ಮಸಾಲೆ ಮೀಮಾಂಸೆ ಸಂಪೂರ್ಣಾನಂದ ಬಳ್ಕೂರು ಅವರ ಲಲಿತ ಪ್ರಬಂಧಗಳ ಸಂಕಲನ. ಕೃತಿಯ ಆರಂಭದಲ್ಲಿ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಸಣ್ಣಕತೆಯ ಸ್ವರೂಪದ ಮೋನು ಮಾಸ್ಟ್ರೂ, ಗುಪ್ಪಿ ಭಟ್ರೂ ಎಂಬ ಬರಹವಿದೆ. ಎರಡು ಪಾತ್ರಗಳನ್ನು ಕೇಂದ್ರವಾಗಿಸಿ ನಿರ್ವಹಿಸಿದ ಕಥನ ವಿನ್ಯಾಸದ ಈ ಬರಹದಲ್ಲಿ ಹಾಸ್ಯಮಿಶ್ರಿತ ಕಾಮ ನಿರೂಪಣೆಯನ್ನು ಕುಂದಾಪುರ ಕನ್ನಡ ಭಾಷೆಯ ಮೂಲಕ ಕಟ್ಟಿಕೊಡುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ. ಹೆಣ್ಣಿಗಾಗಿ ಜಾತಿಯನ್ನೂ ಕಳಚಿಕೊಳ್ಳುವ ಕಪಟ ಜಾತಿವಾದಿಯ ಮನೋಭೂಮಿಕೆಯನ್ನು ಬಯಲಾಗುವ ಅತ್ಯಂತ ತೀಕ್ಷ್ಣತೆಯನ್ನು ರುಕ್ಕುವಿನ ಪ್ರಸಂಗದಲ್ಲಿ ಗುರುತಿಸಬಹುದು. ಗ್ರಾಮೀಣ ಪರಿಸರದ ಎರಡು ಪಾತ್ರಗಳ ಜೊತೆಗೆ ಲೇಖಕರು ಅನುಸಂಧಾನ ಮಾಡುತ್ತಲೇ ಬರಹದ ಕೊನೆಯಲ್ಲಿ ಮೋನು ಮಾಸ್ಟ್ರು ಗುಪ್ಪಿ ಭಟ್ಟರಿಗೆ ತೋರುವ ವಿಧೇಯತೆಯಲ್ಲಿ ಜಾತಿಯ ಶ್ರೇಷ್ಠ-ಕನಿಷ್ಟತೆಗಳು ಪ್ರದರ್ಶನಗೊಳ್ಳುತ್ತವೆ. ರುಕ್ಕುವನ್ನು ಬಯಸಿ ಬರುವ ಎರಡು ಪಾತ್ರಗಳು ಮುಖಾಮುಖಿಯಾದಾಗ ಭಟ್ಟರು ಮುಟ್ಟಿದ ಎಂಜಲನ್ನು ಶೂದ್ರನೊಬ್ಬ ಪ್ರಸಾದದಂತೆ ಸ್ವೀಕರಿಸುತ್ತಾನೆ. ಗುಲಾಮಗಿರಿಯ ದೈನ್ಯತೆ ಅಕ್ಷರಸ್ಥ ಮೇಷ್ಟ್ರಲ್ಲೂ ಜೀವಂತವಾಗಿ ಉಳಿದಿದೆ ಎಂಬುದನ್ನು ಪ್ರಬಂಧ ಪ್ರಬಲವಾಗಿ ನಿರೂಪಿಸಿದೆ.
ಮೂಲತಃ ಕುಂದಾಪುರ ತಾಲ್ಲೂಕಿನ ಬಳ್ಕೂರು ಗ್ರಾಮದವರಾದ ಸಂಪೂರ್ಣಾನಂದ ಬಳ್ಕೂರು ಅವರು ಮಂಗಳೂರು ಸಂತ ಆಗ್ನೇಸ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಮೃತ ಸೋಮೇಶ್ವರರ ಯಕ್ಷಗಾನ ಪ್ರಸಂಗಗಳ ಕುರಿತು ಅಧ್ಯಯನ ನಡೆಸಿ ಪಿಎಚ್‌ಡಿ ಗಳಿಸಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಯಕ್ಷಾಮೃತ, ಮಸಾಲೆ ಮೀಮಾಂಸೆ ಮುಂತಾದವು. ...
READ MORE