೆದ ಸಾಲುಗಳನ್ನು ಈ ಪ್ರಬಂಧಗಳಲ್ಲಿ ಕಾಣಬಹುದಾಗಿದೆ."ನಮ್ಮಮ್ಮ ನಮ್ಮೂರಿನ ಫ್ಲಾರೆನ್ಸ್ ನೈಟಿಂಗೇಲ್"ಎಂಬ "ಲಲಿತಪ್ರಬಂಧ"ದ ಹೊತ್ತಿಗೆ ಒಟ್ಟು 35 ಪ್ರಬಂಧಗಳನ್ನು ಒಳಗೊಂಡಿದೆ.ಸೃಜನಶೀಲ ಬರಹಗಾರರು ಶಿಕ್ಷಕರು ಆದ "ಸಿ ಜಿ ವೆಂಕಟೇಶ್ವರ" ಈ ಹೊತ್ತಿಗೆಯ ಲೇಖಕರು.
ಲೇಖಕರು ತಮ್ಮದೇ ಬದುಕಿನಲ್ಲಿ ನಡೆದ ಅನೇಕ ಘಟನೆಗಳಿಗೆ ಸಾಕ್ಷಿಯಾದ ಬರಹಗಳಲ್ಲಿ ಸಾಮಾಜಿಕ ಕಳಕಳಿ, ವೃತ್ತಿಪರತೆ, ಸಂಸ್ಕೃತಿ,ಸಂಸ್ಕಾರ,ಅನುಕಂಪ, ನೋವು, ನಲಿವು, ಪ್ರೀತಿ, ಪ್ರಕೃತಿ ಸೌಂದರ್ಯ,ಸಹಕಾರ, ತಾಯಿ ಮಮತೆ, ವಾತ್ಸಲ್ಯ, ಮೌಲ್ಯ ಗಳು,ಜೀವನೋತ್ಸಾಹಗಳ ನವಿರಾದ ನಿರೂಪಣೆಗಳು ಅನುಭವದ ಮೂಸೆಯಿಂದ ಅರಳಿದ ವೈಚಾರಿಕತೆಯನ್ನು ಓದುಗರ ಮನಸ್ಸಿಗೆ ಸುಲಭವಾಗಿ ತಲುಪಿಸುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ.ಆಸ್ತಿಕವಾದಗಳಲ್ಲಿನ ಸಾರತೆ,ಪೂಜೆ, ಧ್ಯಾನ ಈ ಎಲ್ಲ ವಿಧಾನಗಳಿಂದ ಮನಸ್ಸನ್ನು ಚಂಚಲತೆಯಿಂದ ಮುಕ್ತಗೊಳಿಸಬಹುದೆಂಬ ವಿಚಾರಗಳು ಹಾಗೂ ಯೋಗಗಳಿಂದ ಮಾನಸಿಕ ಆರೋಗ್ಯ ವನ್ನು ದುರ್ಬಲ ಮನಸ್ಸಿನ ವರ್ಗಗಳಿಗೆ ಕಿವಿಮಾತುಗಳಂತೆ ಸ್ಪೂರ್ತಿಯನ್ನು ತುಂಬಬಲ್ಲ ಕಾಳಜಿಗಳು ಈ ಕೃತಿಯ ಉದ್ದಕ್ಕೂ ವ್ಯಕ್ತಗೊಂಡಿರುವುದು ವಿಶೇಷ.
ಲೇಖಕರು ಮೂಲತಃ ಹಳ್ಳಿಯ ಹಿನ್ನಲೆಯವರು ಗ್ರಾಮೀಣ ಸೊಗಡಿನ ಆಯಾಮಗಳನ್ನು ಕಂಡುಂಡ ಅನುಭವಗಳಲ್ಲಿ ವ್ಯಕ್ತಗೊಂಡ ಹಳ್ಳಿಯ ಸೌಂದರ್ಯವನ್ನು ವಿವರಿಸಿದ ನಿದರ್ಶನಗಳು ಅನನ್ಯವೆನಿಸಿವೆ.ಹಸಿರು ಹೊದ್ದ ಸೀಮೆಗಳು, ನೆರೆಹೊರೆ,ಕುಟುಂಬ ಲೇಖಕರ ಬದುಕಿನಲ್ಲಿ ಅಪ್ಯಾಯಮಾನವಾಗಿ ಉಳಿದಿವೆ.ಹಳ್ಳಿಯ ಜನರ ಜೀವನಶೈಲಿಯಲ್ಲಿ ಬದುಕನ್ನು ಸಾರ್ಥಕವೆಸಿಸುವ ಕ್ಷಣಗಳೇ ಹೆಚ್ಚು , ತೃಪ್ತಿಯ ಬದುಕೆಂದರೆ ಅದು ಹಳ್ಳಿಜನರ ರೈತಾಪಿ ವರ್ಗದ ಶ್ರಮದ ಫಲಗಳೆಂದು ಪರೋಕ್ಷವಾಗಿ ಬೆಂಬಲಿಸಿದ ಮಾತುಗಳು ಅವರ ಹಿನ್ನೆಲೆಯನ್ನು ಬಹಳ ಗಟ್ಟಿಯಾಗಿ ಸಮರ್ಥಿಸಿಕೊಳ್ಳುತ್ತವೆ. ಸಂಸ್ಕೃತಿ ಸಂಪ್ರದಾಯಗಳನ್ನು ಮೈಗೂಡಿಸಿಕೊಂಡ ನಿದರ್ಶನಗಳನ್ನು ಇಲ್ಲಿ ಸ್ಮರಿಸಬಹುದು."ಮಗಳಲ್ಲ ಅಮ್ಮ"ಎಂಬ ಬರಹದಲ್ಲಿ ತಂದೆ ಮಕ್ಕಳ ಪರಸ್ಪರ ಪ್ರೀತಿ ಕಾಳಜಿಯು ಅನನ್ಯವಾಗಿಯು ಹಿರಿಯರ ಮಾತನ್ನು ಗೌರವಿಸಬೇಕೆಂಬ ಪ್ರತ್ಯಕ್ಷ ನಿಲುವನ್ನು ಇಲ್ಲದಿದ್ದರೆ ಕೇಡಾಗಬಹುದೆಂಬ ಎಚ್ಚರಿಕೆ ಯನ್ನು ಬಿಂಬಿಸುವುದರ ಮೂಲಕ ಕಿವಿಮಾತನ್ನು ಇಲ್ಲಿ ಹೇಳಬಯಸಿದ್ದಾರೆ.ಇಂತಹ ಅನೇಕ ಬರಹಗಳು ಈ ಕೃತಿಯಲ್ಲಿ ಇವೆ.ತಮ್ಮದೇ ಜೀವನದ ಅನುಭವಗಳ ಆಳಕ್ಕಿಳಿದು ಬದುಕಿನ ಸೂಕ್ಷ್ಮಗಳನ್ನು ಎಳೆಯಾಗಿ ಬಿಡಿಸಿ ತಮ್ಮ ಚಿಂತನೆಯ ಕೋಲ್ಮಿಂಚನ್ನು ಬರಹರೂಪದಲ್ಲಿ ಹರಿಸಿದ್ದಾರೆ.ಸಮಾಜದ ಪ್ರಸ್ತುತ ವಿದ್ಯಾಮಾನಗಳನ್ನು ಸಾಹಿತ್ಯ ಪ್ರಕಾರದ ಆಯಾಮಗಳಿಗೆ ಒಳಪಡಿಸಿ ಓದುಗರಿಗೆ ತಲುಪಿಸುವ ನಿಟ್ಟಿನಲ್ಲಿನ ಇವರ ಕಾರ್ಯ ನಿಜಕ್ಕೂ ಶ್ಲಾಘನೀಯ.ಗೆಳೆಯರೊಟ್ಟಿಗಿನ ಸಾಲು ಸಾಲು ಸವಿನೆನಪುಗಳು ಸಿಹಿಹೂರಣದಂತೆ ಆಗಾಗ ಸವಿಯಲು ಮನಸಿಗೆ ಮುದ ನೀಡುತ್ತ ಬದುಕಿನಲ್ಲಿ ಮರೆಯಲಾಗದ ಘಟನೆಗಳು ಮನಸ್ಸಿನಲ್ಲಿ ಬೇರೂರಿದ ಸಂದರ್ಭಗಳನ್ನು ಕಲೆಹಾಕಿ ನೆನಪುಗಳ ಮೆರವಣಿಗೆ ಬದುಕಿಗೆ ಮೆರುಗುನೀಡುವಂತಹ ಲೇಖಕರ ಮಾತು ಇಲ್ಲಿ ಅಭಿನಂದನಾರ್ಹ.
"ನನ್ನಮ್ಮ ನಮ್ಮೂರಿನ ಫ್ಲಾರೆನ್ಸ್ ನೈಟಿಂಗೇಲ್"ಕೃತಿಯಲ್ಲಿ ಹೆಚ್ಚು ಗಮನ ಸೆಳೆಯುವ ಬರಹವೆಂದರೆ ಕೃತಿಯ ಶೀರ್ಷಿಕೆ ಯನ್ನು ಹೊಂದಿದ ಬರಹ.ತನ್ನ ಬದುಕನ್ನು ಕಟ್ಟಿಕೊಟ್ಟಿದ ತಾಯಿಯ ಬಗ್ಗೆ ಅಪಾರ ಗೌರವ ಕಾಳಜಿಯು ಈ ಬರಹದಲ್ಲಿ ಒಡಮೂಡಿದೆ. ತನ್ನ ಕುಟುಂಬ ಮಕ್ಕಳಿಗಾಗಿ ಬದುಕನ್ನೇ ಮುಡಿಪಾಗಿಡುವ ಮಮತೆಯ ಒಡಲು ಮತ್ತೊಬ್ಬರ ಸೇವೆ ಸಹಾಯಕ್ಕಾಗಿ ಸದಾ ಸಿದ್ದವಾಗಿರುವ ತನ್ನ ತಾಯಿಯನ್ನು ಲೇಖಕರು ನನ್ನಮ್ಮ ನಮ್ಮೂರಿನ ಫ್ಲಾರೆನ್ಸ್ ನೈಟಿಂಗೇಲ್ ಎಂದು ಬಣ್ಣಿಸಿರುವುದರಲ್ಲಿ ., ತಾಯಿಯ ಸೇವೆಗಳೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿರುತ್ತವೆ.
ಯಾವಾಗಲಾದರೂ ಸರಿ ಸಹಾಯಕೇಳಿ ಬರುವವರಿಗೆ ಮುಕ್ತವಾಗಿ ಉಪಕರಿಸುವ ಬದಲಾಗಿ ಏನೂ ಬಯಸದ ನಿಸ್ವಾರ್ಥ ಒಡಲಿಗೆ ನನ್ನ ನಮನಗಳು ಸಲ್ಲಲೇ ಬೇಕು.
ಮೂಲಸೌಕರ್ಯಗಳಿಲ್ಲದ ಊರಿನಲ್ಲಿ ಗರ್ಭಿಣಿಯರಿಗೆ ಸರಾಗವಾಗಿ ಹೆರಿಗೆಮಾಡಿಸುವ ತಾಯಿ ದೇವತೆಯಂತೆ ಬಿಂಬಿಸುತ್ತಾಳೆ.ಹೆರಿಗೆ ಎಂಬುದು ಹೆಣ್ಣಿಗೆ ಒಂದು ಪುನರ್ಜನ್ಮವಿದ್ದಂತೆ.. ತಾಯಿ ಮಗು ಆರೋಗ್ಯವಾಗಿ ಇರುವುದರ ಜೊತೆಗೆ ಸುಲಭವಾಗಿ ಹೆರಿಗೆ ಮಾಡಿಸುವ ಕೈಚಳಕ ಎಲ್ಲರಿಗೂ ಒಲಿಯುವುದೂ ಇಲ್ಲ.ಅಂತಹದೊಂದು ಕೈಚಳಕ ಈ ತಾಯಿಯಲ್ಲಿ ಇದ್ದದ್ದು ಅಪರೂಪ."ಪರೋಪಕಾರಾರ್ಥಂ ಇದಂ ಶರೀರಂ" ಎನ್ನುವ ಅರ್ಥವನ್ನು ಲೇಖಕರು ತನ್ನ ತಾಯಿಯಿಂದ ಕಲಿತುಕೊಂಡ ಪರಿಯನ್ನು ಕೂಡ ಇಲ್ಲಿ ಬಿಂಬಿಸಿದ್ದಾರೆ.
ಈ ಕೃತಿಯಲ್ಲಿನ ಎಲ್ಲಾ ಬರಹಗಳನ್ನು ಬಿಡಿ ಬಿಡಿಯಾಗಿ ದಿನಪತ್ರಿಕೆಯಲ್ಲಿ ನಾನಾಗಲೇ ಓದಿದ್ದುಂಟು., ಈಗ ಹಿಡಿಯಾಗಿ ಓದುವುದಕ್ಕೆ ಸಿಕ್ಕಿರುವುದು ಒಂದು ರೀತಿಯ ಸಂತೋಷ ತಂದಿದೆ.
ಸಮಾಜದಲ್ಲಿ ಉನ್ನತ ವ್ಯಕ್ತಿತ್ವದ ವ್ಯಕ್ತಿಗಳು ಎಲ್ಲರಿಗೂ ಆದರ್ಶಪ್ರಾಯರಾಗಿರುತ್ತಾರೆ. ಅವರ ಆದರ್ಶಗಳನ್ನ ತಮ್ಮದೇ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜದ ಉಳುಕುಗಳನ್ನು ತಿದ್ದಲು, ಎಲ್ಲರಿಗೂ ಸಾಮಾಜಿಕ ನ್ಯಾಯವನ್ನು ಒದಗಿಸುವ ನಿಟ್ಟಿನಲ್ಲಿ ಇರುವ ಬರಹಗಳು ಜಾಗೃತಿ ಯ ಸಂಕೇತವಾಗಿ ಕಂಡುಬಂದಿವೆ. ಆರ್ಥಿಕವಾಗಿ, ಸಾಮಾಜಿಕವಾಗಿ ,ಶೈಕ್ಷಣಿಕವಾಗಿ ಹಿಂದುಳಿದ, ಹಾಗೂ ಶೋಷಿತವರ್ಗಗಳ ಬಗ್ಗೆ ವಿಶೇಷ ಕಾಳಜಿಯನ್ನು ತೋರುವುದರ ಮೂಲಕ ಸಮಾಜಮುಖಿಯಾಗಿ ಆಲೋಚಿಸಿದ ಪರಿಯು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ.ಕವಿ ಸಿದ್ದಲಿಂಗಯ್ಯ, ದೇವನೂರು ಮಹಾದೇವ ತಮ್ಮ ಸಾಹಿತ್ಯದ ಮೂಲಕ ಶೋಷಿತ ವರ್ಗಗಳ ಬಗ್ಗೆ ದನಿಎತ್ತಿದ ನಿದರ್ಶನಗಳು ಸಹ ಇಲ್ಲಿ ಸಿಗುತ್ತವೆ.
ಈ ಕೃತಿಯಲ್ಲಿ ಬರುವ ಎಲ್ಲಾ ಬರಹಗಳನ್ನು ತಮ್ಮ ಬದುಕಿನ ಅನುಭವಗಳಿಂದ ಪಕ್ವಗೊಂಡ ಆಲೋಚನಾ ಲಹರಿಗಳನ್ನು ಚಿಂತನೆಯ ಓರೆಗಚ್ಚಿ ಅರ್ಥೈಸಲಾದ ಬದುಕಿನ ವ್ಯಾಖ್ಯಾನಗಳು, ಜೀವನೋತ್ಸಾಹ ತುಂಬುವ ಪ್ರಯತ್ನ ಗಳು, ನೊಂದ ಬದುಕಿಗೆ ಸಾಂತ್ವನಗಳು, ಹಾಗೂ ನಮ್ಮ ಸಾಮಾಜಿಕ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುವ ರೀತಿಗಳನ್ನು ತೆರೆದಿಡುತ್ತಾ ಹೋಗುತ್ತವೆ.ಸಾಮಾಜಿಕ ಚಿಂತನೆಯ ಕೌಶಲ್ಯಗಳ ಮೂಲಕ ಸಾಮಾಜಿಕ ನ್ಯೂನತೆಗಳಿಗೆ ಪರಿಹಾರಾತ್ಮಕ ಪ್ರತಿಕ್ರಿಯೆಗಳನ್ನು ಸೂಕ್ತ ರೀತಿಯಲ್ಲಿ ಒದಗಿಸುವುದರ ಮೂಲಕ ಈ ಕೃತಿಯಲ್ಲಿನ ಬರಹಗಳು ಉತ್ಕೃಷ್ಟವೆನಿಸುತ್ತವೆ.ಸರಳ ಹಾಗೂ ನವಿರಾದ ನಿರೂಪಣಾ ಶೈಲಿಯಲ್ಲಿ ಇರುವುದರಿಂದ ಸಹೃದಯ ಓದುಗರ ಮನಸ್ಸಿಗೆ ಸುಲಭವಾಗಿ ತಲುಪಿಸುವಲ್ಲಿ ಈ ಕೃತಿ ಯಶಸ್ವಿಯಾಗ ಬಲ್ಲದು.ಕನ್ನಡ ಸಾರಸ್ವತ ಲೋಕಕ್ಕೆ ಇಂತಹ ಕೃತಿಗಳ ಅವಶ್ಯಕತೆ ಇದೆ.ಸೊಗಸಾದ ಮುಖಪುಟ ವಿನ್ಯಾಸ ದೊಂದಿಗೆ ಅಕ್ಷರದೋಷಗಳನ್ನು ಕಾಣದ ಅಚ್ಚುಕಟ್ಟಾದ ಮುದ್ರಣ ವಿರುವ ಈ ಪುಸ್ತಕ ಎಲ್ಲರೂ ಓದಲೇಬೇಕು, ಬದುಕಿನ ಸೂಕ್ಷ್ಮಗಳನ್ನು ಸಮಗ್ರವಾಗಿ ಚಿತ್ರಿಸಿದ ಈ ಹೊತ್ತಿಗೆಯು ಓದುಗರಿಗೆ ಮುದನೀಡುವಲ್ಲಿ ಯಾವುದೇ ಸಂಶಯವಿಲ್ಲ..ಶ್ರೀಯುತ ಸಿ ಜಿ ವೆಂಕಟೇಶ್ವರ ಇವರ ಮತ್ತಷ್ಟು ಸೃಜನಶೀಲ ಸಾಹಿತ್ಯದ ಹೊತ್ತಿಗೆ ಗಳು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಣೆ ಯಾಗಲಿ ಎಂದು ಈ ಸಂದರ್ಭದಲ್ಲಿ ಆಶಿಸುತ್ತೇನೆ.
ಪ್ರಜಾಪ್ರಗತಿ ಪತ್ರಿಕೆ, ಭಾನುವಾರದ ಪುರವಣಿ (30-01-2022)
©2024 Book Brahma Private Limited.