ಕಾಳನಾಮ ಚರಿತ್ರೆ ಇದೊಂದು ಹೊಸ ಬಗೆಯ ಪುಸ್ತಕ. ಬದುಕಿನ ಸಮಸ್ಯೆಯಲ್ಲಿ ಸಿಲುಕಿ ಸೊರಗಿದಾಗ ಒಂದು ಹಾಡು, ಹಕ್ಕಿಯ ಕೂಗು, ಮಗುವಿನ ಅಳು, ಒಂದು ಸಾಂತ್ವನದ ನುಡಿ ಮತ್ತೆ ಜೀವಜಲ ಉಕ್ಕಿಸುವಂತೆ ಈ ಬರಹಗಳೂ ಹೊಸ ಭರವಸೆ ಮೂಡಿಸುವ ಹಾಗಿವೆ.
ನಿತ್ಯ ಬದುಕಿನ ಜಂಜಡಗಳಲ್ಲಿ ನಿರ್ಲಕ್ಷಿಸಿ ಬಿಡಬಲ್ಲ ಸಣ್ಣ ಸಂಗತಿಗಳ ಹಿಂದೆ ಅಡಗಿರುವ ಸೊಬಗು, ಜೀವನ ಸೌಂದರ್ಯವನ್ನು ಯಾವುದೇ ಪೂರ್ವಗ್ರಹವಿಲ್ಲದೆ ಮುಕ್ತವಾಗಿ ಸ್ವೀಕರಿಸಿ, ಮನಸ್ಸನ್ನು ಕಹಿಯಾಗಿಸಿಕೊಳ್ಳದೆ ನಿರರ್ಥಕವೆನ್ನುವುದರಲ್ಲಿ ಹಿರಿದಾದ ಅರ್ಥವನ್ನು, ಸಿಪ್ಪೆಯಲ್ಲಿ ಸತ್ವವನ್ನು ಹುಡುಕುವ ಪರಿಯಿಂದ ಈ ಹಗುರ ಹರಟೆಗಳು ಆಕರ್ಷಕವಾಗಿವೆ. ಗಾಳಿಯ ಲಘುತ್ವ, ಮುಗ್ದತೆ ಮತ್ತು ಉಳಿವರಿಗೆ ಸಂಕೀರ್ಣವಾಗಿ ಕಂಡದ್ದರಲ್ಲಿ ನಿಷ್ಕಪಟತೆಯನ್ನು ಅರಸುವ ಉತ್ಸಾಹ ಈ ಬರಹಗಳ ಹಿಂದಿದೆ. ವಿನೋದ ಪ್ರಜ್ಞೆ, ವಸ್ತು ಭಾರವಾಗದಂತೆ ವಹಿಸುವ ಎಚ್ಚರ, ಎಲ್ಲಕ್ಕಿಂತ ಮಿಗಿಲಾಗಿ ಒಣಬೌದ್ಧಿಕ ಕಸರತ್ತುಗಳಿಲ್ಲದ ನೇರವಂತಿಕೆ ಈ ಸಲ್ಲಾಪಗಳ ಗುಣಾತ್ಮಕತೆಯನ್ನು ಹೆಚ್ಚಿಸಿವೆ.
ಕಾಳ ಮತ್ತು ಮನುಷ್ಯನ ನಡುವಿನ ನಂಟು- ಆ೦ಟುಗಳನ್ನು ಹಗುರ ಹರಟೆಯ ಹಂದರದ ರೂಪದಲ್ಲಿ ’ಕಾಳನಾಮ ಚರಿತೆ’ ಎಂ.ಆರ್.ಕಮಲ ಹೆಣೆದಿದ್ದಾರೆ. ಕಾಳನ ಜತೆಗಿನ ವಾಕಿಂಗ್, ಅವನಿಂದಾಗುವ ಎಡವಟ್ಟುಗಳನ್ನು ಸೊಗಸಾಗಿ ಚಿತ್ರಿಸಲಾಗಿದೆ. ಕಾಳನ ನೆಪದಲ್ಲಿ ಬದುಕಿನ ನಾನಾ ಬಣ್ಣಗಳು, ನೆರಳುಗಳು ಇಲ್ಲಿ ವಿವರಿಸಲಾಗಿದೆ. 'ಕಾಳನಾಮ ಚರಿತೆ' ಪುಸ್ತಕದಲ್ಲಿರುವ 72 ಕಿರು ಬರಹಗಳಿದ್ದು ಓದುಗರನ್ನು ಆಕರ್ಷಿಸುತ್ತದೆ.
ಕಾಳನಾಮ ಚರಿತೆ ಕೃತಿಯ ಕುರಿತು ಎಂ ಆರ್ ಕಮಲ ಅವರ ನುಡಿಗಳು.
©2024 Book Brahma Private Limited.