‘ಕಾಡುಹಕ್ಕಿಯ ಹಾದಿ ನೋಟ’ ಹಾಡ್ಲಹಳ್ಳಿ ನಾಗರಾಜು ಅವರ ಆತ್ಮಕಥಾನಕ ಪ್ರಬಂಧ ಸಂಕಲನ. ಈ ಕೃತಿಯ ಕುರಿತು ಬರೆಯುತ್ತಾ ಪಯಣದ ವೇಳೆಯ ಪೇಚಿನ ಪ್ರಸಂಗಗಳನ್ನು ಲಘುದಾಟಿಯ ಬರಹಗಳನಾಗಿಸುವ ಪ್ರಯತ್ನದಲ್ಲಿ ತೊಡಗಿಕೊಂಡೆ. ನಂತರದಲ್ಲಿ ಅಂತರ್ಜಾಲ ಪತ್ರಿಕೆ ಅವಧಿಯಲ್ಲಿ ಲೇಖನಗಳು ಪ್ರಕಟಗೊಳ್ಳತೊಡಗಿದಂತೆ ಸಂಪಾದಕರಿಂದ ಆತ್ಮಕತೆಯ ತುಣುಕುಗಳೆಂದು ಕರೆಸಿಕೊಳ್ಳತೊಡಗಿದವು ಎನ್ನುತ್ತಾರೆ ಲೇಖಕ ಹಾಡ್ಲಹಳ್ಳಿ ನಾಗರಾಜ್. ಇಲ್ಲಿ ‘ಪ್ರಥಮ ಚುಂಬನಾ’, ‘ಪಯಣಕ್ಕಾಗಿ ತರಬೇತಿ’, ‘ಚಿಂತೆಯಿಲ್ಲದವನಿಗೆ’, ‘ಇರ್ರಿ ಸ್ವಲ್ಪ’..’ಬೆಣ್ಣೆ ತಗೊಳೋಕ್ಕೆ ಲೇಟಾಗುತ್ತೆ’, ‘ಹೌಸಿಂಗ್ ಬೋರ್ಡಿಂಗ್ ಹೊಡೆಯಯ್ಯ’, ‘ಏಯ್ ಬಾವಾ’, ‘ಸ್ಟಾಂಡ್ ಅಪ್..ಸ್ಟಾಂಡ್ ಅಪ್’, ‘ಬದುಕಿಕೊಳ್ಳಿ ಕುನ್ನಿಗಳಾ’ ‘ನೋಡಿದ್ರಾ ದೇವರ ಮಹಿಮೆ’, ‘ಚಿತೆಗೇರಿಸಿ ಆಗಿತ್ತು’, ‘ಕಾಡಿನ ಸಂಸ್ಕೃತಿಯ ಅವನತಿ’ ‘ಸುತ್ತು ಬಳಸಿನ ಹಾದಿ’, ‘ಸೂಫಿಬೇರಿಯ ತೋಟದಲ್ಲಿ’, ‘ಎಲ್ಲಿ ಮೊದಲಿನ ವೈಭವ’ ಹಾಗೂ ‘ಒಂದು ಬೇಟೆಯ ವೃತ್ತಾಂತ’ ಎಂಬ ಪ್ರಬಂಧಗಳು ಸಂಕಲನಗೊಂಡಿವೆ.
ಹಾಡ್ಲಹಳ್ಳಿ ನಾಗರಾಜು ಅವರು ಮೂಲತಃ ಹಾಸನಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹಾಡ್ಲಹಳ್ಳಿ ಗ್ರಾಮದವರು. ತಂದೆ- ಗುರುಶಾಂತೇಗೌಡರು, ತಾಯಿ- ಪುಟ್ಟಮ್ಮ. ಕಡುಬಡತನದ ರೈತಾಪಿ ಕುಟುಂಬದಲ್ಲಿ ಜನಿಸಿದ ಅವರು ಬಿ.ಎಸ್ಸಿ ಪದವೀಧರರಾಗಿದ್ದು, ಎನ್.ಸಿ.ಸಿ ಇಲಾಖೆಯಲ್ಲಿ 36 ವರ್ಷಗಳ ಕಾಲ ಸೇವೆಸಲ್ಲಿಸಿದ್ದಾರೆ. ಅಲ್ಲದೇ ಅವರ ಕಾರ್ಯವೈಖರಿಯಿಂದಾಗಿ ಮುಖ್ಯಮಂತ್ರಿಗಳ ಶ್ಲಾಘನಾಪತ್ರಕ್ಕೆ ಪಾತ್ರರಾಗಿದ್ದಾರೆ. ಎನ್.ಸಿ.ಸಿ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ ನಂತರ ಅದೇ ಇಲಾಖೆಯಲ್ಲಿ ಗೆಜೆಟೆಡ್ ಅಧಿಕಾರಿಯಾಗಿ ಸೇವೆಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಪ್ರಸ್ತುತ ಹಾಸನ ನಗರ ಸಮೀಪ ಅತ್ತಿಹಳ್ಳಿ ಎಂಬ ಗ್ರಾಮದಲ್ಲಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಅಪ್ಪಟ ಮಲೆನಾಡಿನ ಪರಿಸರದಲ್ಲಿ ಹುಟ್ಟಿಬೆಳೆದ ನಾಗರಾಜು ಅವರು ಕನ್ನಡ ಸಾಹಿತ್ಯಲೋಕದಲ್ಲಿ ತಮ್ಮದೇ ಛಾಪುಮೂಡಿಸಿದ್ದಾರೆ. ...
READ MORE