ಯಶವಂತ ಚಿತ್ತಾಲರ ’ಸಾಹಿತ್ಯದ ಸಪ್ತಧಾತುಗಳು’ ಎಂಬ ಈ ಕೃತಿ, 'ಸೃಜನಜಿಜ್ಞಾಸೆ'ಯ ಒಂದು ಪ್ರಯೋಗ. ಇಂತಹ ಜಿಜ್ಞಾಸೆಯು ಸಾಹಿತ್ಯದ ಬಗ್ಗೆ ಒಟ್ಟಾರೆ ಹೊಸ ಗ್ರಹಿಕೆಗಳನ್ನು ಮಂಡಿಸುತ್ತದೆ. ಜೊತೆಗೆ ಸಂಬಂಧಿಸಿದ ಲೇಖಕನ ಕೃತಿಯ ಅಭ್ಯಾಸದಲ್ಲಿ ಓದುಗನಿಗೆ ಉಪಯುಕ್ತ ಆಗಬಹುದಾದ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ನೀಡುತ್ತದೆ.
ಹಿರಿಯ ಕವಿ ವಿಮರ್ಶಕ ಎಚ್.ಎಸ್. ವೆಂಕಟೇಶಮೂರ್ತಿ ಅವರು ಈ ಕೃತಿಯ ಕುರಿತು ’ಸೃಜನ ಪ್ರಕ್ರಿಯೆಯ ಜಿಜ್ಞಾಸೆಯು ಸಾಹಿತ್ಯ ಮೀಮಾಂಸೆಗಿಂತ ಭಿನ್ನ. ವಿವಿಧ ಸೃಷ್ಟಿಶೀಲರು ತಮ್ಮ ಕ್ರಿಯಾಶೀಲತೆಯ ಒತ್ತಾಯ, ಭಾಷೆಯ ಮೂಲಕ, ಕೈಜಾರಿದ ಅನುಭವವೊಂದು ಮೈದಾಳುವ ಚೋದ್ಯ, ಅನಿರೀಕ್ಷಿತವಾದದ್ದು ರೂಪಕ ಶರೀರಿಯಾಗಿ ಪ್ರತ್ಯಕ್ಷವಾಗುವ ವೈಚಿತ್ರ್ಯ, ಬರವಣಿಗೆಯ ಹಿಂದಿನ ತಾತ್ವಿಕತೆ, ಬರವಣಿಗೆಯ ಕ್ರಮ, ಬರೆಯುವ ಕಾಲದ ಮನಃಸ್ಥಿತಿ, ಭಾಷೆ-ಲಯವಸ್ತುವಿನ ಆಯ್ಕೆಯ ಸಮಸ್ಯೆ, ವಸ್ತು ಮತ್ತು ಬಂಧದ ಬಿಕ್ಕಟ್ಟು, ಕೃತಿಯ ಆಂತರಿಕ ಮಿಡಿತ ಮತ್ತು ಬಹಿರಂಗದ ಒತ್ತಾಯಗಳ ಮುಖಾಮುಖಿ ಮುಂತಾದ ಸಂಗತಿಗಳನ್ನು, ತಮ್ಮ ಸೃಜನಶೀಲ ಅನುಭವವನ್ನೇ ಆಧಾರವಾಗಿಟ್ಟುಕೊಂಡು ಚರ್ಚಿಸಿದಲ್ಲಿ, ಅದು 'ಸೃಜನಜಿಜ್ಞಾಸೆ' ಯನ್ನು ಒಂದು ಶಾಸ್ತ್ರವಾಗಿ ಬೆಳೆಸಬಲ್ಲುದು’ ಎಂದು ಬರೆದಿದ್ದಾರೆ.
ಎಚ್‌ಎಸ್‌ವಿ ಅವರು ’ಒಂದು ಹಕ್ಕಿಯ ಅಸ್ತಿತ್ವವನ್ನು ಹಕ್ಕಿಯ ರೆಕ್ಕೆಗಳು' ಮತ್ತು 'ಆಕಾಶ' ಎರಡೂ ಕೂಡಿ ನಿರ್ಣಯಿಸುತ್ತವೆ ಎಂಬುದನ್ನು ನಾವು ಒಪ್ಪುವುದಾದರೆ, ಲೇಖಕನ ಸೃಜನ ಜಿಜ್ಞಾಸೆಯು, ಕೃತಿಯ ಗ್ರಹಿಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂಬುದನ್ನು ನಾವು ಒಪ್ಪಲೇಬೇಕು’ ಎಂದು ವಿವರಿಸುತ್ತಾರೆ.
©2024 Book Brahma Private Limited.