ಲೇಖಕ ಸುಭಾಶಚಂದ್ರ ಕಶೆಟ್ಟಿ, ಬಾಚನಾಳ ಅವರು ಬರೆದ ಪ್ರಬಂಧಗಳ ಸಂಕಲನ-ವಾಯುವಿಹಾರದಲ್ಲಿ ಚರ್ಚೆ. ಒಟ್ಟು 11 ವೈಚಾರಿಕ ಪ್ರಬಂಧಗಳಿವೆ. ಸಮಾಜದಲ್ಲಿ ಆಗುತ್ತಿರುವ ಅತ್ಯಾಚಾರ,ಅನ್ಯಾಯ,ಮಾನವರ ಜೀವನದಲ್ಲಿ ನಡೆಯುವ ಅನಾಹುತ ಹೀಗೆ ಹತ್ತು ಹಲವಾರು ವಿಚಾರಗಳು ಪ್ರಸ್ತಾಪವಾಗಿವೆ. ವಿನಾಯಕ- ಆನಂದರ 'ವಾಯು ವಿಹಾರದಲ್ಲಿ ಚರ್ಚೆ'ಯ ಮುಖಾಂತರ ಓದುಗರ ಮುಂದೆ ಸಾದರ ಪಡಿಸಲಾಗಿದೆ. ಗೆಳೆಯರು ಕೂಡಿಕೊಂಡು ಮುಂಜಾನೆ ಹಾಗೂ ಸಂಜೆ ವಾಯು ವಿಹಾರಕ್ಕೆ ಹೋಗುವುದು ಸಾಮಾನ್ಯ. ವಾಯುವಿಹಾರದ ವೇಳೆ ಬುಡ ಕೊನೆವಿಲ್ಲದ ಹಲವಾರು ವಿಷಯಗಳು ಚರ್ಚೆ ಆಗುತ್ತವೆ. ಅದರಂತೆ ವಿನಾಯಕ ಹಾಗೂ ಆನಂದರು ತಮ್ಮ ಜೀವನದಲ್ಲಿ ಹಾಗೂ ಸಮಾಜದಲ್ಲಿ ಎದ್ದುಕಾಣುವ ಹಲವಾರು ವಿಷಯಗಳನ್ನು ಚರ್ಚೆ ಮಾಡುತ್ತಿರುವುದು ಇಲ್ಲಿಯ ಪ್ರಬಂಧಗಳ ವಸ್ತು. ಇವು ಬದುಕಿನ ಚಿತ್ರಣವಾಗಿವೆ. ಒಳ್ಳೆಯ ಬದುಕಿನೆಡೆಗೆ ಬೆಳಕು ತೋರಿಸುವುದೇ ಈ ಪ್ರಬಂಧಗಳ ಮುಖ್ಯ ಉದ್ದೇಶ. ಮಹಿಳೆಯರ ಮೇಲಾಗುತ್ತಿರುವ ಅನ್ಯಾಯ, ಮದ್ಯಪಾನದ ಅಪಾಯಗಳು, ವರದಕ್ಷಿಣೆ ತೆಗೆದುಕೊಳ್ಳಬೇಕೋ ಬೇಡವೋ, ಲಂಚ ನಿರ್ಮೂಲನೆ ಎಂಬ ಬಗ್ಗೆಯೂ ಪ್ರಸ್ತಾಪವಿದೆ. ಶರಣರ ವಚನಗಳು ಕೇವಲ ಪಠಿಸಿದರೆ ಸಾಲದು ಆಚರಣೆಗೆ ತಂದರೆ ಉತ್ತಮ ಎಂಬ ಸಂದೇಶವೂ ಇದೆ. ಒಂದು ದಿನ ಆತ್ಮಹತ್ಯೆ ಬಗ್ಗೆ ಇನ್ನೊಂದು ದಿನ ಚಲನಚಿತ್ರಗಳ ಬಗ್ಗೆ, ಮಗದೊಂದು ದಿನ ಸರಕಾರಿ ಕಾರ್ಯವೈಖರಿ,ಅಲ್ಲಿ ಕೆಲಸ ಮಾಡುವ ಅಧಿಕಾರಿಗಳ ಹಾಗೂ ಗುಮಾಸ್ತರ ಬಗ್ಗೆ ಚರ್ಚೆ ಹೀಗೆ ಪ್ರಬಂಧಗಳಿಗೆ ವಸ್ತುವನ್ನು ಒದಗಿಸಿಕೊಳ್ಳಲಾಗಿದೆ. ಹೀಗೆ, ವಿಷಯ ಪ್ರತಿಪಾದನೆಗೆ ವಾಯುವಿಹಾರದ ವೇಳೆಯನ್ನು ಲೇಖಕರು ಬಳಸಿಕೊಂಡಿದ್ದು ಇಲ್ಲಿಯ ತಂತ್ರ.
©2024 Book Brahma Private Limited.