ಕವಿ ಮಧುರ ಚೆನ್ನರ ಬದುಕು, ಬರಹ ಮತ್ತು ಚಿಂತನೆಗಳ ಕುರಿತಾದ ಈ ಪುಸ್ತಕವನ್ನು ಡಾ.ಗುರುಲಿಂಗ ಕಾಪಸೆ ಅವರು ರಚಿಸಿದ್ದಾರೆ.
ಇಪ್ಪತ್ತನೆಯ ಶತಮಾನದ ಸಾಹಿತ್ಯ ಸಂದರ್ಭದಲ್ಲಿ ಶತಮಾನೋತ್ಸವದ ಗೌರವಕ್ಕೆ ಪಾತ್ರರಾದ ಮತ್ತು ಪಾತ್ರರಾಗಬಹುದಾದ ಕೆಲವೇ ಮಹತ್ವದ ಸಾಹಿತಿಗಳ ಸಾಹಿತ್ಯ ಸಾಧನೆಗೆ ಹೋಲಿಸಿದರೆ, ಮಧುರು ಚೆನ್ನರ ಕೊಡುಗೆ ಅಂಥ ಸಮೃದ್ಧವೂ ವೈವಿಧ್ಯಮಯವೂ ಆದದ್ದೇನೂ ಅಲ್ಲ. ಅವರು ತಮ್ಮ ಐವತ್ತು ವರ್ಷಗಳ ಜೀವಿತ ಕಾಲದಲ್ಲಿ ಬರೆದು ಪ್ರಕಟಿಸಿದ ಕವನ ಸಂಗ್ರಹ ಒಂದೇ ಒಂದು, ಅದು ‘ನನ್ನ ನಲ್ಲ’. 1933ರಲ್ಲಿ ಪ್ರಕಟವಾದ ಈ ಸಂಕಲನದೊಳಗಿರುವ ಕವಿತೆಗಳ ಸಂಖ್ಯೆ ಕೇವಲ ಹದಿನೈದು, ಹೀಗೆ ಕೇವಲ ಒಂದೇ ಒಂದು ಕವನ ಸಂಕಲನದ ಮೂಲಕ ಕನ್ನಡದಲ್ಲಿ ಮರೆಯಲಾಗದ ಸ್ಥಾನವನ್ನುಗಳಿಸಿಕೊಂಡು, ಶತಮಾನ ಸ್ಮರಣೆಯ ಗೌರವಕ್ಕೆ ಪಾತ್ರವಾಗುವ ಸತ್ವ ಉಳ್ಳವರು ಮಧುರಚೆನ್ನರೊಬ್ಬರೇ ಎನ್ನುವುದು ಕನ್ನಡ ಸಾಹಿತ್ಯದ ಆಶ್ಚರ್ಯಗಳಲ್ಲಿ ಒಂದು ಎನ್ನುತ್ತಾರೆ ಸಾಹಿತಿ ಜಿ.ಎಸ್.ಶಿವರುದ್ರಪ್ಪ.
ಡಾ.ಕಾಪಸೆಯವರ ಪರಿಶ್ರಮ ಹಾಗೂ ಪ್ರಯತ್ನಗಳ ಕಾರಣದಿಂದಾಗಿ ಮಧುರಚೆನ್ನರ ಚದುರಿ ಹೋದ ಗದ್ಯ ಬರಹಗಳೂ ಆತ್ಮಶೋಧ ರೂಪದ ಅವರ ಅನುಭಾವ ಕಥನವೂ ಮತ್ತೂ ಇನ್ನೂ ಒಂದಷ್ಟು ಕವಿತೆಗಳು ಎರಡು ಸಂಪುಟಗಳಲ್ಲಿ ಪ್ರಕಟಗೊಂಡಿರುವುದು ನಿಜವಾದರೂ, ಒಂದು ವೇಳೆ ’ನನ್ನ ನಲ್” ದಂಥ ಅಪ್ಪಟ ಅನುಭಾವ ಕಾವ್ಯವೇನಾದರೂ ಲಿಖಿತಗೊಳ್ಳದಿದ್ದರೆ ಅಥವಾ ಪ್ರಕಟವಾಗದಿದ್ದರೆ ಬಹುಶಃ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಈ ಮಹತ್ವದ ಸ್ಥಾನವನ್ನು ಮಧುರಚೆನ್ನರು ಪಡೆದುಕೊಳ್ಳುತ್ತಿದ್ದರೋ ಇಲ್ಲವೋ ಎನ್ನುವುದು ಸಂದೇಹದ ಸಂಗತಿಯಾಗಿದೆ ಎಂಬುದು ಜಿ.ಎಸ್.ಶಿವರುದ್ರಪ್ಪನವರ ಅಭಿಪ್ರಾಯವಾಗಿದೆ.
©2024 Book Brahma Private Limited.