ಡಾ. ಶ್ರೀನಿವಾಸ ಹಾವನೂರರು ರಚಿಸಿರುವ ಕೃತಿ ‘ಶ್ರೀವಾದಿರಾಜರ ತೀರ್ಥಪ್ರಬಂಧ’. ಕೃತಿಯ ಕುರಿತು ಬರೆಯುತ್ತಾ ಸೋದೆಯ ಶ್ರೀವಾದಿರಾಜರ ತೀರ್ಥಪ್ರಬಂಧವನ್ನು ನನ್ನ ತರುಣವಯಸ್ಸಿನ ಕಾಲದಿಂದಲೂ ಮೆಚ್ಚಿಕೊಂಡಿದ್ದೆ. ಅದರಲ್ಲಿ ಧಾರ್ಮಿಕ ಅಂಶಗಳು ತೀರ ಕಡಿಮೆಯಿದ್ದು, ಕಾವ್ಯಾಂಶವೇ ಅಧಿಕವೆಂಬುದನ್ನು ಮನಗಂಡಿದ್ದೆ. ಅಲ್ಲದೆ ಇಡೀ ಪ್ರಾಚೀನ ವಾಗ್ಮಯದಲ್ಲಿ ಅಪೂರ್ಣವೆನಿಸಿದ ಪ್ರವಾಸ ಸಾಹಿತ್ಯವಿದು ಎಂಬ ಭಾವನೆಯೂ ನನ್ನಲ್ಲಿ ಮೂಡಿದ್ದಿತು. ಈಚೆಗೆ ಗುಲಬರ್ಗಾ ವಿಶ್ವವಿದ್ಯಾಲಯದವರು ದಿವಂಗತ ರಾಮಕೃಷ್ಣ ತಂತ್ರಿಯವರ ಹೆಸರಿನಲ್ಲಿ ವಿಶೇಷ ಉಪನ್ಯಾಸ ಮಾಡಲೆಂದು ನನ್ನನ್ನು ಕರೆದಾಗ ಮೂರು ದಶಕಗಳ ಕಾಲದಿಂದ ಮನದಲ್ಲಿ ಸ್ಥಾಯಿಯಾಗಿದ್ದ ಈ ಕೃತಿಯನ್ನೇ ಎತ್ತಿಕೊಂಡೆ ಎಂದಿದ್ದಾರೆ ಶ್ರೀನಿವಾಸ ಹಾವನೂರ. ಇದರಲ್ಲಿಯ ವರ್ಣನಾಂಶಗಳನ್ನಷ್ಟೇ ಎತ್ತಿ ತೋರಿಸುವುದಿದ್ದುದರಿಂದ, ಕೃತಿಯ ವಿಮರ್ಶೆಯ ಗೊಡವೆಗೆ ಹೋಗಿಲ್ಲ. ಓದುಗರು ಅದನ್ನು ನಿರೀಕ್ಷಿಸಲೂಬಾರದು. ಇನ್ನೊಂದು ಮಾತು: ಯಾರು ಈಗಾಗಲೇ ತೀರ್ಥಪ್ರಬಂಧವನ್ನು ಸ್ವಮತ ನಿಷ್ಠೆಯಿಂದ, ಗುರುಭಕ್ತಿಯಿಂದ ಓದಿರುವರೋ, ಅಂಥವರನ್ನು ದೃಷ್ಟಿಯಲ್ಲಿಟ್ಟುಕೊಂಡು ಕೃತಿ ವಿವೇಚನೆಗೆ ತೊಡಗಿಲ್ಲ. ಬದಲಿಗೆ ಕಾವ್ಯವೊಂದರ ರಸಸ್ವಾದದಲ್ಲಿ ಸಂತೋಷಿಸುವವರನ್ನು ಗಮನದಲ್ಲಿಟ್ಟುಕೊಂಡು, ನಾನು ಮೆಚ್ಚಿಕೊಂಡ ಕಾವ್ಯಾಂಶಗಳನ್ನು ಇಲ್ಲಿ ವಿವರಿಸಯತ್ನಿಸಿದ್ದೇನೆ ಎಂದಿದ್ದಾರೆ. ಕೃತಿಯಲ್ಲಿ ಶ್ರೀವಾದಿರಾಜರ ಬದುಕಿನ ವೈಶಿಷ್ಟ್ಯ, ತೀರ್ಥಪ್ರಬಂಧದ ಸ್ಥೂಲ ಪರಿಚಯ, ನದಿ:ಸಂಗಮಗಳು, ಕ್ಷೇತ್ರಸ್ಥ ದೇವತೆಗಳು, ಶ್ರೀವಾದಿರಾಜರು ಕಂಡ ಶಿವ, ತೀರ್ಥಪ್ರಬಂಧದ ಪದ್ಮಬಂಧ ಸಮಾರೋಪ ಹಾಗೂ ಅನುಬಂಧಗಳಲ್ಲಿ (ಅ) ಕನ್ನಡ ಮಹಾಭಾರತ ತಾತ್ಪರ್ಯ ನಿರ್ಣಯ ಮತ್ತು ಶ್ರೀಕೃಷ್ಣ ಬಾಲಲೀಲೆ, (ಆ) ಸಮರಪುಂಗವ ದೀಕ್ಷಿತನ ಯಾತ್ರಾ ಪ್ರಬಂಧಗಳು ಸಂಕಲನಗೊಂಡಿವೆ.
©2024 Book Brahma Private Limited.