‘ಬಹುತ್ವದ ಭಾರತ ಮತ್ತು ಬೌದ್ಧ ತಾತ್ವಿಕತೆ’ ಲೇಖಕ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರ ಪ್ರಬಂಧ ಸಂಕಲನ. ಈ ಕೃತಿಗೆ ಕೆ. ಸತ್ಯನಾರಾಯಣ ಅವರ ಬೆನ್ನುಡಿ ಇದೆ. ಮೊದಲಿಗೆ ನಮ್ಮ ಗಮನಸೆಳೆಯುವುದು ಚಿನ್ನಸ್ವಾಮಿಯವರ ವಿಸ್ತಾರವಾದ, ಆಳವಾದ ಓದು. ಬೌದ್ಧ ಸಾಹಿತ್ಯ, ಅಂಬೇಡ್ಕರ್, ವಚನ ಸಾಹಿತ್ಯ, ಅದರಲ್ಲೂ ಬಸವಣ್ಣನವರ ವ್ಯಕ್ತಿತ್ವ-ಬರವಣಿಗೆಯ ರೀತಿ- ಈ ಸಂಪುಟದ ಬರವಣಿಗೆಯ ಮುಖ್ಯ ಪ್ರೇರಣೆಯಾಗಿದೆ. ಸಂತೋಷದ ಸಂಗತಿಯೆಂದರೆ, ಇವರು ಓದಿದ್ದನ್ನೆಲ್ಲ INTERNALISE ಮಾಡಿಕೊಂಡಿರುವ ರೀತಿ. ನಾವು ಎಷ್ಟು ಓದುತ್ತೇವೆ ಎಂಬುದು ಮುಖ್ಯವಲ್ಲ. ಓದಿದ್ದರಲ್ಲಿ ಎಷ್ಟು ಅಂತಸ್ಥ ವಾಗುತ್ತದೆ, ಎಷ್ಟು ನಮ್ಮ ಸಂವೇದನೆಯ ಭಾಗವಾಗುತ್ತದೆ, ಎಷ್ಟು ಮಾಹಿತಿಯಾಗಿಯೇ ನಮ್ಮಿಂದ ಹೊರಗೆ ಉಳಿದುಬಿಡುತ್ತದೆ ಎಂಬುದು ನಮ್ಮ ನಮ್ಮ ಅದೃಷ್ಟಕ್ಕೆ ಬಿಚ್ಚಿದ್ದು, ಲೇಖಕರ ಓದು, ಅಂತಸ್ಥವಾಗಿರುವುದರಿಂದಲೇ, ಅವರ ಬರವಣಿಗೆಯಲ್ಲಿ ಸರಳತೆ, ಪಾರದರ್ಶಕತೆಯಿರುವುದರ ಜೊತೆಗೆ, ಮಾನ್ಯರ ಹತ್ತಿರ ಪ್ರತೀ ವಿಚಾರಕ್ಕೂ, ವಿದ್ಯಮಾನಕ್ಕೂ ಒಂದು ಕತೆ, ಒಂದು ಪ್ರಸಂಗ, ಒಂದು ಉಲ್ಲೇಖ ಕೂಡ ಸಹಜವಾಗಿಯೇ ಇದ್ದು ಒದಗಿಬರುತ್ತದೆ ಎನ್ನುತ್ತಾರೆ ಕೆ.ಸತ್ಯನಾರಾಯಣ. ಜೊತೆಗೆ ಲೇಖಕರಿಗೆ ಅವರ ನಿಲುವು-ಮನೋಧರ್ಮದ ಬಗ್ಗೆ ಖಚಿತತೆಯಿದೆ. ಆದರೆ ಅದನ್ನು ಓದುಗರ ಮೇಲೆ ಹೇರಿಬಿಡಬೇಕಂಬ ಆತುರ ಮತ್ತು ಹಟವಿಲ್ಲ. ಬಹುಪಾಲು ಬರಹಗಳ ಮಾದರಿ OPEN ENDED. ನಿಮ್ಮ ವಿಚಾರ-ನಿಲುವುಗಳನ್ನು ಸೇರಿಸಿಕೊಂಡೇ ಈ ಬರಹಗಳನ್ನು ಓದಬಹುದು ಎನ್ನುತ್ತಾರೆ.
ಲೇಖಕರ ಮುಖ್ಯ ಉದ್ದೇಶ ಓದುಗರನ್ನು ಒಂದು ನಿಲುವಿಗೆ, ಸಿದ್ಧಾಂತಕ್ಕೆ ಒಪ್ಪಿಸಿಬಿಡಬೇಕು ಎನ್ನುವುದಕ್ಕಿಂತ ಅವರನ್ನು ವಿದ್ಯಮಾನದ ಪರಿಕಲ್ಪನೆಗಳ ಆಳಕ್ಕೆ, ವೈವಿಧ್ಯತೆಗೆ, ಪ್ರಸ್ತುತತೆಗೆ ತೆರೆಯಬೇಕು, ಪ್ರಚೋದಿಸಬೇಕು ಎಂಬ ಕಡಗೇ ಇದೆ. ಇದು ಸಂವಾದ-ಸಂಭಾಷಣೆಯನ್ನು ಬೆಳೆಸುವ, ಆತ್ಮೀಯವಾಗಿಸುವ ಸರಿಯಾದ ಕ್ರಮ. ಈ ಮಾದರಿ, ಈವತ್ತಿನ ವೈಚಾರಿಕ ದಾಯಾದಿತನ, ಅಸಹಿಷ್ಣುತೆ ತುಂಬಿದ ವಾತಾವರಣದ ಅಗತ್ಯವಾಗಿ ನಾವೆಲ್ಲರೂ ಕಷ್ಟಪಟ್ಟಾದರೂ ರೂಢಿಸಿಕೊಳ್ಳಬೇಕಾದದ್ದು ಎನ್ನುತ್ತಾರೆ ಕೆ. ಸತ್ಯನಾರಾಯಣ.
©2024 Book Brahma Private Limited.