‘ರೂಪಕ ಲೇಖಕರು’ ಪತ್ರಕರ್ತ, ಲೇಖಕ ಪಿ. ಲಂಕೇಶ್ ಮತ್ತು ಎಸ್.ಎಫ್. ಯೋಗಪ್ಪನವರ್ ಅವರ ಪ್ರಬಂಧ ಸಂಕಲನ. ಜಗತ್ತಿನ ಶ್ರೇಷ್ಠ ಬರಹಗಾರರು, ವಿಭಿನ್ನ ಶೈಲಿಯ ಕಲಾವಿದರ ಕುರಿತಾದ ಪ್ರಬಂಧಗಳ ಸಂಕಲನವಿದು. ರೂಪಕ ಲೇಖಕರು ಮನುಕುಲದ ದ್ವೇಷಕ್ಕೆ ಗುರಿಯಾದವರು.ಸಂಪ್ರದಾಯದ ವಿರೋಧಿಗಳು, ಸಮಾಜ ಇವರನ್ನು ಸದಾ ಹೊರಗಿಡುವ ಪ್ರಯತ್ನ ಮಾಡಿತ್ತು. ಇವರು ದೇಹದ ಆಯ್ಕೆ ಮತ್ತು ಸ್ವಂತದ ಅರಿವಿನ ಮಧ್ಯೆ ಬೆಂದು ಬೂದಿಯಾದವರು. ಬಹುತೇಕರು ಅಲ್ಪಾಯುಗಳು. ಬದುಕುವುದಕ್ಕಿಂತ ಸಾಯುವುದೇ ಮೇಲೆಂದು ಹತಾಶೆಯ ಅಂಚು ಮುಟ್ಟಿದವರು. ಮೂಲದಲ್ಲಿ ಇವರೆಲ್ಲ ಸಮಾಜ ಒಪ್ಪುವ ನಡವಳಿಕೆಯವರಲ್ಲ. ಪಾಲ್ ವರ್ಲೇನ್ ಸಲಿಂಗಕಾಮಿ; ಎಡ್ಗರ್ ಅಲನ್ ಷೋ ಜೂಜುಗಾರ; ಚಾರ್ಲಸ್ ಬೋದಿಲೇರ್ ವ್ಯಭಿಚಾರಿ; ಆಲ್‌ಪಡ್ ಚಾರಿ, ಕುಡುಕ; ಜೀನ್ ಜೀನೆ ತಲೆಹಿಡುಕ: ಮಾರ್ಕ್ಸಿಸ್ ಸೇಡ್ ವಿಕೃತ ಕಾಮಿ; ಡಿಲನ್ ಥಾಮಸ್ ಮಹಾಕುಡುಕ; ಕಾಥರೀನ್ ಆನ್‌ಪೋರ್ಟರ್ ಮಹಾಸುಳ್ಳು ಗಾರ್ತಿ; ಸ್ಟೀಫನ್ ಮಲಾರ್ಮೆ ಭ್ರಮಿಷ ಎಜ್ರಾ ಪೌಂಡ್ ಫ್ಯಾಸಿಸ್ಟ್; ಆರ್ಥರ್ ಲ್ಯಾಂಬೋ ಮರ್ಸಿನರಿ; ಅಲೆಕ್ಸಾಂಡರ್ ಪುಷ್ಠಿನ್ ಪೊಲೀಸ್ ಸ್ಟೇಶನ್ನಿನಲ್ಲಿ ಫೋಟೋ ಹಾಕಿಸಿ ಕೊಂಡವ; ವಿಲಿಯಂ ಆಪೋಲಿನೇ ಅಲೆಮಾರಿ; ಆಲಿವರ್ ಗೋಲ್ಲಸ್ಮಿತ್ ಹೊಟ್ಟೆಪಾಡಿನ ಬೀದಿ ಬಳಿಯ ಕೊಳಲು ವಾದಕ; ವಿಲಿಯಂ ಕೂಪರ್ ಮಾನಸಿಕ ರೋಗಿ; ಜಾರ್ಜ್ ಕ್ಯಾಬ್ ಆಫೀಮು ಪ್ರಿಯ; ಸ್ಯಾಘೋ ವಾರಾಂಗನೆಯಾಗಿದ್ದಳು. ಇವರೆಲ್ಲ ಮೇಲ್ಪದರಿಗೆ ಭ್ರಷ್ಟರು, ವ್ಯಸನಿಗಳಂತೆ ಕಂಡರೂ ರೂಪಕ ಮೂಲದಲ್ಲಿ ಸಂತರು, ಧರ್ಮ, ದೇವರು, ರಾಜಸತ್ತೆ, ಸಮಾಜದ ಮೂಲಕ್ಕೆ ಕೈಹಾಕಿ ಬದುಕಿಗೆ ಹೊಸ ವ್ಯಾಖ್ಯೆ ಬರೆದು ಶ್ರೀಮಂತಗೊಳಿಸಿದರು. ಹಳೆಯದನ್ನು ಛಿದ್ರಗೊಳಿಸಿ ಹೊಸದನ್ನು ಕಟ್ಟಿದರು. ರೂಪಕ ಲೇಖಕರ ಕೃತಿ ಕೀಲಿ ಕೈ ಮಾತ್ರ. ಆದರ ಮುಖಾಂತರ ನಿರಾತಂಕವಾಗಿ ವಿಶ್ವ ಸಾಹಿತ್ಯಕ್ಕೆ ಪ್ರವೇಶಿಸ ಬಹುದು. ಹೊಸ ಗಾಳಿ ಬೆಳಕಿಗೆ ಮೈಯೊಡ್ಡಬಹುದು. ಲಂಕೇಶ್ ಒಡಗೂಡಿ ವಿಶ್ವದ ರೂಪಕ ಲೇಖಕರು ಉರಿಯುತ್ತಲೇ ಉರುಳಿದ ಬೆಂಕಿಯ ಚಂಡುಗಳು. ಅಂಥ ಹಲವು ರೂಪಕ ಲೇಖಕರ ಪರಿಚಯ ಈ ಕೃತಿಯಲ್ಲಿದೆ.
©2024 Book Brahma Private Limited.