‘ಪ್ರಾಣೇಶ ಪಯಣ’ ಗಂಗಾವತಿ ಪ್ರಾಣೇಶ್ ಅವರ ಪ್ರಬಂಧ ಸಂಕಲನ. ಈ ಕೃತಿಗೆ ಲೇಖಕ ಜೋಗಿ ಅವರು ಬೆನ್ನುಡಿ ಬರೆದಿದ್ದಾರೆ. ಈ ಕಷ್ಟಕಾಲದಲ್ಲಿ ನಗಿಸುವುದು ಕೂಡ ಒಂದು ಪುಣ್ಯದ ಕೆಲಸ. ಆ ಕೆಲಸವನ್ನು ಅತ್ಯಂತ ಶ್ರದ್ಧಾಭಕ್ತಿಗಳಿಂದ ಮಾಡಿಕೊಂಡು ಬರುತ್ತಿರುವ ಗಂಗಾವತಿ ಪ್ರಾಣೇಶ್, ಕನ್ನಡದ ಹೆಮ್ಮೆಯನ್ನು ಗಡಿಯಾಚೆ ದಾಟಿಸಿದವರು ಎನ್ನುತ್ತಾರೆ ಜೋಗಿ.
ಹಾಸ್ಯವೆಂಬುದು ಸಭ್ಯತೆಯ ಗಡಿದಾಟುತ್ತಿದ್ದ ದಿನಗಳಲ್ಲಿ ಅಕುಟಿಲ ಮುಗುಳ್ನಗೆಯೊಂದು ಮೂಡುವಂತೆ ಮಾಡಿದ್ದು ಗಂಗಾವತಿ ಪ್ರಾಣೇಶ್ ಸಾಧನೆ. ಇದೀಗ ಪ್ರಾಣೇಶ್ ಅಕ್ಷರ ಜಗತ್ತಿಗೂ ಕಾಲಿಟ್ಟಿದ್ದಾರೆ. ಅವರ ಬರಹಗಳ ಶಕ್ತಿಯೆಂದರೆ ಅವರ ವಿಸ್ತಾರವಾದ ಓಡಾಟ ಮತ್ತು ವೈವಿಧ್ಯಮಯ ವ್ಯಕ್ತಿಗಳೊಂದಿಗಿನ ಒಡನಾಟ. ಆಧುನಿಕ ಜನಪದ ರೂಪುಗೊಳ್ಳುವುದೇ ಸಮಾಜದ ಜೊತೆಗಿನ ಒಡನಾಟದಿಂದ ಎಂದು ನಂಬಿರುವ ಎಲ್ಲರಿಗೂ ಪ್ರಾಣೇಶ್ ಹೇಳುವ ಪ್ರಸಂಗಗಳು ಪ್ರತ್ಯಕ್ಷ ಸಾಕ್ಷಿ. ಅವರು ಸುತ್ತಿದ ಊರು, ಕೇಳಿದ ಕತೆ, ಓದಿದ ಅಖ್ಯಾನ, ಅನುಭವಿಸಿದ ತಲ್ಲಣ, ಆ ಕ್ಷಣದ ಗ್ರಹಿಕೆ ಮತ್ತು ಅನುಭವದಿಂದ ಹುಟ್ಟಿದ ಅನುಭಾವ- ಎಲ್ಲವೂ ಈ ಕೃತಿಯೊಳಗೆ ಹರಳುಗಟ್ಟಿವೆ.
©2025 Book Brahma Private Limited.