ಮುಳ್ಳು ಬೇಲಿಯ ಹೂಬಳ್ಳಿ ಕೆ.ಆರ್ ಉಮಾದೇವಿ ಉರಾಳ ಅವರ ಪ್ರಬಂಧ ಸಂಕಲನ. ಇಲ್ಲಿನ ಲೇಖನಗಳು ಲಲಿತ ಪ್ರಬಂಧಗಳ ಸ್ವರೂಪದವು. ತಾವು ಬದುಕಿನಲ್ಲಿ ಅನುಭವಿಸಿದ ತಮ್ಮ ಕಾಲದ ಅನೇಕ ಅವಿಸ್ಮರಣೀಯ ಘಟನೆಗಳನ್ನು ಲೇಖಕಿ ಉಮಾದೇವಿ ಇಲ್ಲಿ ಮೆಲುಕು ಹಾಕಿದ್ದು, ಕಳೆದುಕೊಂಡ ಆ ಕಾಲದ ಅನೇಕ ಸಾಮಾಜಿಕ ಮೌಲ್ಯಗಳನ್ನು ನಮಗೂ ನೆನಪು ಮಾಡಿಕೊಟ್ಟಿದ್ದಾರೆ. ಕಾಲ ಕಳೆದಂತೆ ಅಥವಾ ಬದಲಾದಂತೆ ಹಲವು ಸಂಸ್ಕೃತಿಗಳೂ ಬದಲಾಗಿ ಆ ಜಾಗಕ್ಕೆ ಹೊಸದಾಗಿ ಬಂದು ಸೇರುವಂಥವು ಎಷ್ಟೋ ಇವೆ. ನಾವೂ ಆದರೊಂದಿಗೆ ಹೆಜ್ಜೆ ಹಾಕಲೇಬೇಕಾದ ಅನಿವಾರ್ಯತೆ ನಮಗೂ ಇದೆ. ಏನೇ ಆದರೂ ಜೀವಿತದಲ್ಲಿ ನಾವು ಗಳಿಸಿದ್ದನ್ನೂ ಕಳೆದುಕೊಂಡಿದ್ದನ್ನೂ ಲೆಕ್ಕ ಹಾಕುತ್ತ ಇನ್ನಷ್ಟು ಪ್ರಬುದ್ಧರಾಗುತ್ತ ಸಾಗುವ ಜೀವನದ ದಾರಿಯೇ ಒಂದು ಆಹ್ಲಾದಕರ ಅನುಭವವೆಂದು ಲೇಖನಗಳಲ್ಲೆಲ್ಲ ವ್ಯಕ್ತವಾಗಿದೆ.
“ಇಲ್ಲಿನ ಲೇಖನಗಳು ಪ್ರಬಂಧದ ಸ್ವರೂಪದಲ್ಲಿದ್ದರೂ, ಅವುಗಳಲ್ಲಿ ಹಲವು ಲಲಿತ ಪ್ರಬಂಧಗಳ ಲಕ್ಷಣಗಳನ್ನೂ ಹೊಂದಿವೆ. ಆತ್ಮೀಯ ಶೈಲಿ, ಭಾರವಲ್ಲದ ವೈಚಾರಿಕತೆ ಹಾಗೂ ವೈನೋದಿಕ ಧಾಟಿ ಲಲಿತ ಪ್ರಬಂಧದ ಮುಖ್ಯ ಗುಣಗಳು. ಇಲ್ಲಿನ ಪ್ರಬಂಧಗಳಲ್ಲಿ ವೈನೋದಿಕ ಧಾಟಿಗೆ ಪ್ರಾಮುಖ್ಯವಿಲ್ಲ. ಅದರ ಬದಲು ಅವುಗಳು ನೆನಪುಗಳನ್ನು ಹೆಚ್ಚು ನಂಬಿವೆ. ಹಾಗಾಗಿ ಇಲ್ಲಿನ ಬರಹಗಳು ಪ್ರಬಂಧಗಳನ್ನು ನೆನಪಿಸುತ್ತವೆ. 'ಕರುಬುವವರಿರಬೇಕಿರಬೇಕು...' ಎಂಬ ಪ್ರಬಂಧ ಸಾಕಷ್ಟು ವಿನೋದವನ್ನು ಒಳಗೊಳ್ಳಲು ಅನುಕೂಲವಿರುವ ಬರಹ. ಆದರೆ ಉಮಾದೇವಿಯವರು ಅಲ್ಲಿ ವಿಶ್ಲೇಷಣೆ ಮತ್ತು ವಿವರಣೆಗಳ ಹದನಾದ ವೈಚಾರಿಕ ಬಂಧವನ್ನು ಆತ್ಮೀಯವಾದ ಶೈಲಿಯಲ್ಲಿಯೇ ಹೇಳಿದ್ದಾರೆ. ಅವರಿಗೆ ವಿನೋದಕ್ಕಿಂತಲೂ ವಿಚಾರ ಮುಖ್ಯ ಎಂಬುದು ಸಂಕಲನದ ಮೊದಲಿಗೇ ಭಾಸವಾಗುತ್ತದೆ. ಹಾಗಾಗಿ ಅವರಿಗೆ ಇನ್ನೊಬ್ಬರ ಭಾಗ್ಯಕ್ಕೆ ಕರುಬದೆ ತನ್ನ ಭಾಗ್ಯವನ್ನು ಬೇರೊಂದೆಡೆ ಕಾಣುವ ಸುರೇಶ ಸದಾ ನೆನಪಿನಲ್ಲುಳಿಯುತ್ತಾನೆ. ನೆನಪು ಅವರಿಗೆ ಪೂರಕ ಅನುಭವ” ಎಂದು ಎಸ್.ಆರ್. ವಿಜಯಶಂಕರ ಅವರು ಪುಸ್ತಕದಲ್ಲಿ ಮುನ್ನುಡಿಯ ಮಾತುಗಳನ್ನಾಡಿದ್ದಾರೆ.
©2024 Book Brahma Private Limited.