ನರಸಿಂಹಮೂರ್ತಿ ಪ್ಯಾಟಿ ಅವರ 'ಬ್ರಾಹ್ಮಣ ಕುರುಬ' ಪ್ರಬಂಧ ರೂಪದ ಅನುಭವ ಕಥನಗಳು. ಬಾಲ್ಯದ ನೆನಪು, ತಾರುಣ್ಯ, ವೃತ್ತಿಪರ ಬದುಕಿನ ತಾಳಮೇಳಗಳು, ಜೀವನದಲ್ಲಿ ಕೈಗೊಂಡ ಪ್ರಯೋಗಗಳು ಸಹಜವಾಗಿ ಹೊರ ಸೂಸುತ್ತವೆ. ಈ ಪ್ರಬಂಧಗಳಲ್ಲಿ ಅಪ್ಪಟ ಮನುಷ್ಯರಂತೆ ಮುಷ್ಮಾ, ಹಸು, ಟಗರು, ಎಮುಗಳು ಕಾಣಿಸಿಕೊಂಡಿವೆ. ಮನುಷ್ಯಲೋಕದ ಸಹಜೀವಿಗಳಾಗಿ ಇಲ್ಲಿ ಜೀವ ತಳೆದಿವೆ. ಇವರ ಮುಖಾಮುಖಿ 'ಆಹಾ! ಮನುಷ್ಯ ಜೀವಿಗಳೇ' ಎಂದು ಉದ್ದಾರ ತೆಗೆಯುವಂತೆ ಮಾಡಬಲ್ಲದು. ನೆನಪುಗಳು ಹಳಹಳಿಕೆಯಾಗದೆ, ಬಾಳ ನಂಜು ಸುರಿಸದೆ, ಜೀವ ವೈಫಲ್ಯಗಳು ನಿರಾಶೆಯಲಿ ಕೊನೆಯಾಗದೆ, ಬದುಕಿನ ಅರ್ಥ ಹುಡುಕುವ ಅಪ್ಪಟ ಪ್ರಬಂಧಗಳಿವು.
ಕೃಷಿ ಖುಷಿಯ ಅಕ್ಷರ ಬೇಸಾಯ
ಕೊಪ್ಪಳದ ನರಸಿಂಹಮೂರ್ತಿ ಪ್ಯಾಟಿ ವೃತ್ತಿಯಲ್ಲಿ ಪತ್ರಕರ್ತರು. ಅಕ್ಷರ ಬೇಸಾಯದ ಜೊತೆಗೆ ಕೃಷಿಯಲ್ಲಿಯೂ ಪ್ರೀತಿ ಹೊಂದಿದವರು. ಖುಷಿಗಾಗಿ ತಮ್ಮ ಕೃಷಿ ಅನುಭವಗಳನ್ನು ಬರೆದಿಡುತ್ತಲೇ, ಲವಲವಿಕೆ ತುಂಬಿದ ಪ್ರಬಂಧ ಸಂಕಲನವನ್ನು ಓದುಗರ ಮುಂದಿಟ್ಟಿದ್ದಾರೆ. 'ಬ್ರಾಹ್ಮಣ ಕುರುಬ' ಎನ್ನುವ ಈ ಸಂಕಲನದಲ್ಲಿ 12 ಪ್ರಬಂಧಗಳಿವೆ. 'ಈ ಪ್ರಬಂಧಗಳಲ್ಲಿ ಬದುಕಿನಲ್ಲಿ ಕಂಡುಂಡ ಅನುಭವಗಳಿಗೆ ನವಿರು ವಿನೋದ ಮತ್ತು ಮಾನವೀಯ ಅಂತಃಕರಣಗಳ ನಗೆಯ ಹಾಯಿಯನು ಲೇಪಿಸಲಾಗಿದೆ.... ಈ ಪ್ರಬಂಧಕಾರನ ಮನಸು ನಂಜಾಗದೆ, ಅನುಭವದಲಿ ಸವಿಯನು ಹುಡುಕುವುದು, ನಕ್ಕು ಹಗುರಾಗಿ ಮತ್ತೆ ಬದುಕಿನ ಹೊಸ ಹೆಜ್ಜೆಗಳನಿಡುವುದು ಅತ್ಯಂತ ಗಮನಾರ್ಹ' ಎಂಬುದಾಗಿ ಪ್ಯಾಟಿಯ ಪ್ರಬಂಧಗಳ ಶಕ್ತಿಯನ್ನು ಕೇಶವ ಮಳಗಿ ವಿವರಿಸಿದ್ದಾರೆ. ನರಸಿಂಹಮೂರ್ತಿ ಪ್ರಬಂಧಗಳಿಗೆ ಒಂದು ಬಿಗಿ ನೇಯ್ಕೆಯಿದೆ. ತಮ್ಮ ಮೊದಲ ಪ್ರಬಂಧ ಸಂಕಲನದ ಮೂಲಕವೇ ಅವರು ಭರವಸೆ ಮೂಡಿಸಿದ್ದಾರೆ.
ಕೃಪೆ : ವಿಜಯ ಕರ್ನಾಟಕ (2020 ಜನವರಿ 26)
©2024 Book Brahma Private Limited.