‘ಸಿರಿ ನುಡಿ’ ಕೃತಿಯು ಸಿರಿಮೂರ್ತಿ ಕಾಸರವಳ್ಳಿ ಅವರ ಪ್ರಬಂಧಗಳ ಸಂಕಲನವಾಗಿದೆ. ಬಾಲ್ಯದ ನೆನಪುಗಳು ಅಡಕವಾಗಿವೆ. ಅದರಲ್ಲೂ ಮಳೆಗಾಲದ ಮಲೆನಾಡಿನ ಬರೆಗಳಲ್ಲಿ ಧುಮಿಕ್ಕುವ ಝರಿಗಳಂತೆ, ಭೋರ್ಗರೆಯುವ ಜಲಪಾತಗಳಂತೆ, ಸರಸರ ಸಪ್ಪಳಿಸುತ್ತಾ ಹರಿಯುವ ಕಿರು ತೊರೆ, ಅಬ್ಬರಿಸುವ ಹಳ್ಳ-ಕೊಳ್ಳಗಳಂತೆ, ಮೊರೆಯುವ ಹೊಳೆ- ನದಿಗಳ ಪ್ರವಾಹದಂತೆ ಪ್ರತಿ ನೆನಪುಗಳು ಕೂಡ ಶುಭ್ರವಾದ ಧ್ವನಿಯಲ್ಲಿ ಪಿಸುಗುಟ್ಟುತ್ತಿದೆ ಎಂದು ಲೇಖಕಿ ಹೇಳಿದ್ದಾರೆ.
ಕೃತಿಗೆ ಮುನ್ನಡಿ ಬರೆದಿರುವ ಲೇಖಕ ಶರತ್ ಕಲ್ಕೋಡ್ ಅವರು, ‘ಸಿರಿಮೂರ್ತಿ ಅವರ ಲೇಖನದಲ್ಲಿರುವ ಪ್ರತಿಯೊಂದು ನೆನಪಿಗೆ ಕೂಡ ಸೊಬಗಿದೆ, ಚೆಲುವಿದೆ, ಭೀಕರತೆ ಇದೆ ಹಾಗೇ ವೈಶಿಷ್ಟ್ಯವಿದೆ. ಇಲ್ಲಿನ ‘ಅಜ್ಜನೂರಾದ ಹುಲಿಕಲ್’ ಲೇಖನದಲ್ಲಿ ಚಿತ್ರಿತವಾಗಿರುವ ಹುಲಿಕಲ್ ಅನ್ನು ವಿವರಿಸುವುದು ಮಹತ್ವದಾಗಿ ಕಾಣುತ್ತದೆ. ಲೇಖಕಿ ವಾರಾಹಿ ಜಲವಿದ್ಯುತ್ ಯೋಜನೆಯಡಿ ಮುಳುಗಡೆಯಾದ ಅಜ್ಜನ ಊರಿನ ಚಿತ್ರಣ ಮಾತ್ರ ಕಣ್ಣಿಗೆ ಕಟ್ಟುದಷ್ಟೇ ಅಲ್ಲ; ಅಲ್ಲಿದ್ದ ನರಸಿಂಹಮೂರ್ತಿ ದೇವಸ್ಥಾನ ನೆನಪಾಗಿ, ಪುರಾಣದ ಕತೆ ಉಗ್ರನರಸಿಂಹಾವತಾರ ದೃಶ್ಯದ ಜೊತೆ ಜೊತೆಗೇ ಆ ಅವತಾರದ ಉಗ್ರ ಕೋಪ ಎಷ್ಟಿತ್ತೆಂಬುದಕ್ಕೆ ಸಾಕ್ಷಿಯಾಗಿ ಅಲ್ಲಿಯ ಹಸಿರಗುಡ್ಡ ಕಟ್ಟುಕರಿಗಲ್ಲಾಗಿ ನಿಂತಿರುವ ಐತಿಹ್ಯದ ಪುರಾವೆ ನೀಡುತ್ತಾರೆ. ಇನ್ನೂ ಸಿರಿಮೂರ್ತಿ ಅವರ ಬರಹಗಳಲ್ಲಿ ಓರೆ ಕೋರೆ ಇಲ್ಲವೆನ್ನಲ್ಲಾರೆ. ಕೆಲವೊಂದು ಅವಸರದ ಬರಹಗಳೂ ಇವೆ. ಅದಕ್ಕೆ ಹದಿನೇಳರ ಸಂಜೆ ಲೇಖನ ವಿವರಿಸಬಹುದು. ಸರ್. ಎಂ.ವಿಶ್ವೇಶ್ವರಯ್ಯನವರ ಮೊಮ್ಮಗನನ್ನು ಸಮಾರಂಭವೊಂದರಲ್ಲಿ ಅನಿರೀಕ್ಷಿತವಾಗಿ ಭೇಟಿಯಾಗುವ ಲೇಖಕಿ, ಭಾವಪರವಶರಾಗಿ ವಿಶ್ವೇಶ್ವರಯ್ಯನವರ ವ್ಯಕ್ತಿತ್ವವನ್ನೇ ಮೊಮ್ಮಗನಲ್ಲೂ ಕಾಣುವುದು ಬಹಳ ಆತುರದ ನಿರ್ಧಾರವೆನ್ನಿಸುತ್ತದೆ ’ ಎಂದಿದ್ದಾರೆ.
©2024 Book Brahma Private Limited.