ಕವಯತ್ರಿ ಲೇಖಕಿ ಎಂ.ಆರ್ ಕಮಲ ಅವರು ಬರೆದಿರುವ ’ಕಸೂತಿಯಾದ ನೆನಪು’ ಪ್ರಬಂಧಗಳ ಸಂಕಲನ. ಈ ಕೃತಿಯಲ್ಲಿ ಒಟ್ಟು 51 ಲೇಖನಗಳಿವೆ.
ಲೇಖಕಿಯ ಜೀವನಾನುಭವದ ಅಂತರಂಗ ಸ್ವಗತಗಳನ್ನೊಳಗೊಂಡ ಲೇಖನಗಳು ಇಲ್ಲಿವೆ. ಅನೇಕ ಘಟನೆಗಳನ್ನಾಧರಿಸಿದ ಚಿಂತನೆಗಳು, ಕಳೆದ ಬಾಲ್ಯದೊಂದಿಗೆ ಅಳಿದುಳಿದ ನೆನಪುಗಳು, ಅವರ ವಿಚಾರಧಾರೆಗಳು, ಸೂಕ್ಷ್ಮ ಸಂಗತಿಗಳನ್ನು ಹೆಣೆದು ಕಸೂತಿಯ ನೆನಪಿನಲ್ಲಿ ಓದುಗರಿಗೆ ನೀಡಿದ್ದಾರೆ.
ನಿಜವಾದ ಮನೆಯೆಂದರೆ ಯಾವುದು? ಹೆಣ್ಣಿನ ಮನಸ್ಸಿನ ಆಂತರಿಕ ತುಮುಲ, ವೈಚಾರಿಕ ನಿಲುವನ್ನು ಬೆಳೆಸಿಕೊಳ್ಳಬೇಕಾದ ಅಂಶಗಳೆಲ್ಲವೂ ಲೇಖಕಿಯ ಕಸೂತಿಯಾದ ನೆನಪಿನಲ್ಲಿದೆ. ಅದೆಷ್ಟೋ ಸಂಗತಿಗಳನ್ನು ತಮ್ಮದೇ ಅನುಭವದಿಂದ, ತಾವು ಹುಟ್ಟಿ ಬೆಳೆದ ಮೇಟಿಕುರ್ಕೆಯ ಮನೆಯ ಬಾಲ್ಯದಿಂದ ಈ ವರೆಗಿನ ನಗರ ಜೀವನದ ರಸ್ತೆ ತಿರುವುಗಳ ತನಕವೂ ಇವರ ನೆನಪು ಓದುಗರ ಚಿತ್ತಭಿತ್ತಿಯಲ್ಲಿ ನೆಲೆಯೂರುತ್ತದೆ.
’ಕಸೂತಿಯಾದ ನೆನಪು’ ಕೃತಿಯಲ್ಲಿ ಕಲಾತ್ಮಕ ಜೀವನದ ಜೊತೆ, ಸಾಹಿತ್ಯಿಕ ಒಲವಿನ ಜೊತೆ ಬೆರೆತಿರುವ ಅನೇಕ ಸಂಗತಿಗಳನ್ನು ತಮ್ಮ ಲಘು ಪ್ರಬಂಧಗಳ ಜೊತೆ ಲೇಖಕಿ ಹಂಚಿಕೊಂಡಿದ್ದಾರೆ.
ಕಸೂತಿಯಾದ ನೆನಪು ಪುಸ್ತಕ ಬಿಡುಗಡೆ ಕಾರ್ಯಕ್ರಮ
ಕಸೂತಿಯಾದ ನೆನಪು ಪುಸ್ತಕದ ಬಗ್ಗೆ ಗಿರಿಜಾ ಶಾಸ್ತ್ರಿ ಅವರ ಲೇಖನ
ಕಮಲ ಹೆಣೆದ ಕಸೂತಿಯ ಚೆಲುವು -ಪಾರ್ವತಿ ಐತಾಳ್ ಬರೆದಿರುವ ಲೇಖನ
ಆತ್ಮೀಯ ನೆನಪುಗಳ ಕಸೂತಿ
ಕಸೂತಿಗೂ ಹೆಣ್ಣಿಗೂ ಅವಿನಾಭಾವ ಸಂಬಂಧ. ಸ.ಉಷಾ ರವರ 'ಕಸೂತಿ' ಎಂಬ ಕೃತಿಯನ್ನು ಇಲ್ಲಿ ನೆನಪಿಸಿಕೊಳ್ಳಬಹದು. ಕಸೂತಿಯ ಹೆಣಿಗೆಗಿರಬೇಕಾದ ತದಾತ್ವ ಸೂಕ್ಷ್ಮ ಕಲೆಗಾರಿಕೆ ಮತ್ತು ಅದರಿಂದ ಸಿಗುವ ಖುಷಿ, ಸೃಜನ ಶೀಲ ಬರಹ ಹೋಲಿಸಬಹುದೇನೋ. ಕಮಲಾರವರೂ 'ಬಾಲ್ಯದ ಸವಿ ಅಜಂತದ’ ಗವಿ ಎಂಬ ಮಾತಿನಂತೆ ತಮ್ಮ ಬಾಲ್ಯದಲ್ಲಿ ಕಳೆದ ಆವರಣಗಳನ್ನೂ ನೆನಪುಗಳನ್ನೂ ಈ ಕೃತಿಯಲ್ಲಿ ಎಳೆ ಎಳೆಯಾಗಿ ಪೋಣಿ ಹೆಣೆಯುತ್ತಾ ಸಾಗಿದ್ದಾರೆ. ಇವು ಪ್ರಬಂಧಗಳಾದರೂ ಆತ್ಮಚರಿತ್ರೆಯ ತುಣುಕುಗಳಂತೆ ಕಾಣುತ್ತವೆ.
ಸುಮಾರು ಐವತ್ತೆಂಟು ಪ್ರಬಂಧಗಳನ್ನು ಒಳಗೊಂಡ ಇವುಗಳಲ್ಲಿ ನೆನಪೇ ಪ್ರಧಾನ ಅಂಶ. ಆ ನೆನಪುಗಳಾದರೋ ಆತ್ಮೀಯ, ಸೂಕ್ಷ್ಮ ಒಳನೋಟಗಳನ್ನು ಒಳಗೊಂಡು, ವೈಯಕ್ತಿಕವಾದರೂ ಸಮಷ್ಟಿಯ ನೆನಪುಗಳಾಗಿ ಬಿಡುತ್ತವೆ. ಲೇಖಕಿ ಬಾಲ್ಯ ಕಳೆದ 'ಮೇಟಿಕುರ್ಕೆ' ಎಂಬ ಹಳ್ಳಿಯ ಮಧ್ಯಮವರ್ಗದ ತುಂಬು ಕುಟುಂಬ, ಮನೆ ತುಂಬ ಜನ, ಕೆಲಸ-ಕಾರ್ಯಗಳು, ಹಬ್ಬ-ಹರಿ ದಿನ, ಜಾತ್ರೆ ಇವುಗಳೊಂದಿಗೆ ಲೇಖಕಿಯ ಅನನ್ನ ಬೆಸುಗೆ ಮತ್ತು ಭಾವುಕ ಅನುಭವವಾದ ಅವರ ಮನೆ, ಗೋಡೆಗಳಿಲ್ಲದ ಬದುಕಿನಲ್ಲಿ ಎಲ್ಲರೊಂದಿಗೆ ಹೊಂದಿಕೊಂಡು ಬದುಕುವ, ರಹಸ್ಯಗಳಿಲ್ಲದ, ಸುಳ್ಳು ಹೇಳಲಾಗದ, ಅಪ್ರಾಮಾಣಿಕತೆಯಿಲ್ಲದ ವ್ಯಕ್ತಿತ್ವವನ್ನು ರೂಪಿಸಬಲ್ಲ ಶಕ್ತಿ ಅಂತಹ ಮನೆಗಳಿಗಿರುತ್ತದೆ. ಮತ್ತೆ ಅಲ್ಲಿ ಬಾಳಿಬದುಕಿದವರಲ್ಲಿ ಇವು ಅರಿವಿಲ್ಲದೆ ಮೌಲ್ಯಗಳಾಗಿ ಅಡಕವಾಗಿಬಿಡುತ್ತವೆ.
'ಚಿಕ್ಕಮನೆಯಲ್ಲಿ ಚಕ್ಕೆ ತುಂಬಿದೆ' ಎಂಬ ಪ್ರಬಂಧವಂತೂ ಒಂದು ಮನೆಯ ಚಿಕ್ಕ ಕೋಣೆ ಹೇಗೆ ಎಲ್ಲರ ಆತ್ಮೀಯ ಜಾಗವಾಗುತ್ತದೆಂಬುದನ್ನು ರಾತ್ರಿಯಲ್ಲಿ ಬಿಚ್ಚಿಕೊಂಡ ಹಾಸಿಗೆಗಳು ಬೆಳಗಿನಲ್ಲಿ ಸುತ್ತಿಕೊಳ್ಳುವ ಮನಸ್ಸಿನಂತೆ ಚಿಕ್ಕ ಮನೆ ಎಂದು ಹೇಳುತ್ತಾ ಒಂದು ರೂಪಾತ್ಮಕತೆಯನ್ನೂ ಪಡೆದುಕೊಂಡು ಒಂದು ಅತ್ಯುತ್ತಮ ಪ್ರಬಂಧವಾಗಿಬಿಡುತ್ತದೆ. ಈ ನೆನಪುಗಳ ಕಸೂತಿಯಲ್ಲಿ ಢಾಳಾಗಿ ಕಾಣಿಸುವ ಒಂದು ಎಳೆ 'ಅಮ್ಮ'. ಅವಳ ತಾಳ್ಮೆ, ಮೌನ ಮನೆಯನ್ನು ಮಕ್ಕಳನ್ನು ಕಾಪಿಡುವ, ಸಲಹುವ ಪರಿ, ಅವರ 'ಅಮ್ಮ ಹಚ್ಚಿದೊಂದು ಹಣತೆ ಇನ್ನೂ ಬೆಳಗಿದೆ' ಎಂಬ ಕವಿತೆಯಲ್ಲಿ ಮುಂದುವರಿದಿದೆ ಎನ್ನಬಹುದು.
'ಹಬ್ಬಗಳೆಂಬ ನರಕ'ಎಂಬ ಪ್ರಬಂಧವು ಹಬ್ಬದ ಖುಷಿಯ ಜೊತೆಗೆ, ಈಗ ಕೇವಲ ಆಚರಣೆಗಾಗಿ ಆಚರಣೆಯಾಗಿ ಉಳಿದಿರುವ ಚಿಕಿತ್ಸಕ ನೋಟವನ್ನೂ ಬೀರಿದೆ. ಹಬ್ಬಗಳೆಂದರೆ ಹೆಂಗಸರು ಮಾತ್ರ ಅಡಿಗೆ ಮನೆಯಲ್ಲಿ ಬೇಯುವ ನರಕವೇನೋ ಎಂದು ಯೋಚಿಸುತ್ತಾರೆ. ಮನುಷ್ಯ ಸ್ವಭಾವದಲ್ಲಿ ಅಡಗಿದ ತಣ್ಣಗಿನ ಕ್ರೌರ್ಯಗಳಾದ ಹೀಗಳೆಯುವುದು, ಅವಮಾನಿಸುವುದು, ನಿಂದಿಸುವುದು, ವ್ಯಕ್ತಿತ್ವದ ಮೇಲೆ ಅದರಲ್ಲೂ ಅರಳುವ ಮನಸ್ಸುಗಳನ್ನು ಮುದುಡಿಸಿಬಿಡುತ್ತವೆ ಎಂದು, ಹದಿಹರೆಯದ ಮನಸುಗಳ ಶಿಕಕರಿಗಿರಬೇಕಾದ ಸೂಕ್ಷ್ಮತೆಯನ್ನು ನಿಂತ ನೀರ ಕಲಕಬೇಡಿ' ಎಂಬ ಪ್ರಬಂಧದಲ್ಲಿ ತೋರುತ್ತಾರೆ.
ವಿದ್ಯಾರ್ಥಿಗಳೊಂದಿಗೆ ಅವರು ಬೆರೆತ ಅನುಭವ, ಆ ವಯಸ್ಸಿನವರೊಂದಿಗೆ ಬೆರೆಯ ಬೇಕಾದರೆ, ನಾವು ಅಳವಡಿಸಿಕೊಳ್ಳಬೇಕಾದ ವರ್ತನೆ ಭಾಷೆಗಳಿಂದ ಯುವ ಮನಸ್ಸುಗಳನ್ನು ಹೇಗೆ ಗೆಲ್ಲಬಹುದು ಎಂಬ ಅನುಭವವನು. ಬರೆಯುತ್ತಾರೆ. ವೃಂದಗಾನದಲ್ಲಿ ನಮ್ಮ ದನಿ ಕೇಳುವುದೇ ಇಲ್ಲ ಎಂಬ ಪ್ರಬಂಧದಲ್ಲಿ ಇಡೀ ಬದುಕು ವೃಂದಗಾನವಲ್ಲ, ಆದ್ದರಿಂದ ವೈಯಕ್ತಿಕ ಸಾಮರ್ಥ ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂಬ ಅರಿವು ಮೂಡಿಸುತ್ತಾರೆ.
ಒಟ್ಟಾರೆ ಆತ್ಮೀಯವೆನಿಸುವ ಬರಹಗಳ ಈ ಸಂಕಲನವು ಅನೇಕ ಬಣ್ಣಗಳ ನೂಲಿನ ನೆನಪುಗಳ ಕಸೂತಿಯಾಗಿದ್ದು ಇದು ಕಮಲಾ ಅವರು ಮುಂದೆ ಬರೆಯಬಹುದಾದ ಆತ್ಮಚರಿತ್ರೆಯ ಸಿದ್ಧತೆಯೂ ಆಗಿದೆ ಎನ್ನಿಸದಿರದು.
-ಮಂಜುಳಾ ಎಂ. ರಾಜು
ಲೇಖನ ಕೃಪೆ : ಹೊಸ ಮನುಷ್ಯ ಸಮಾಜವಾದೀ ಮಾಸಿಕ ದಿನಪತ್ರಿಕೆ (ಸೆಪ್ಟಂಬರ್ 2019)
©2024 Book Brahma Private Limited.