ಅಮ್ಮನ ಜೋಳಿಗೆಯಲ್ಲಿ ತಾಯಿ ಮತ್ತು ಮಗುವಿನ ಸಂಬಂಧಗಳನ್ನು ವಸ್ತುವಾಗಿಟ್ಟುಕೊಂಡ ಇಲ್ಲಿನ ಪ್ರಬಂಧಗಳಿಗೆ ಕಥನ ಶಕ್ತಿಯೂ ಇದೆ.ಇಲ್ಲಿರುವ ಕಿರು ಪ್ರಬಂಧಗಳನ್ನು ಓದಿದಾಗ ನನ್ನ ಮನಸ್ಸು ಇಬ್ಬನಿಯಲ್ಲಿ ತೊಯ್ದ ಚಿಗುರೆಲೆಯಂತೆ ಒದ್ದೆಯಾಗಿ ಹೋಯಿತು. ಅಂಥ ಸುಕುಮಾರ ಶಕ್ತಿ ಅವರ ಬರವಣಿಗೆಗಿದೆ...” ಎನ್ನುವ ಎಚ್.ಎಸ್. ವೆಂಕಟೇಶಮೂರ್ತಿ ಅವರ ಮಾತುಗಳಲ್ಲಿ ನಿಜವಿದೆ. ಒಬ್ಬ ತಾಯಿ ಹೇಗೆ ತಾನು ತನ್ನ ಮಗುವಿನ ಮೂಲಕ ಬೆಳೆಯುತ್ತಾ ಹೋದೆ ಎನ್ನುವುದನ್ನು ನಿರೂಪಿಸುತ್ತಾ ಹೋಗುವ ಬರಹಗಳು ಇವು. 'ತಾಯ್ತನದ ಧಾರಣ ಶಕ್ತಿ, ಅಪರಿಮಿತ ವಾತ್ಸಲ್ಯ ಈ ಎಲ್ಲವನ್ನೂ ಹೆಗ್ಗಳಿಕೆಯ ಗುಣಗಳಾಗಿ ನಾವು ಯಾವಾಗಲೂ ಮೆರೆಸುತ್ತಿರುತ್ತೇವೆ. ನಿಜವೆಂದರೆ ಈ ಎಲ್ಲ ಗುಣಗಳನ್ನೂ ನಮಗೆ ಕಲಿಸಿಕೊಡುವ ಮಹಾಗುರು ಮಗು'' ಎನ್ನುವ ಆಶಾದೇವಿಯವರ ಮಾತುಗಳು ಇಲ್ಲಿನ ಪ್ರತಿ ಪ್ರಬಂಧದಲ್ಲೂ ಮರು ಜೀವ ಪಡೆಯುತ್ತದೆ. ಒಂದು ಮಗು ಹುಟ್ಟುವಾಗ ಅದರ ಜೊತೆ ಜೊತೆಗೇ ಒಬ್ಬ ತಂದೆ ಅಥವಾ ಒಬ್ಬ ತಾಯಿ ಕೂಡ ಹುಟ್ಟುತ್ತಾಳೆ. ಇಲ್ಲಿ ಮಗು ಬೆಳೆಯುತ್ತಾ ಹೋದ ಹಾಗೆ, ಆ ತಂದೆ ಅಥವಾ ತಾಯಿ ಕೂಡ ಬೆಳೆಯಬೇಕು. ಈ ಹೊಣೆಗಾರಿಕೆಯನ್ನು ಸೂಚ್ಯವಾಗಿ ಪ್ರಬಂಧಗಳು ನಮಗೆ ತಿಳಿಸಿಕೊಡುತ್ತದೆ.
©2024 Book Brahma Private Limited.