ಲೇಖಕಿ ಸುಮಾವೀಣಾ ಅವರು ಬರೆದ ಸಾಹಿತ್ಯಾತ್ಮಕ ಪ್ರಬಂಧಗಳ ಸಂಕಲನ-ಲೇಖ ಮಲ್ಲಿಕಾ. ಸಾಹಿತಿ ತಮಿಳ್ ಸೆಲ್ವಿ ಅವರು ಕೃತಿಗೆ ಬೆನ್ನುಡಿ ಬರೆದು ‘ಬರವಣಿಗೆಯು ವೈಯಕ್ತಿಕ ಅಭಿವ್ಯಕ್ತಿಯೇ ಆಗಿದ್ದರೂ ಅದು ಸಮಾಜದೊಂದಿಗೆ ಅನುಸಂಧಾನ ಗೊಳಿಸಿಕೊಳ್ಳುವ ಮಾರ್ಗವೂ ಆಗಿದೆ ಎಂಬುದನ್ನು ಇಲ್ಲಿಯ ಪ್ರಬಂಧಗಳು ಸಾಬೀತುಪಡಿಸುತ್ತವೆ. ಇವರ ಅಧ್ಯಯನ, ಅಧ್ಯಾಪನ, ಸಂಶೋಧನೆ, ವೈಚಾರಿಕತೆ , ಸೃಜನಶೀಲತೆ, ವೈಜ್ಞಾನಿಕತೆ ಎಲ್ಲವನ್ನೂ ಒಳಗೊಂಡಿರುವ ಲೇಖನಗಳು ಈ ಸಂಗ್ರಹದಲ್ಲಿವೆ. ಕೇಶವ ಮಳಗಿಯವರು ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ.
ನವ್ಯ, ನವೋದಯ, ಪ್ರಗತಿಶೀಲ, ದಲಿತ-ಬಂಡಾಯ ಸಾಹಿತ್ಯ ಕಾಲಘಟ್ಟಗಳು ವಸ್ತು ಮತ್ತು ಅಭಿವ್ಯಕ್ತಿ ಕ್ರಮಗಳಿಂದ ಅಷ್ಟೇ ಅಲ್ಲ; ಅವು ಭಾಷಾ ಬಳಕೆಯ ಕಾರಣಗಳಿಂದಲೂ ವಿಶಿಷ್ಟವೆನಿಸುತ್ತವೆ. ಆಯ್ಕೆ ಮಾಡಿಕೊಳ್ಳುವ ವಸ್ತುವಿಗೆ ನೂತನ ಆಯಾಮ ಕಲ್ಪಿಸಿಕೊಡುತ್ತಾರೆ. ಓದುಗರಿಗೆ ಹೊಸ ಹೊಸ ವಿಷಯಗಳನ್ನು ಪರಿಚಯಿಸುತ್ತಾ, ವಿಮರ್ಶಾತ್ಮಕವಾಗಿ ಬರಹ ರೂಪದಲ್ಲಿ ಓದುವ ವರ್ಗಕ್ಕೆ ವಿಷಯ ವಿವರಿಸುವ ಪರಿ ಸೋಜಿಗ ಮೂಡಿಸುತ್ತದೆ. ಸಮಕಾಲೀನ ಸಾಹಿತ್ಯದ ಬಗ್ಗೆಯೂ ಕುತೂಹಲ ಹಾಗೂ ಉತ್ಸಾಹ ಮೀರಿದ ಬರಹಗಳೂ ಇಲ್ಲಿವೆ. ಲೇಖಕಿಯು ಯಾವುದೇ ‘ಇಸಂ’ಗಳಿಗೆ ಅಂಟಿಕೊಳ್ಳದೇ ತಮ್ಮದೇ ಆದ ಕೆಲವು ಹಾದಿಗಳನ್ನು ಕಂಡುಕೊಂಡಿದ್ದಾರೆ. ಇವರ ಬರಹಗಳು ಪ್ರಾಚೀನ ಸಾಹಿತ್ಯದ ನಿಯಮಗಳನ್ನು ಮೀರಿ ಸಾಮಾಜಿಕ, ರಾಜಕೀಯ ಬದುಕಿನ ಕಟ್ಟುಪಾಡುಗಳನ್ನು ಮುರಿದು ಕಟ್ಟುವ ಕಾರ್ಯವನ್ನು ನಿರ್ವಹಿಸಿವೆ’ ಎಂದು ಪ್ರಶಂಸಿಸಿದ್ದಾರೆ.
ಪ್ರಬಂಧಗಾರ್ತಿ ಸುಮಾ ವೀಣಾ ಅವರು ಉಪನ್ಯಾಸಕಿ. ತಂದೆ ಪುಟ್ಟರಾಜು, ತಾಯಿ ಲಲಿತಾ. ಹಾಸನದ ಹೇಮಗಂಗೋತ್ರಿಯಲ್ಲಿ ಕನ್ನಡ ಎಂ. ಎ ಅಧ್ಯಯನ. ವಿದ್ಯಾರ್ಥಿ ದಿಸೆಯಿಂದಲೇ ರಾಜ್ಯ ಮತ್ತು ರಾಷ್ಟ್ರಿಯ ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದಾರೆ. ಅವರ ಬರೆಹಗಳು ವಿಜಯವಾಣಿ, ಸುಧಾ ವಾರ ಪತ್ರಿಕೆಯಲ್ಲಿ ಪ್ರಕಟವಾಗಿವೆ. ವಚನ ಸಾಹಿತ್ಯ ಕುರಿತು ವಿಶೇಷ ಉಪನ್ಯಾಸಗಳನ್ನು ನೀಡಿದ್ದಾರೆ. ಕೃತಿಗಳು: ನಲಿವಿನ ನಾಲಗೆ (ಪ್ರಬಂಧಗಳ ಸಂಕಲನ), ಶೂರ್ಪನಖಿ ಅಲ್ಲ ಚಂದ್ರ ನಖಿ (ಕವನ ಸಂಕಲನ), ಮನಸ್ಸು ಕನ್ನಡಿ (ಪ್ರಬಂಧಗಳ ಸಂಕಲನ). ...
READ MORE