ಗುಂಡೇನಟ್ಟಿ ಮಧುಕರ ಅವರ ‘ಗಡಿಯಾರ ರಿಪೇರಿ’ ಕೃತಿಯು ಲಲಿತ ಪ್ರಬಂಧಗಳ ಸಂಕಲನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಬಿ. ಪ್ರಾಣೇಶ ಗಂಗಾವತಿ ಅವರು, ನೇರ, ಸರಳ, ಆಡು ಮಾತಿನಲ್ಲಿ, ಉಪಮೇಯಗಳ ಸಹಾಯವಿಲ್ಲದೇ ಸಾಗುವ ಸರಳ ಬರವಣಿಗೆ ಇಲ್ಲಿದೆ. ‘ಯು ಆರ್ ಇನ್ ಕ್ಯೂ ಪ್ಲೀಜ್ ವೇಟ್’ ಲೇಖನ ಹಾಸ್ಯದ ಜೊತೆಗೆ ‘ನಾವೆಲ್ಲ ಸಾವಿನ ಸರತಿ ಸಾಲಿನಲ್ಲಿದ್ದೇವೆ’ ಎಂಬ ಗಹನ ತತ್ವವನ್ನು ಮಾರ್ಮಿಕವಾಗಿ ತಿಳಿಸಿಕೊಡುತ್ತದೆ. ನಗುತ್ತಲೇ ಸಾವನ್ನು ಎದುರಿಸುವ ಧೈರ್ಯ ಕೊಡುತ್ತದೆ. ಇನ್ನು ‘ಫೋಟೋ ಪ್ರಕರಣ’ ಲೇಖನದಲ್ಲಿ ರಸ್ತೆಯ ಮೇಲೆ ಕುಳಿತು ಲಾರಿಗಳ ಲೈಟಿನ ಬೆಳಕಿನಲ್ಲಿ ದಾಡಿ ಮಾಡಿಕೊಳ್ಳುವ ಪ್ರಸಂಗ ನೈಜ್ಯವೋ, ಕಲ್ಪನೆಯೋ ಏನಿದ್ದರೂ ಸರಿ ಎರಡಕ್ಕೂ ಫುಲ್ ಮಾರ್ಕ್ಸ, ನಗು ತಡೆಯಲಾಗಲಿಲ್ಲ. ‘ನಾನು ಸಂಪಾದಕನಾಗಿದ್ದೆ’ ಲೇಖನದಲ್ಲಿ ಪತ್ರಿಕೆಗಳ ದುಃಸ್ಥಿತಿ ವಿವರಣೆ, ವಾಸ್ತವಕ್ಕೆ ಹಿಡಿದ ಕನ್ನಡಿ. ಪತ್ರಿಕೆಗೆ ಹಣ ಹಾಕುವವನೊಬ್ಬ ಬೇರೆ, ಬರೆಯುವ ಸಂಪಾದಕನೊಬ್ಬ, ಪರಸ್ಪರ ಮರ್ಜಿ ಕಾಯ್ದುಕೊಳ್ಳುವಲ್ಲಿ ಪತ್ರಿಕೆಯ ಇತೀಶ್ರೀ ಆಗುವುದನ್ನು ಮಾರ್ಮಿಕವಾಗಿ ಹೇಳಲಾಗಿದೆ ಇಲ್ಲಿ ‘ಗುರುತ್ವಾಕರ್ಷಣೆ’ ಎಂಬ ವೈಜ್ಞಾನಿಕ ಹೆಸರು, ಸಾಮಾಜಿಕ ಕರ್ತವ್ಯವನ್ನು ನೆನಪಿಸುವ ಪರಿ ಅನನ್ಯವಾಗಿದೆ ಎಂದಿದ್ದಾರೆ.
©2024 Book Brahma Private Limited.