ಈ ಕೃತಿ ಕನ್ನಡ ವಿಭಕ್ತಿಗಳ ಐತಿಹಾಸಿಕ ಅಧ್ಯಯನ ಮಾಡುವ ಸಂದರ್ಭದಲ್ಲಿ ಕಂಡುಕೊಂಡ ಮಹತ್ವದ ಅಂಶಗಳನ್ನು ಒಳಗೊಂಡಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಮಂಡಿಸಲ್ಪಟ್ಟ ಬಿಡಿ ಸಂಶೋಧನಾ ಲೇಖನಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಇದು ಒಟ್ಟಾಗಿ ಕನ್ನಡ ವಿಭಕ್ತಿಗಳು ಸಾಗಿಬಂದ ಬಗೆಯನ್ನು ವಿವರಿಸುತ್ತದೆ. ಲೇಖಕರು ತಮ್ಮ ಸಂಶೋಧನಾ ಪ್ರಬಂಧ ಕನ್ನಡ ವಿಭಕ್ತಿಗಳ ಐತಿಹಾಸಿಕ ಬೆಳವಣಿಗೆ ಕೃತಿಯಲ್ಲಿ ಚರ್ಚಿಸಿರುವ ಅಂಶಗಳನ್ನು ಸಾರರೂಪವಾಗಿ ಈ ಕೃತಿ ಮಂಡಿಸುತ್ತದೆ. ವಿಭಕ್ತಿಯ ಕುರಿತು ಜಾಗತಿಕ ಮಟ್ಟದಲ್ಲಿ ನಡೆದ ಹಲವು ಸಂಶೋಧನೆಗಳ ಭಿತ್ತಿಯಲ್ಲೇ ಇಲ್ಲಿನ ಲೇಖನಗಳು ಮೂಡಿವೆ. ಜೊತೆಗೆ ಒಟ್ಟು ದ್ರಾವಿಡ ಭಾಷೆಗಳ ಹಿನ್ನೆಲೆಯಲ್ಲಿ ಕನ್ನಡವನ್ನು ಇರಿಸಿ ನೋಡಿದ್ದರಿಂದ ಇಲ್ಲಿನ ನಿಲುವುಗಳಿಗೆ ಹೆಚ್ಚು ಸ್ಪಷ್ಟತೆ ಲಭಿಸಿದೆ.ಸಾಹಿತ್ಯ ಕೃತಿ, ಶಾಸನಗಳು, ಆಡುನುಡಿ ಎಲ್ಲವನ್ನೂ ಗಮನಿಸಿರುವುದರಿಂದ ಸಮಗ್ರತೆ ಕಾಣುತ್ತದೆ. ಈ ಎಲ್ಲ ದೃಷ್ಟಿಯಿಂದಲೂ ಇಲ್ಲಿನ ಸಂಶೋಧನಾ ಲೇಖನಗಳು ಹೊಸದಾಗಿ ಸಂಶೋಧನೆಗೆ ಹೊರಡುವವರಿಗೆ ಮಾರ್ಗದರ್ಶಕವಾಗುವ ರೀತಿಯಲ್ಲಿವೆ.
ಬಸವರಾಜ ಕೋಡಗುಂಟಿ ಇವರು ಪ್ರಸ್ತುತ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಗುಲ್ಬರ್ಗದಲ್ಲಿ ಕನ್ನಡ ಭಾಷಾ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾಷಾ ವಿಜ್ಞಾನದಲ್ಲಿ ಆಸಕ್ತಿ ಇರುವ ಇವರು ಕನ್ನಡ ಮಾತಿನ ಇತಿಹಾಸ, ದ್ರಾವಿಡ ಮಾತಿನ ಮನೆತನ, ವಿಬಕ್ತಿ ಮೊದಲಾದ ಕ್ಶೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಕನ್ನಡ ವಿಬಕ್ತಿ ರೂಪಗಳ ಅಯ್ತಿಹಾಸಿಕ ಬೆಳವಣಿಗೆ, ಮಸ್ಕಿ ಕನ್ನಡದಾಗ ವಿಬಕ್ತಿ ರೂಪಗಳು, ಮಾತೆಂಬುದು, ಬಾಶಿಕ ಕರ್ನಾಟಕ. ಇತರ ಕೃತಿಗಳೆಂದರೆ ಭಾಷಾ ವಿಶ್ಲೇಷಣೆ, ಊರು, ಹೈದರಾಬಾದ್ ಕರ್ನಾಟಕ, ಕರ್ನಾಟಕದ ಮಾತುಗಳು, ದರಗಾ, ಹೈದರಾಬಾದ್ ಕರ್ನಾಟಕ ಸಾಲು ಸಂಪುಟಗಳು-6 (ಊರು, ಕೋಟೆ, ಶಾಸನ, ಕೆರೆ-ಬಾವಿ, ಕನ್ನಡ, ದರಗಾ) ಮುಂತಾದವು. ...
READ MORE