‘ಉಡದಾರ’ ಲೇಖಕ ಶರಣಬಸವ ಕೆ. ಗುಡದಿನ್ನಿ ಅವರ ಪ್ರಬಂಧ ಸಂಕಲನ. ಈ ಕೃತಿಗೆ ಹಿರಿಯ ಕತೆಗಾರ ಕೇಶವ ಮಳಗಿ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ದಣೇರ ಬಾವಿ' ಸಂಕಲನದ ಮೂಲಕ ಕಥಾಲೋಕಕ್ಕೆ ಪರಿಚಿತರಾದ ಶರಣಬಸವ ಕೆ. ಗುಡದಿನ್ನಿಯವರು ಇದೀಗ ಹೊಸದೊಂದು ಪ್ರಕಾರದಲ್ಲಿ ತಮ್ಮ ಗದ್ಯ ಬರಹವನ್ನು ಪಣಕ್ಕಿಡುತ್ತಿದ್ದಾರೆ.ಕನ್ನಡ ನವೋದಯ ಕಾಲದಲ್ಲಿ ಅರಳಿ ಘಮಿಸಿದ್ದ ಲಲಿತ ಪ್ರಬಂಧ ಪ್ರಕಾರವು ಆಮೇಲೆ ಆಗೀಗ ತನ್ನ ಶಕ್ತಿಸಾಮರ್ಥ್ಯವನ್ನು ಮಿಂಚಿನಂತೆ ತೋರಿಸುತ್ತಿದ್ದರೂ ಕಥೆ, ಕವಿತೆ, ಕಾದಂಬರಿ ಇತರ ಪ್ರಕಾರಗಳಂತೆ ಸಹಜ ವಿಕಾಸಗೊಂಡು ಕನ್ನಡ ಸಾರಸ್ವತಲೋಕವನ್ನು ತಬ್ಬಿಕೊಂಡಂತಿಲ್ಲ. ಕನ್ನಡದಲ್ಲಿ ಖಾಸಗಿ ಅನುಭವಕ್ಕೆ ಬೆಚ್ಚಗಿನ ಸ್ಪರ್ಶ ನೀಡಿ ಕಳಿತ ಗದ್ಯವನ್ನು ಬರೆಯುವ ಲೇಖಕರು ಖಂಡಿತಕ್ಕೂ ಇದ್ದಾರೆ. ಆದರೂ, ಆಧುನಿಕ ಲೋಕದ ಸಂಕೀರ್ಣತೆ, ಸವಾಲು, ಬೇರೆ ಬೇರೆ ವಿಷಯಗಳನ್ನು ಈ ಬಗೆಯ ಬರಹಗಳಲ್ಲಿ ಹೊಕ್ಕಿಸಿ ಚೆಲುವಿನಿಂದ ಕಂಗೋಳಿಸುವಂತೆ ಮಾಡಬಲ್ಲ ಲೇಖಕರು ಕಡಿಮೆ. ಮನುಷ್ಯರ ಖಾಸಗಿ ಅನುಭವವೊಂದು ಲೋಕೋತ್ತರ ಅನುಭವವಾಗಿ ಒಡಮೂಡುವುದು ಅದರೊಳಗೆ ಚಿನ್ನದದಿರಿನಂತೆ ಅವಿತ ಕಾಣ್ಕೆ, ಪಕ್ವತೆ ಹಾಗೂ ಸಾರ್ವತ್ರಿಕ ಗುಣಗಳು ಮಿಂಚಿನಂತೆ ಸುಳಿದಾಗ.
ಶರಣಬಸವರ ಇಲ್ಲಿನ ಬರಹಗಳನ್ನು ಓದುವಾಗ ಈ ಅಂಶ ಗಮನಕ್ಕೆ ಬರುವುದು. ಉತ್ತರ ಕರ್ನಾಟಕದ ಸಂಸ್ಕೃತಿಯ ದಟ್ಟತೆ, ಸಹಜ ಸಹಬಾಳ್ವೆಯ ಪರಿಸರ, ಬಾಲ್ಯದ ಕಣ್ಣಿಗೆ ವೈವಿಧ್ಯಮಯವಾಗಿ, ಅಸಾಮಾನ್ಯವಾಗಿ ಕಾಣುವ ಬದುಕಿನ ಸಾಮಾನ್ಯ ಸಂಗತಿಗಳು ಈ ಬರಹಗಳನ್ನು ಕೌದಿಯಂತೆ ಹಿಡಿದಿಟ್ಟಿದೆ. ಮನೆಯಲ್ಲಿ ಉಳಿದ ಚೂರುಪಾರು ಬಣ್ಣದ ಬಟ್ಟೆಗಳನ್ನು ಚಿತ್ರಚಿತ್ತಾರವಾಗಿ ಕತ್ತರಿಸಿ, ಕುಸುರಿ ಕಸೂತಿಯ ಮಾಡಿ ಮೈಮನಗಳಿಗೆ ಬೆಚ್ಚಗಿನ ಅನುಭವ ನೀಡಬಲ್ಲ ಕೌದಿಯನು ಹೆಣೆದಂತೆ ಬಾಲ್ಯದನುಭವದ ತುಣುಕುಗಳನು ಜೋಡಿಸುತ ಹೃದ್ಯವಾದ ಗದ್ಯವನು ಕಟ್ಟುವುದು ಇಲ್ಲಿನ ಬರಹಗಳ ಉದ್ದೇಶವಾಗಿದೆ. ಅಚ್ಚರಿಯೆನುವಂತೆ ಅದು ಸಾಧಿತವೂ ಆಗಿದೆ. ಈ ಬಗೆಯ ಕಾರಣದಿಂದ ಇಲ್ಲಿನ ಉಡದಾರದ ಕುರಿತ ಗದ್ಯ ಬರಹ, ಅಲಾಯಿ ಹಬ್ಬದ ಸಂಭ್ರಮವನು ತೆರೆದಿಡುವ ಬರಹ ನನ್ನನ್ನು ಬಹುವಾಗಿ ಸೆಳೆದವು ಎನ್ನುತ್ತಾರೆ ಕೇಶವ ಮಳಗಿ.
ಜೊತೆಗೆ ಉಡದಾರದ ಖಾಸಗಿ ಅನುಭವವು ಬದುಕಿನ ಸಂಕೀರ್ಣತೆ ಬಗೆಯುತ್ತ ಪುರುಷ ವ್ಯವಸ್ಥೆಯ ನಂಬಿಕೆ ಮತ್ತು ಕ್ರೌರ್ಯವನು ಅನಾವರಣಗೊಳಿಸುವುದು. ರಾಮಣ್ಣನ ಉಡದಾರ ಕಳಚುವುದಕ್ಕೂ, ಆತನ ಹೆಂಡತಿಯ ಸಾವಿಗೂ ತಳಕು ಹಾಕುವ ಜನಪದ, ರಜಾಕಾರರ ಹಾವಳಿಯಲ್ಲಿ ಉಡದಾರ ಬಿಚ್ಚಿಟ್ಟು ಬದುಕಿಕೊಂಡ ಮುಸ್ಲಿಮೇತರರು ಹಾಗೂ ದೇಶ ಬಿಡುಗಡೆಯಾದ ಮೇಲೆ ಉಡದಾರ ಕಟ್ಟಿಕೊಂಡು ಬದುಕುಳಿದ ಮುಸುಲರು ಹೀಗೆ ಸಾಂಸ್ಕತಿಕ ವಿವರಗಳು ಈ ಬರಹವನ್ನು ಮೇಲುಸ್ತರಕ್ಕೇರಿಸಿದೆ. ಶರಣಬಸವ ಅವರ ಗದ್ಯ ಬರಹ ಆಕರ್ಷಕ. ಪ್ರಸ್ತುತ ಪಡಿಸುವ ವಿಧಾನವೂ ನೇರ-ಸರಳ. ಹೀಗಾಗಿ ಸರಾಗವಾಗಿ ಓದಿಸಿಕೊಳ್ಳುವ ಮತ್ತು ಸಂತಸವನ್ನು ಉಂಟುಮಾಡುವ ಗುಣವನ್ನು ಪಡೆದಿವೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
©2024 Book Brahma Private Limited.