‘ತೂಗು ಮಂಚದಲ್ಲಿ ಕೂತು’ ಶ್ರೀನಿಧಿ ಡಿ.ಎಸ್ ಅವರ ಸುಲಲಿತ ಪ್ರಬಂಧಗಳ ಸಂಕಲನ. ಮಲೆನಾಡಿನಿಂದ ಬಂದವರಿಗೆ ಕವಿತೆ ಭಾರ, ಸಣ್ಣಕತೆ ಕ್ಷಣಿಕ, ಕಾದಂಬರಿ ಅಧಿಕ. ಪ್ರಬಂಧ ಆಪ್ಯಾಯಮಾನ, ದಟ್ಟವಾದ ಕಾಡು, ಚಿತ್ತಾರ ಬರೆದ ಮರಗಳ ನೆರಳು, ನೀಲಾಕಾಶ, ಪಶ್ಚಿಮ ಘಟ್ಟಗಳ ಸಾಲು- ಇವೆಲ್ಲವೂ ಸೇರಿ ಕೊಡುವ ಅವರ್ಣನೀಯವಾದ ಆನಂದವನ್ನು ಪ್ರಬಂಧಗಳೂ ಕೊಡುತ್ತವೆ. ಅಂಥ ಸಂತೋಷವನ್ನು ಬೇಷರತ್ ನೀಡಿದಂಥ ಅನೇಕ ಲಹರಿಗಳು ಈ ತೂಗುಮಂಚದಲ್ಲಿ ಕೂತು..' ಸಂಕಲನದಲ್ಲಿವೆ. ನೆನಪು, ಕಲ್ಪನೆ, ಬಯಕೆ ಮತ್ತು ಸಂತೃಪ್ತಿ ಬೆರೆತಂಥ ಸ್ಥಿತಿಯೊಂದನ್ನು ಡಿ ಎಸ್ ಶ್ರೀನಿಧಿ ಇಲ್ಲಿಯ ಬರಹಗಳಲ್ಲಿ ಆವಾಹನೆ ಮಾಡಿಕೊಂಡಿದ್ದಾರೆ. ಸಣ್ಣಗೆ ತೂಗುತ್ತಿರುವ ಮಂಚ, ಕಿರಿದಾಗುತ್ತಿರುವ ಬಯಲು, ಪಟ್ಟಣವೇ ಸರಿದಂತೆ ಭಾಸವಾಗುವ ಮೆಟ್ರೋ, ಗಾಂಧೀಬಜಾರಿನ ನಡುವೆ ಒಳಗಣ್ಣಿಗೆ ಕಂಡ ಅಂಗಳ, ದೂರಪ್ರಯಾಣದ ದುಗುಡ ಮತ್ತು ಸುಮ್ಮಾನ, ಸೇತುವೆಯ ಕಟಾಂಜನದಿಂದ ಕಾಣುವ ಅನೂಹ್ಯ ಜಗತ್ತು- ಹೀಗೆ ಶ್ರೀನಿಧಿ ನನ್ನ ಬಾಲ್ಯಕ್ಕೂ ತಾರುಣ್ಯಕ್ಕೂ ಕನ್ನ ಹಾಕಿ ತಂದಿರುವ ಅನೇಕ ನೆನಪುಗಳು ಇಲ್ಲಿವೆ. ಈ ಬರಹಗಳ ತನ್ಮಯತೆಯೇ ಇವುಗಳ ಶಕ್ತಿ, ಶ್ರೀನಿಧಿಯೊಳಗೆ ಉಕ್ಕುವ ಹುಮ್ಮಸ್ಸಿದೆ. ಅವರು ದನಿಯಲ್ಲಿ ಉತ್ಸಾಹ ತುಳುಕಿಸುತ್ತಾ ಕಣ್ಣರಳಿಸುತ್ತಾ ಎತ್ತರದ ದನಿಯಲ್ಲಿ ತಮ್ಮ ಸಂತೋಷವನ್ನು ಹಂಚಿಕೊಳ್ಳುವ ಶೈಲಿಯಲ್ಲೇ ಇಲ್ಲಿಯ ಪ್ರಬಂಧಗಳೂ ಇವೆ. ಇವು ಒಂದು ತೆರದಲ್ಲಿ ಶ್ರೀನಿಧಿಯ ಭಾವಸರೋವರದಿಂದ ಕೋಡಿಹರಿದು ಸೃಷ್ಟಿಯಾದ ಪುಟ್ಟ ಪುಟ್ಟ ಕೊಳಗಳಂತಿವೆ. ಇವುಗಳನ್ನು ಓದುವಾಗ ಈ ಜಗತ್ತಿನಲ್ಲಿ ಇನ್ನೂ ದುಂಡುಮಲ್ಲಿಗೆಯ ಪರಿಮಳವೂ ಹುಲ್ಲುಬಯಲಿನ ನಡುವಿನ ಮಂಜುಬಿದ್ದ ಹಾದಿಯೂ ಮಳೆಗಾಲದ ಮಿಂಚು ಅರೆಕ್ಷಣ ಬೆಳಗಿ ತೋರುವ ದಟ್ಟ ಕಾಡೂ ನಮಗೆ ಸಂತೋಷ ಕೊಡಬಲ್ಲವು ಎಂಬ ನಂಬಿಕೆ ನೆಲೆಗೊಳ್ಳುತ್ತದೆ.
©2024 Book Brahma Private Limited.