‘ತೀರದ ತುಡಿತ’ ಆರತಿ ಪೆಟ್ರಮೆ ಅವರ ಪ್ರಬಂಧ ಸಂಕಲನ. ನಗರ ಜೀವನದ ಗತ್ತು-ಗಮ್ಮತ್ತುಗಳನ್ನು ಕರಾವಳಿ ಬದುಕಿನ ಹಿನ್ನೆಲೆಯಲ್ಲಿ ನವಿರಾಗಿ ಹೇಳುವ ಪ್ರಯತ್ನ ಇಲ್ಲಿನ ಪ್ರಬಂಧಗಳಲ್ಲಿದೆ. ಇವುಗಳ ನಡುವೆ ಮಂಗಳೂರಿನ ಹಲವು ಚಿತ್ರಗಳಿವೆ. ಹಾಗೆಂದು ಇವು ಒಂದು ಊರಿಗೋ ನಗರಕ್ಕೋ ಸೀಮಿತವಾದುದ್ದಲ್ಲ. ಓದುತ್ತಾ ಹೋದಂತೆ ಇವು ಎಲ್ಲೆಲ್ಲೂ ಇವೆಯಲ್ಲ ಎಂದು ಹೊಳೆದು `ಅರೆ ನಾವೂ ಇಲ್ಲಿದ್ದೇವೆ ' ಎಂದೆನಿಸಿ ಮುಖದಲ್ಲಿ ಮಂದಹಾಸ ಮೂಡದೆ ಇರದು. ಸದಾ ಧಾವಂತದ ಬಿಂಬದಂತಿರುವ ಎಂ.ಜಿ. ರೋಡು, ತುರ್ತು ಸಂದರ್ಭದಲ್ಲೇ ಕೈಕೊಡುವ ಕರೆಂಟು ಸಿಟಿಬಸ್ಸುಗಳೆಂಬ ಮಹಾಸಭೆ, ಸಮಯಹರಣಕ್ಕೆಂದೇ ಇರುವ ವಿಂಡೋ ಶಾಪಿಂಗ್ ಅಲ್ಲದೆ ಮನೆಯೊಳಗಿನ ತೊಟ್ಟಿಲ ಕೊಂಡಿಯೂ ಇಲ್ಲಿನ ಲೇಖನಗಳಿಗೆ ವಸ್ತುವಾಗಿದೆ. ಸದಾ ವಿಸ್ಮಯದ ಒಡಲೆನಿಸುವ ಮಂಗಳೂರಿನ ಕಡಲು, ಕುಚ್ಚಿಲಕ್ಕಿಯ ಗಂಜಿ, ವರ್ಣವೈಭವದ ಯಕ್ಷಗಾನ, ಮೀನಿನ ಊಟವೆಂಬ ಬ್ರಾಂಡ್, ದೇಹವನ್ನೇ ಬಸಿಯುವಂಥ ಸೆಕೆ, ಧೋ ಎಂದು ಸುರಿಯುವ ಮುಸಲ ಧಾರೆ..ಮುಂತಾದ ಆಪ್ತ ನೋಟಗಳಿಂದ ಪುಸ್ತಕ ಹೃದಯಕ್ಕೆ ಹತ್ತಿರವಾಗುತ್ತದೆ.
©2024 Book Brahma Private Limited.