‘ಉದ್ದ ಲಂಗದ ಕಾಲೇಜು ದಿನಗಳು’ ಹರೀಶ್ ಟಿ.ಜಿ ಅವರ ಲಲಿತ ಪ್ರಬಂಧಗಳ ಸಂಕಲನವಾಗಿದೆ. ಕೃತಿಯ ಬೆನ್ನುಡಿಯಲ್ಲಿ ಸುಮನ ಕೇಶವ್ ಹೀಗೆ ಹೇಳಿದ್ದಾರೆ; "ಉದ್ದಲಂಗದ ಕಾಲೇಜು ದಿನಗಳು" ಕೃತಿಯನ್ನು ಓದಿ ಮುಗಿಸಿದಾಗ ನನಗಂತೂ ನನ್ನ ಚೇತೋಹಾರಿಯಾದ ಬಾಲ್ಯದ ದಿನಗಳೇ ನೆನಪಾದವು. ಆ ದಿನಗಳಲ್ಲಿ ನಮ್ಮ ಗ್ರಾಮೀಣ ಪ್ರದೇಶಕ್ಕೆ ರಸ್ತೆಯಿರಲಿಲ್ಲ, ವಿದ್ಯುತ್ ಇರಲಿಲ್ಲ. ಇನ್ನೂ ಹೇಳಬೇಕೆಂದರೆ ಈ ಕೃತಿಯು ಚಿತ್ರಿಸಿರುವ ತೊಂಭತ್ತರ ದಶಕದ ಕಾಲಘಟ್ಟದಲ್ಲಿ ನಮಗೆ ಹೊಟ್ಟೆತುಂಬ ಆಹಾರವೂ ಇರಲಿಲ್ಲ. ಆದರೆ ಇದನ್ನು ಮೀರಿ ನಮಗೆ ಆಗ ಭುಜಗಳಿಗೆ ರೆಕ್ಕೆಯಿತ್ತು. ಆ ರೆಕ್ಕೆಗಳು ನಮ್ಮನ್ನು ಎಲ್ಲಿಗೆ ಬೇಕೆಂದರಲ್ಲಿಗೆ ಕರೆದೊಯ್ಯುತ್ತಿದ್ದವು. ನಾವಲ್ಲಿ ಮನಬಂದಷ್ಟು ಹೊತ್ತು ಕಾಲಕಳೆದು ಎದೆಯ ತುಂಬ ಪರಮ ವಿಶ್ವಾಸವನ್ನು ತುಂಬಿಕೊಂಡು ಮರಳುತ್ತಿದ್ದೆವು. ಈ ವಿಶ್ವಾಸವೇ ನಮ್ಮನ್ನು ಅಂದಿನಿಂದ ಇಂದಿನವರೆಗೂ ಪೊರೆದಿದೆ. ಇಲ್ಲಿ ಇನ್ನೊಂದು ಸಂಗತಿಯನ್ನೂ ಗುರುತಿಸಬೇಕು ಹರೀಶರು ನಾಲ್ಕು ದಶಕದ ಹಿಂದಿನ ಬದುಕನ್ನು ಕಟ್ಟಿಕೊಡುವ ರೀತಿಯೇ ಸೊಗಸು. ಊರು, ಮನೆ, ಊಟ-ಉಪಚಾರ, ಹಸುಕರು, ಉದ್ಯೋಗ, ಶಾಲೆ, ಆಟ, ಉಡುಗೆ-ತೊಡುಗೆ, ಕಲೆ, ಆಚಾರ-ವಿಚಾರಗಳು ನಮ್ಮನ್ನು ಆಗಿನ ಕಾಲದ ಸಮೃದ್ಧತೆಯೆಡೆಗೆ ಕೊಂಡೊಯ್ಯುತ್ತಿರುವಂತೆಯೇ ವರ್ತಮಾನದ ಅಭಿವೃದ್ಧಿಯ ಬೆಳಕಿನಲ್ಲಿ ಅತ್ಯಂತ ವೇಗವಾಗಿ ಪಲ್ಲಟವಾಗುತ್ತಿರುವ, ಗಾಬರಿ ಹುಟ್ಟಿಸುತ್ತಿರುವ, ಅನಾರೋಗ್ಯಕರ ಸ್ಪರ್ಧೆಗೆ ನಮ್ಮನ್ನು ದೂಡುತ್ತಿರುವ ಸಂಗತಿಗಳ ಕಡೆಗೂ ಲೇಖಕರು ನಮ್ಮ ನೋಟ ಹರಿಯುವಂತೆ ಮಾಡುತ್ತಾರೆ. ಈ ಬದಲಾವಣೆಗಳು ತರುತ್ತಿರುವ ಸುಖವೋ ದುಃಖವೋ ಸಂಕಟವೋ ಇವು ಯಾವುದನ್ನೂ ನಾವು ಬೇಡವೆಂದು ದೂರಮಾಡುವಂತಿಲ್ಲ. ಹಳೆಯದನ್ನು ಒಪ್ಪಿಕೊಂಡಂತೆ ಹೊಸದನ್ನೂ ಅಪ್ಪಿಕೊಳ್ಳಲೇಬೇಕು. ಇದೇ ಬದುಕು. ಇದೇ ಉದ್ದಲಂಗದ ಕಾಲೇಜು ದಿನಗಳ ಕತೆ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು.
©2024 Book Brahma Private Limited.