‘ತುಸುವೆ ಕುಡಿವ ಗಂಡನ್ನ ಕೊಡು ತಾಯಿ’ ಬರಹಗಾರ ಗಣೇಶ ಅಮೀನಗಡ ಅವರ ಲಲಿತ ಪ್ರಬಂಧಗಳ ಸಂಕಲನವಿದು. ಮಧ್ಯಪಾನ ಸೇವನೆಯ ಸಮಸ್ಯೆ ಹಾಗೂ ಪರಿಣಾಮಗಳ ಕುರಿತು ಈ ಕೃತಿಯು ಸಮಗ್ರ ಚಿತ್ರಣ ನೀಡುತ್ತದೆ. ಕೃತಿಗೆ ಮುನ್ನುಡಿ ಬರೆದ ಖ್ಯಾತ ಸಂಗೀತಗಾರ ರಾಜೀವ ತಾರಾನಾಥರು, ‘ಈ ಸಂಕಲನ ನಮ್ಮೆಲ್ಲರಿಗೂ ತುಸು ನಿಂತು ಅನುಭವಿಸು, ಸಂಪೂರ್ಣ ನೋಡು ಎಂದು ಒತ್ತಾಯಿಸುತ್ತದೆ. ಬೇಜಾರು, ದುಃಖ, ಗಡಿಬಿಡಿ ಇವೆಲ್ಲದರ ಹಿಂದೆ ಇರತಕ್ಕಂತ ಒಂದು ಜಾಗೃತವಾದ ಹಾಗೂ ಸ್ಥಿರವಾದ ಅನುಭವ ಕೇಂದ್ರವನ್ನು ಗಮನಿಸು ಅಂತ ಹೇಳುವ ಹಾಗಿದೆ. ಇದು ನನ್ನ ಅನುಭವ, ಇದನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ’. ಎಂದು ಪ್ರಶಂಸಿಸಿದ್ದಾರೆ.
ಈ ಸಂಕಲನದಲ್ಲಿ ಇಪ್ಪತ್ತೆಂಟು ಪ್ರಬಂಧಗಳಿವೆ, ಇಲ್ಲಿನ ಪ್ರಬಂಧಗಳ ವಸ್ತುವೈವಿಧ್ಯತೆ, ಆ ವಸ್ತು ಸೃಜಿಸಿದ ಅನುಭವ ಜಗತ್ತಿನ ಪರಿಶೀಲನೆ ಹಾಗೂ ಲಲಿತ ಪ್ರಬಂಧಗಳ ಸಂರಚನೆಯ ಕುರಿತ ಚರ್ಚೆ ಎಂಬೆರಡು ನೆಲೆಗಳಲ್ಲಿ ಪರಿಶೀಲಿಸುವ ಟಿಪ್ಪಣಿಯಿದು.
ಈ ಸಂಕಲನದಲ್ಲಿ ನಮ್ಮ ಗಮನ ಸೆಳೆಯುವುದು ವಸ್ತುವಿನ ವೈವಿಧ್ಯತೆ, ರೈಲುಪಯಣ, ಮರ್ಕಟಸೇನೆ, ಅಗರಬತ್ತಿ, ಇಸ್ತ್ರಿಪೆಟ್ಟಿಗೆ, ಸಿನೆಮಾ, ವಿವಾಹ ಮೊದಲರಾತ್ರಿಯಿಂದ ಆರಂಭಿಸಿ ಶೌಚಾಲಯ, ಸಾವಿನವರೆಗೂ ವಿಸ್ತರಿಸಿದೆ. ಇಲ್ಲಿನ ವಸ್ತುವಿನ ಪಟ್ಟಿಯೆ ಪ್ರಬಂಧಗಳು ಒಳಗೊಳ್ಳುವ ಅನುಭವ ಜಗತ್ತಿನ ವೈವಿಧ್ಯತೆ, ವಿಶಾಲತೆಯನ್ನು ನಿರೂಪಿಸುತ್ತದೆ. ವರ್ತಮಾನ ಹಾಗೂ ಗತದ ಬದುಕಿನ ಮುಖಾಮುಖಿಯ ಚಿತ್ರಣ ಅನೇಕ ಪ್ರಬಂಧಗಳಲ್ಲಿದೆ. ಗತಿಸಿದ ಬದುಕನ್ನು ರಮ್ಯವಾಗಿ ಕಾಣುವ ಮನೋಭಾವ ಅಲ್ಲಲ್ಲಿದೆ. ಇದು ಸಂದ ಬದುಕಿನ ಹಳಹಳಿಕೆಯಂತೆ ಕಂಡರೂ, ಕೆಲವು ಪ್ರಬಂಧಗಳಲ್ಲಿ ನವಜೀವನ ಕ್ರಮದಲ್ಲಾದ ಪಲ್ಲಟಗಳನ್ನು ಹಿಡಿದಿಡಲು ಗತದ ನೆನಪುಗಳನ್ನು ದುಡಿಸಿಕೊಳ್ಳುವ ಅರ್ಥಪೂರ್ಣತೆಯು ಇಲ್ಲಿದೆ.
ವರ್ತಮಾನದ ಜೀವನದಲ್ಲಿ ವ್ಯಕ್ತಿಯ ಧೋರಣೆ, ವ್ಯಕ್ತಿತ್ವದಲ್ಲಾದ ಪಲ್ಲಟಗಳ ಗುರುತಿಸುವಿಕೆಯಷ್ಟೆ ಅಲ್ಲ ; ಮಾನವೀಯ ಸಂಬಂಧಗಳಲ್ಲಾದ ಪಲ್ಲಟಗಳನ್ನು ಕುರಿತು ಚಿಂತಿಸುತ್ತದೆ. ಸಾಂಘಿಕ ಬದುಕಿನ ನೆಲೆ ಕಣ್ಮರೆಯಾಗಿ ವ್ಯವಹಾರಿಕ ಬದುಕು, ಯಾಂತ್ರಿಕತೆ ಮತ್ತು 'ಶವಸಂಸ್ಕಾರ ಎಂಬ ಜಾತ್ರೆ' ಎಂಬೆರಡು ಪ್ರಬಂಧಗಳಲ್ಲಿ ಈ ವಿಚಾರ ದಟ್ಟವಾಗಿ ಅಭಿವ್ಯಕ್ತವಾಗಿದೆ. ‘ಚಾಳ’ಗಳಲ್ಲಿ ವಾಸಿಸುವ ಕುಟುಂಬಗಳ ನಡುವೆ ಆಸೂಯೆ, ಸ್ಪರ್ಧೆ, ಜಗಳ ಇರುವಂತೆಯೆ ಮೈತ್ರಿ, ಪರಸ್ಪರ ಹಂಚಿಕೊಂಡು ತಿನ್ನುವ ಮಾನವೀಯ ಸಂಬಂಧಗಳು ಇವೆ. ಇಂತಹ ಸಾಂಘಿಕ ಬದುಕಿನ ತಾಣಗಳು ಕಣ್ಮರೆಯಾಗಿ ಆ ತಾಣದಲ್ಲಿ ವಾಣಿಜ್ಯ ಸಂಕೀರ್ಣಗಳು ತಲೆ ಎತ್ತುತ್ತಿವೆ. ಸಾವು ಸೃಷ್ಟಿಸಬಲ್ಲ ಮರುಕ ಆಧುನಿಕ ಸಮಾಜದಲ್ಲಿ ಕಾಣೆಯಾಗುತ್ತಿರುವ ವಿಷಾದ ಎರಡನೆ ಪ್ರಬಂಧದಲ್ಲಿದೆ. ಅಪಾರ್ಟಮೆಂಟ್‌ಗಳ ಬದುಕಲ್ಲಿ ನೆರೆಯವರ ಸಾವಿನ ವಿಚಾರವು ತಿಳಿಯುವುದಿಲ್ಲ. ತಿಳಿದರೂ ಅದಕ್ಕೆ ಯಾಂತ್ರಿಕವಾಗಿ ಸ್ಪಂದಿಸುವ ಭಾವಶೂನ್ಯತೆಯಿದೆ.
ಕುಲಕಸುಬು ಸೇರಿ ವಿವಿಧ ವೃತ್ತಿಗಳನ್ನು ಅವಲಂಬಿಸಿದ ಜನರ ಬದುಕಿನಲ್ಲಿ ಸೃಷ್ಟಿಯಾದ ಬಿಕ್ಕಟ್ಟುಗಳ ಅನಾವರಣ ಇಲ್ಲಿನ ಪ್ರಬಂಧಗಳಲ್ಲಿದೆ. ಕೌದಿ ಹೊಲಿಯುವವರು, ಗಾದಿ ತಯಾರಿಸುವವರು, ಬಾಸಿಂಗ ತಯಾರಕರು, ವಾಚ್ ರಿಪೇರಿಯವರು, ಗಾಣದ ವೃತ್ತಿಯವರು, ಹಂದಿ ಸಾಕುವವರು, ನಗಾರಿ ಕಲಾವಿದರು, ಅಗರಬತ್ತಿ ತಯಾರಕರು. ಈಚಲು ಪೊರಕೆ, ಪ್ಲಾಸ್ಟಿಕ್ ಸಮಾನುಗಳನ್ನು ತಲೆಯ ಮೇಲೆ ಹೊತ್ತು ಮಾರುವವರು ಇವರೆಲ್ಲ ವರ್ತಮಾನದ ಬದುಕಿನಿಂದ ಬಾಧಿತರಾದವರು. ಇಲ್ಲಿ ಸೂಚಿಸಿದ ಎಷ್ಟೋ ವೃತ್ತಿಗಳು ವರ್ತಮಾನದಲ್ಲಿ ತಮ್ಮ ಅಸ್ತಿತ್ವಕ್ಕಾಗಿ ಸೆಣಸುತ್ತಿವೆ. ಗಡಿಯಾರ ರಿಪೇರಿಯನ್ನು ಅವಲಂಬಿಸಿ ಬದುಕನ್ನು ಕಟ್ಟಿಕೊಂಡ ವರ್ಗವು ಎದುರಿಸುತ್ತಿರುವ ಸಂಕಟ ವಿಚಿತ್ರವಾದದು. ಈ ವೃತ್ತಿಯನ್ನು ನಂಬಿದವರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಹೆಣಗುತ್ತಿದ್ದಾರೆ. ಪಾರಂಪರಿಕ ವೃತ್ತಿಗಳಾದ ಗಾಣದವರು, ಬಾಸಿಂಗ ತಯಾರಕರು, ಕೌದಿ ಹೊಲಿಯುವವರು ಸೇರಿದಂತೆ ಮೇಲೆ ಸೂಚಿಸಿದ ಅನೇಕರು ಆಧುನಿಕತೆಯ ಪ್ರಹಾರದ ಸಂಕಟಗಳಿಗೆ ಒಳಗಾಗಿದ್ದಾರೆ. ಇಂತಹ ಕುಲಕಸುಬಿನವರ ಸಮಸ್ಯೆಗಳ ಕಡೆ ಇಲ್ಲಿನ ಪ್ರಬಂಧಗಳು ನಮ್ಮ ಗಮನ ಸೆಳೆಯುತ್ತವೆ.
ಇಲ್ಲಿನ ಪ್ರಬಂಧಗಳು ಆಧುನಿಕತೆಯಿಂದ ವೃತ್ತಿಗಾರರದ ಬದುಕಿನಲ್ಲಿ ಎದುರಾದ ಬಿಕ್ಕಟ್ಟುಗಳ ನಿರೂಪಣೆಗಷ್ಟೆ ಸೀಮಿತವಾಗಿಲ್ಲ. ಆಧುನಿಕತೆಯ ಸವಾಲುಗಳನ್ನು ಮೀರಿ ಹೊಸಬದುಕನ್ನು ಕಟ್ಟಿಕೊಂಡ ನಿದರ್ಶನಗಳು 'ನಗಾರಿ ನಾದ', 'ಆಹಾ ಮೈಸೂರು ಪಾಕ್' ಪ್ರಬಂಧಗಳಲ್ಲಿದೆ. ಮೈಸೂರಿನ ಪೌರಕಾರ್ಮಿಕರು ಸಾಂಪ್ರದಾಯಿಕ ನಗಾರಿ ಕಲೆಯನ್ನು ಆಧುನಿಕ ಸಂದರ್ಭಕ್ಕೆ ಒಗ್ಗಿಸಿ ಯಶಸ್ವಿಯಾಗಿದ್ದಾರೆ, ಸಿಹಿತಿಂಡಿ ಮಾರಾಟದವರು, ಅಗರಬತ್ತಿ ತಯಾರಕರು ಸಹ ಯಶಸ್ವಿಯಾಗಿದ್ದಾರೆ.
ಇಲ್ಲಿನ ಬರಹಗಳನ್ನು ಲೇಖಕರು ಲಲಿತ ಪ್ರಬಂಧಗಳು ಎಂಬ ಹೆಸರಿನಲ್ಲಿ ಸಂಕಲಿಸಿದ್ದಾರೆ. ನಿಯಮ ರಾಹಿತ್ಯತೆಯೇ ಪ್ರಬಂಧಗಳ ಮುಖ್ಯ ಲಕ್ಷಣವಾದರೂ, ಲಲಿತ ಪ್ರಬಂಧಗಳಿಗೆ ಕೆಲವು ನಿರ್ದಿಷ್ಟ ಲಕ್ಷಣಗಳಿವೆ. ಈ ದೃಷ್ಟಿಯಿಂದ ಇಲ್ಲಿನ ಪ್ರಬಂಧಗಳನ್ನು ಗಮನಿಸಿದಾಗ ಕೆಲವು ಲಲಿತಪ್ರಬಂಧಗಳ ಕಕ್ಷೆಯಿಂದ ಹೊರಗುಳಿಯುತ್ತವೆ. “ಸುಗಂಧದ್ರವ್ಯ.”, “ನಿಂತ ಗಡಿಯಾರ..', 'ಕೌದಿ ಅಪ್ಪಿಕೊಂಡವರು' ಇತ್ಯಾದಿ ಬರಹಗಳು ಉತ್ತಮ ಲೇಖನಗಳಾಗಿ ಗಮನ ಸೆಳೆಯುತ್ತವೆ. ಆದರೆ ಲಲಿತಪ್ರಬಂಧಗಳ ಚೌಕಟ್ಟಿನಲ್ಲಿ ಗ್ರಹಿಸುವುದು ಕಷ್ಟ, ಇಲ್ಲಿನ ಕೆಲವು ಪ್ರಬಂಧಗಳಲ್ಲಿ ಒಂದೇ ಅನುಭವದ ವಿಭಿನ್ನ ಮಜಲುಗಳು ನಿರೂಪಿತವಾಗಿವೆ. ಆದರೆ ಈ ಅನುಭವಗಳು ಸಹಸಂಬಂಧದ ನಂಟನ್ನು ಬೆಳೆಸಿಕೊಳ್ಳದೆ ಬಿಡಿಬಿಡಿಯಾಗಿ ಪ್ರತ್ಯೇಕ ಅನುಭವಗಳಾಗಿ ನಿಲ್ಲುತ್ತವೆ. 'ಚಾಮುಂಡಿ ಭಾವಬಂಡಿ', ಮದುವೆಯ ಸುತ್ತಮುತ್ತ' ಈ ತರಹದ ಪ್ರಬಂಧಗಳು ತನ್ನ ಆಂತರ್ಯದಲ್ಲಿ ವಿಭಿನ್ನ ಅನುಭವಗಳನ್ನು ಒಳಗೊಂಡು ಸಹಸಂಬಂಧದ ನಂಟನ್ನು ಹೊಂದದೆ ಲಲಿತಪ್ರಬಂಧದ ಇಡಿಯಾದ ಸೊಗಸನ್ನು ಕಳೆದುಕೊಳ್ಳುತ್ತವೆ. ಇದು ಈ ಪ್ರಬಂಧಗಳ ಮಿತಿಯಾಗಿದೆ. 'ರಸಮಯ ರಾತ್ರಿ..' ಮಂಗಳ ಸಂಗ' ಇತ್ಯಾದಿ ಕೆಲವು ಉತ್ತಮ ಲಲಿತಪ್ರಬಂಧಗಳು ಇಲ್ಲಿವೆ. ಪ್ರಕಾರ ಬದ್ಧತೆಯ ಹಂಗನ್ನು ಬಿಟ್ಟು ಈ ಪ್ರಬಂಧಗಳನ್ನು ಓದಿದರೆ ಲೋಕವ್ಯಾಪಾರದ ವಿಭಿನ್ನ ನೆಲೆಗಳ ದರ್ಶನ ಮಾಡಿಸುತ್ತವೆ.
-ಸುಧಾಕರ ದೇವಾಡಿಗ ಬಿ
(ಹೊಸ ಮನುಷ್ಯ: ಅಕ್ಟೋಬರ್ 2020 ರ ಸಂಚಿಕೆ)
©2024 Book Brahma Private Limited.