`ಹಾಲಾಡಿಯಲ್ಲಿ ಹಾರುವ ಓತಿ’ ಕೃತಿಯು ಶಶಿಧರ ಹಾಲಾಡಿ ಅವರ ಪ್ರಬಂಧ ಸಂಕಲನವಾಗಿದೆ. ಒಟ್ಟು ಇಪ್ಪತ್ತಾರು ಪ್ರಬಂಧಗಳಿರುವ ಈ ಸಂಕಲನಕ್ಕೆ ಮುನ್ನುಡಿ ಬರೆದ ಬಿ ಜನಾರ್ಧನ ಭಟ್ ಅವರು ಈ ಪ್ರಬಂಧದ ಮೂಲಕ ಚಿತ್ರತವಾಗಿರುವ ಪರಿಸರ ಪ್ರೀತಿಯ ಹಳ್ಳಿಯ ಬದುಕಿನಲ್ಲಿ ಆರ್ಥಿಕ ದಾರಿದ್ರ‍್ಯ ಇರಬಹುದು, ಆದರೆ ಅದು ದಾರಿದ್ರ‍್ಯ ಎಂದು ಗೊತ್ತಾಗದಂತಹ ಒಂದು ಭಾವ ಶ್ರೀಮಂತಿಕೆ ಇಲ್ಲಿ ತುಂಬಿ ತುಳುಕುತ್ತಿದೆ ಎಂದಿರುವ ಮಾತು ಸತ್ಯ.
ಭಾವ ಶ್ರೀಮಂತಿಕೆಯ ಚಿತ್ರಗಳು
-----
ಹಾಲಾಡಿಯಲ್ಲಿ ಹಾರುವ ಓತಿ' ಪ್ರಬಂಧಗಳ ಸಂಕಲನವನ್ನು ಓದುತ್ತ ನಾನು ನನ್ನ ಊರಿನಲ್ಲಿ ಕಳೆದ ಬಾಲ್ಯದ ನೆನಪಿಗೆ ತಿರುಗಿ, ನಮ್ಮ ಊರಿನ ಕಾಡುಗಳಲ್ಲಿ ಓಡಾಡಿ ಒಂದಿಷ್ಟು ಹಣ್ಣುಗಳನ್ನು ಸಂಗ್ರಹಿಸಿ ತಿಂದಂತೆ, ಹಕ್ಕಿಗಳನ್ನು ಕಂಡು ಅವುಗಳ ಹಿಂದೆ ಹಾರಾಡಿದಂತೆ, ಮಾಳಗಳಲ್ಲಿ ಕಳೆದ ರಾತ್ರಿಗಳ ಹಾಗೂ ಅಲ್ಲಿ ಕರ್ಕಶವಾಗಿ ಕೂಗುವ ಹಕ್ಕಿಯ ನೆನಪಾಗಿ ಭಯಗೊಂಡಂತೆ, ಕೇದಿಗೆ, ಬಕುಳ ಮುಂತಾದ ಹೂವಿನ ಪರಿಮಳದಲ್ಲಿ ಅದ್ದಿಬಂದಂತೆ, ಎತ್ತರದ ಮರದ ತುದಿಯಿಂದ ಇಳಿದು ಬಂದ ವಾಯರಿನಲ್ಲಿ ರೇಡಿಯೋ ಧ್ವನಿಗಳು ಇಳಿದು ಬರುತ್ತವೆಯೇನೋ ಎಂದು ಯೋಚಿಸಿದ್ದ ಕಾಲ ಮರು ಅನುಭವಿಸಿದಂತೆ, ಪರಿಸರದಲ್ಲಿಯ ಮರ-ಗಿಡಗಳೆಲ್ಲ ಖಾಲಿ ಖಾಲಿ ಆಗಿ ಅಲ್ಲಿ ಇರುವ ಮಂಗಗಳಾದಿಯಾಗಿ ಕಾಡುಪ್ರಾಣಿಗಳಲ್ಲ ನಮ್ಮನ್ನು ಮುತ್ತಿ ಕಣ್ಣೀರು ಸುರಿಸಿದಂತೆ ಏನೇನೋ ಆಲೋಚನೆಯಲ್ಲಿ ತೇಲಿ ಹೋದೆ. ಅಥವಾ ಹಾರುವ ಓತಿಯ ಬಾಲ ಹಿಡಿದು ಹಾರಾಡಿದೆ ಅನಿಸುತ್ತದೆ!
ನಾನು ಉತ್ತರ ಕನ್ನಡ ಜಿಲ್ಲೆಯ ಕಾಡು ಹಳ್ಳಿಯವನು. ಶಶಿಧರ ಹಾಲಾಡಿಯವರು ಉಡುಪಿ ಜಿಲ್ಲೆಯವರು. ಪಕ್ಕದ ಜಿಲ್ಲೆ. ಅಲ್ಲಿ ಬಳಸುವ ಆಡು ಭಾಷೆಗೂ ನಮ್ಮ ಆಡು ಭಾಷೆಗೂ ಹೋಲಿಕೆಯೂ ಇದೆ, ಸ್ವಲ್ಪ ವ್ಯತ್ಯಾಸವೂ ಇದೆ. ಆದರೆ ಪರಿಸರದ ಸಂಗತಿಗಳೆಲ್ಲ ಒಂದೇ ಅನಿಸುತ್ತದೆ. ಹಾಗಾಗಿಯೇ ಅವರ ಪ್ರಬಂಧದ ಸಂಗತಿಗಳೆಲ್ಲ ನಮ್ಮ ಊರಿನಲ್ಲಿಯೇ ನಡೆದಂತೆ ನನಗೆ ಅನಿಸಿದುದು. ಆದರೆ ಬೇರೆ ಪರಿಸರದವರು ಓದಿದಾಗ ಕೂಡಾ ಅವರು ಓದುತ್ತಾ ಓದುತ್ತಾ ಪರಿಸರದೊಂದಿಗೆ ಒಂದಾಗುವಂತೆ... ಅಲ್ಲಿಯ ಅನುಭವಗಳನ್ನೆಲ್ಲ ತಮ್ಮದಾಗಿಸಿಕೊಳ್ಳುವಂತೆ ಸರಳವಾಗಿ ಹಾಗೂ ಆಪ್ತವಾಗಿ ಬರೆದಿದ್ದಾರೆ ಶಶಿಧರ ಹಾಲಾಡಿಯವರು.
ಹಾರುವ ಓತಿ ಎಂದ ಕೂಡಲೇ ತೇಜಸ್ವಿಯವರ ನೆನಪಾಗದೆ ಇರದು. ಅಷ್ಟು ಓದುಗರ ಮೇಲೆ ಪ್ರಭಾವ ಬೀರಿದ ಕಾದಂಬರಿ `ಕರ್ವಾಲೋ'. ಅದರ ಪ್ರಸ್ತಾಪವನ್ನೂ ಈ ಪ್ರಬಂಧಗಳಲ್ಲಿ ಮಾಡಿದ್ದಾರೆ ಲೇಖಕರು. ಹಾರುವ ಓತಿಯನ್ನು ನಾನು ಸಹ ನೋಡಿದವನೇ. ಆದರೆ ಈಗೆಲ್ಲ ತುಸು ಅಪರೂಪವಾಗಿವೆ. ಈ ಪ್ರಬಂಧದಲ್ಲಿ ಅದನ್ನು ತಮ್ಮ ಮನೆಯ ಬಳಿ ಕಂಡ ವಿವರವನ್ನೆಲ್ಲ ಬಿಚ್ಚಿಡುತ್ತಾ ಕಣ್ಣ ಮುಂದೆಯೇ ಬರುವಂತೆ ಮಾಡಿದ್ದಾರೆ ಶಶಿಧರ ಅವರು. ಅವರೇ ಬರೆದಿರುವಂತೆ ಇಪ್ಪತ್ತು ಮೂವತ್ತು ವರ್ಷಗಳಷ್ಟು ಹಿಂದೆ `ಓ ಓಂತಿಯಾ' ಎಂದು ಇದು ಏನೂ ವಿಶೇಷವಲ್ಲ ಎಂಬಂತೆ ಜನರಾಡಿಕೊಳ್ಳುತ್ತಿದ್ದರು... ಆದರೆ ಈಗ ಪಶ್ಚಿಮ ಘಟ್ಟದ ಕಾಡಿನಂತೆ ಕರಗಿ ಹೋಗಿದ್ದು ಇವನ್ನೆಲ್ಲ ಕಂಡವರಿದ್ದಾರೆ ಎನ್ನುವುದೇ ಕೆಲವು ಓದುಗರಿಗೆ ಆಶ್ಚರ್ಯ ಹಾಗೂ ಕುತೂಹಲ ಉಂಟುಮಾಡುತ್ತದೆ.
ಸೂರಕ್ಕಿ ಎಲ್ಲರ ಮನೆಯ ಹೂವಿಗೂ ಬರುತ್ತಿರುತ್ತದೆ. ಮೊನ್ನೆ ಮೊನ್ನೆ ಕಟ್ಟಿದ ಅದರ ಗೂಡೊಂದು ನಮ್ಮ ಮನೆಯ ಬಾಗಿಲ ಹತ್ತಿರ ನೇತಾಡುತ್ತಿರುವುದನ್ನು ಈಗಲೂ ನೀವು ಬಂದರೆ ನೋಡಬಹುದು. ಹೌದು, ಸೂರಕ್ಕಿಗಳು ತಮಗಿಂತಲೂ ಉದ್ದವಾದ ಕೊಕ್ಕಿನೊಂದಿಗೆ ಹೂವಿಂದ ಹೂವಿಗೆ ಹಾರಾಡುತ್ತಿದ್ದರೆ ಅವನ್ನೆಲ್ಲಾ ನೋಡುತ್ತ ಎಷ್ಟೊಂದು ಖುಷಿ ಪಡಬಹುದು. ಇಂತಹ ಸೂರಕ್ಕಿಗಳ ಕುರಿತು ಬರೆದಿರುವ ಶಶಿಧರ ಹಾಲಾಡಿಯವರು ಇನ್ನೊಂದು ಜಾತಿಯ ಚೆನ್ನಾಗಿ ಹಾಡುವ ಹಕ್ಕಿಯೊಂದನ್ನೂ ಪರಿಚಯಿಸಿದ್ದಾರೆ. ಅದರ ಹಾಡು `ಹೋರಿ ಸತ್ತು ಹೋಯಿತೋ/ ಹಣ ಕೊಟ್ಟಾಯಿತೋ' ಎನ್ನುವ ಹಾಗೆ ಕೇಳುತ್ತದೆ ಎನ್ನುತ್ತಿದ್ದ ಜನರು ಅದರ ಕುರಿತು ಹೇಳುವ ಕಥೆಯೊಂದನ್ನು ಕೂಡಾ ಬರೆದಿದ್ದಾರೆ. ಅದೇ ಹಕ್ಕಿಯ ಹಾಡು ನಮ್ಮ ಊರಿನ ಜನಕ್ಕೆ `ಕೂಸು ಕೊಟ್ಟು ಹೋಯಿತು/ ಹೊಳೆ ಕಟ್ಟಿ ಹೋಯಿತು' ಎಂಬಂತೆ ಕೇಳಿ ಮತ್ತೊಂದು ಕಥೆ ಹುಟ್ಟಿಕೊಳ್ಳುತ್ತದೆ. ಜಕಣಿ ಹಕ್ಕಿ ಎಂಬ ಗೂಬೆಯ ಜಾತಿಯ ಸೇರಿದ ಹಕ್ಕಿಯ ವಿಕಾರವಾದ ಕೂಗು, ಅದರ ಕುರಿತಾದ ಭಯ ನಂಬಿಕೆಗಳನ್ನೆಲ್ಲ ಓದುತ್ತಾ ಹೋದಂತೆ ನಮ್ಮಲ್ಲಿ ಇರುವ ಹಕ್ಕಿಗಳ ಹಾಗೂ ಅವುಗಳ ಹಿಂದಿನ ಕಥೆಗಳೆಲ್ಲ ತೆರೆದುಕೊಳ್ಳುತ್ತಾ ಹೋಗುತ್ತವೆ.
ಮನೆಯ ಸುತ್ತಲಿನ ಮಾವಿನ ಮರ ಹಲಸಿನ ಮರಗಳ ಹಣ್ಣುಗಳು... ಕಾಡಿನ ಸಂಪಿಗೆ ಹಣ್ಣು, ಹೆಬ್ಬಲಸಿನ ಹಣ್ಣು ಎಲ್ಲಾ ಬಾಯಲ್ಲಿ ನೀರೂರಿಸಿದರೆ... ಮೊದಲ ಮಳೆ ಬಿದ್ದಾಗ ಕೆಂಪಾಗಿ ಹೊಳೆಯುವ ಮುತ್ತುಗಳಂತೆ ಕಾಣುವ ವೆಲ್ವೆಟ್ ಕೀಟ ಎಲ್ಲಾ ಕಾಣಸಿಗುವುದು ಈ ಪುಸ್ತಕದಲ್ಲಿಯೇ. ದಾರದ ರೀತಿಯ ಬಿಳಿ ಹುಳ ಠಣ್ ಎಂದು ಸುಮಾರು ಮೂರು ಅಡಿ ಎತ್ತರ ಜಿಗಿದು ಅಡಿಕೆ ಸೋಗೆಯ ಅಡಿಯಲ್ಲಿ ಕಾಣೆಯಾಗುವುದು, ಐದು ಅಡಿ ಎತ್ತರ ಜಿಗಿಯುವ ಮಿಡಿ ನಾಗರ ಎಲ್ಲ ನಮಗೆ ಆಶ್ಚರ್ಯ ಕುತೂಹಲ ಹುಟ್ಟಿಸುತ್ತವೆ. ಹಸಿರು ಹಾವು, ಒಳ್ಳೆ ಹಾವು, ಕೇರೆ ಹಾವುಗಳಂತವು ಮನುಷ್ಯರ ಪ್ರೀತಿಯ ಹಾವುಗಳಾಗಿ ಗಮನ ಸೆಳೆಯುತ್ತವೆ. ಮರ ಹಾವು ನಾಗರಹಾವುಗಳಂತಹ ವಿಷದ ಹಾವುಗಳ ಕುರಿತು ಎಚ್ಚರಿಕೆಯೂ ಇಲ್ಲಿದೆ.
ಮಲೆನಾಡು ಎಂದರೆ ಮಳೆಯ ನಾಡು ಎಂಬಂತೆ ಹೊಯ್ಯುವ ಮಳೆ, ತುಂಬಿಕೊಳ್ಳುವ ಹೊಳೆ ಜಲಪಾತಗಳ ಸದ್ದು, ಕಪ್ಪೆಗಳ ಹಾಡುಗಳೆಲ್ಲ ನಮ್ಮನ್ನು ಪುಳಕಿತಗೊಳಿಸುತ್ತಾ ಹೋದರೆ... ಪುನಗ ಬೆಕ್ಕಿನ ಪರಿಮಳದಂತಹ ಸಂಗತಿಗಳು ಬೇರೆಯದೇ ಅನುಭವಕ್ಕೆ ಕರೆದೊಯ್ಯುತ್ತವೆ. ಕೊಡಚಾದ್ರಿಯ ರೋಪ್‌ವೇ ನಮ್ಮನ್ನು ವಿವೇಚನೆಗೆ ಸಿಲುಕಿಸಿ ಆತಂಕ ಹುಟ್ಟಿಸುತ್ತಾ ಮಲೆನಾಡಿನಲ್ಲಿ ಮಂಗಗಳ ಕಾಟ ಮುಂತಾದ ಇಂದಿನ ಅನೇಕ ಸಮಸ್ಯೆಗಳೂ ನಮ್ಮ ಕಣ್ಣ ಮುಂದೆ ಬರುತ್ತಾ ಸಾಗುತ್ತವೆ.
`ವಾಂಟರ್ಕ' ಎಂದರೆ ಒಂದು ಜಾತಿಯ ಪುಟ್ಟ ಆಮೆ. ಇದು ಬಿತ್ತನೆ ಗದ್ದೆಗಳಲ್ಲಿ ಓಡಾಡಿ ದಾರಿ ಮಾಡುತ್ತಿದ್ದವು. ರಾತ್ರಿ ಇವು ಕಟ್ಟೆಗಳಿಲ್ಲದ ಬಾವಿಗೆ ಹಾರಿ ದುಡುಂ ಡುಂ ಸದ್ದು ಮಾಡುತ್ತಿದ್ದವು... ಇಂತಹ ಸಂಗತಿಗಳೆಲ್ಲ ಯಾರಿಗೆ ಆಪ್ತವಾಗುವುದಿಲ್ಲ ಹೇಳಿ? ದೇವರ ಕಾಡು, ಅರಳಿ ಮರಗಳೆಲ್ಲ ನಮ್ಮ ಮುಂದೆ ಬಂದು ನಮಗೆ ಪರಿಸರದ ಪಾಠ ಹೇಳುತ್ತಾ ಪರಿಸರ ಪ್ರೀತಿ ಹೃದಯಕ್ಕೆ ದಾಟಿಸುತ್ತವೆ. ಕೊನೆಯಲ್ಲಿ ಬರುವ ಅರವತ್ತು ಹೆಕ್ಟೇರ್ ಬಯಲು ಭೂಮಿ ಖರೀದಿಸಿ ಅದರಲ್ಲಿ ಗೊಂಡಾರಣ್ಯವನ್ನು ಬೆಳೆಯುವಂತೆ ಮಾಡಿದ ಹಾಗೂ ತನ್ನ ಅನುಭವವನ್ನು `ವೈಟ್ ಬೀಚ್, ದ ರೈನ್ ಫಾರೆಸ್ಟ್ ಇಯರ್ಸ' ಪುಸ್ತಕ ಬರೆದು ಹೊರ ತಂದ ಜರ್ಮೇನ್ ಗ್ರಿಯರ್ ಎಂಬ ಮಹಿಳೆಯ ಪರಿಸರ ಕಾಳಜಿಯನ್ನು ನಮಗೆ ದಾಟಿಸಲು ಪ್ರಯತ್ನಿಸುತ್ತದೆ.
ಒಟ್ಟು ಇಪ್ಪತ್ತಾರು ಪ್ರಬಂಧಗಳಿರುವ ಈ ಸಂಕಲನಕ್ಕೆ ಮುನ್ನುಡಿ ಬರೆದ ಬಿ ಜನಾರ್ಧನ ಭಟ್ ಅವರು ಈ ಪ್ರಬಂಧದ ಮೂಲಕ ಚಿತ್ರತವಾಗಿರುವ ಪರಿಸರ ಪ್ರೀತಿಯ ಹಳ್ಳಿಯ ಬದುಕಿನಲ್ಲಿ ಆರ್ಥಿಕ ದಾರಿದ್ರ‍್ಯ ಇರಬಹುದು, ಆದರೆ ಅದು ದಾರಿದ್ರ‍್ಯ ಎಂದು ಗೊತ್ತಾಗದಂತಹ ಒಂದು ಭಾವ ಶ್ರೀಮಂತಿಕೆ ಇಲ್ಲಿ ತುಂಬಿ ತುಳುಕುತ್ತಿದೆ ಎಂದಿರುವ ಮಾತು ಸತ್ಯ. ಇಂತಹ ಹಳ್ಳಿಯ ಬದುಕಿನ ಭಾವ ಶ್ರೀಮಂತಿಕೆಯ ಚಿತ್ರಗಳ ಹೊತ್ತಿಗೆಯನ್ನು ಓದಿಯೇ ಅಅನುಭವಿಸಬೇಕು ಎಂದು ಹೇಳುತ್ತಾ ಲೇಖಕರಾದ ಶಶಿಧರ ಹಾಲಾಡಿಯವರನ್ನೂ, ಅಂದವಾಗಿ ಪ್ರಕಟಿಸಿರುವ ಅಭಿನವ ಪ್ರಕಾಶನವನ್ನೂ ಅಭಿನಂದಿಸುತ್ತೇನೆ.
*ತಮ್ಮಣ್ಣ ಬೀಗಾರ
©2025 Book Brahma Private Limited.