‘ಪ್ರಾಸಂಗಿಕ ಪ್ರಬಂಧಗಳು’ ಕೃತಿಯು ಎನ್. ಬಾಲಸುಬ್ರಹ್ಮಣ್ಯ ಅವರ ಲೇಖನಗಳ ಸಂಕಲನವಾಗಿದೆ. ಈ ಕೃತಿಯ ಕುರಿತು ಎಲ್.ಎಸ್. ಶೇಷಗಿರಿರಾವ್ ಅವರು ಹೀಗೆ ಹೇಳಿದ್ದಾರೆ; ‘ಮೂರು ದಶಕಗಳ ಕಾಲ ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯವನ್ನು ಬೋಧಿಸಿ ಇಂಗ್ಲಿಷ್ ಕನ್ನಡ ನಿಘಂಟಿಗಾಗಿ ಶ್ರಮಿಸಿದ ಎನ್. ಬಾಲಸುಬ್ರಹ್ಮಣ್ಯ ಅವರ ಲೇಖನಗಳು ಇಲ್ಲಿವೆ. ಪ್ರಾಚೀನ ಗ್ರೀಸ್ ಮತ್ತು ಭಾರತಗಳ ಕಾವ್ಯಮೀಮಾಂಸೆಯಿಂದ ಕನ್ನಡದ ನವ್ಯ ವಿಮರ್ಶೆಯವರೆಗೆ ಚಾಚಿಕೊಂಡಿರುವ ಈ ಲೇಖನಗಳು ಹಿಂದಿನ ಪರಂಪರೆಯನ್ನು ಸಮಕಾಲೀನ ಚಿಂತನೆಯನ್ನೂ ಅರಗಿಸಿಕೊಂಡ ಅಧ್ಯಯನದ ಪಕ್ವ ಫಲ ಇದಾಗಿದೆ’ ಎಂದು ಪ್ರಶಂಸಿಸಿದ್ದಾರೆ.
ಅನುವಾದಕ ಹಾಗೂ ಸಂಪಾದಕರಾಗಿ ಕನ್ನಡ ಸಾಹಿತ್ಯಕ್ಕೆ ಅನೇಕ ಕೊಡುಗೆಗಳನ್ನು ನೀಡಿರುವ ಬಾಲಸುಬ್ರಹ್ಮಣ್ಯ ಎನ್. ಹುಟ್ಟಿದ್ದು 1926 ಜನವರಿ 02 ರಂದು ಮೈಸೂರಿನ ನಂಜನಗೂಡಿನಲ್ಲಿ. ತಂದೆ ನರಸಿಂಹಶಾಸ್ತ್ರಿ, ತಾಯಿ ಲಕ್ಷ್ಮಮ್ಮ. ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿದರು. ಸಂಸ್ಕೃತ ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಪರಿಣಿತರು. ಇಂಗ್ಲೀಷ್-ಕನ್ನಡ ನಿಘಂಟುವಿನ ಪ್ರಧಾನ ಸಂಪಾದಕರಾಗಿದ್ದರು. 'ಭಾರತೀಯ ಕಾವ್ಯ ಮೀಮಾಂಸೆ' ಬೃಹತ್ ಗ್ರಥವನ್ನು ಇಂಗ್ಲಿಷಿಗೆ ಭಾಷಾಂತರಿಸಿದ ಹಿರಿಮೆ ಅವರದು. ಅರಿಸ್ಟಾಟಲನ ಕಾವ್ಯಮೀಮಾಂಸೆ, ಹೆರೇಸನ ಸಾಹಿತ್ಯ ವಿಮರ್ಶೆ, ಕಲೆಗಳು ಮತ್ತು ಮಾನವ, ವೇದಾಂತಸಾರ, ಮೃಗಾಲಯದ ಮಹನೀಯರು, ಅಮರಕೋಶ ಅವರ ಪ್ರಮುಖ ಸಂಪಾದಿತ ಕೃತಿಗಳು. ಅವರ ಈ ಸಾಹಿತ್ಯ ಸೇವೆಗೆ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ದೊರೆತಿದೆ. ...
READ MORE