ಲೇಖಕಿ ಆರತಿ ಪಟ್ರಮೆ ವೃತ್ತಿಯಲ್ಲಿ ಇಂಗ್ಲಿಷ್ ಉಪನ್ಯಾಸಕರು; ಪ್ರವೃತ್ತಿಯಲ್ಲಿ ಯಕ್ಷಗಾನ ಕಲಾವಿದೆ ಹಾಗೂ ಲೇಖಕಿ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರು. ಮೂಲತಃ ದಕ್ಷಿಣ ಕನ್ನಡದವರು. ಉಜಿರೆಯ ಎಸ್ ಡಿ ಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ, ಇಂಗ್ಲಿಷ್ ಸಾಹಿತ್ಯ ಹಾಗೂ ಮನಃಶಾಸ್ತ್ರದಲ್ಲಿ ಬಿಎ ಪದವಿ ಪೂರೈಸಿ ಮಂಗಳೂರು ವಿಶ್ವವಿದ್ಯಾನಿಲಯದಿಂದ 2005ರಲ್ಲಿ ಇಂಗ್ಲಿಷ್ ಎಂ.ಎ. ಪದವಿ ಪಡೆದರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಎಂ.ಎ. ಪದವಿಯನ್ನೂ ಪಡೆದಿದ್ದಾರೆ. ‘ವಿಜಯ್ ಟೈಮ್ಸ್’ ಇಂಗ್ಲಿಷ್ ದೈನಿಕದಲ್ಲಿ ಉಪಸಂಪಾದಕಿಯಾಗಿ ವೃತ್ತಿಜೀವನವನ್ನು ಆರಂಭಿಸಿ, ಮುಂದೆ ಉಜಿರೆ ಎಸ್ ಡಿ ಎಂ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕಿಯಾಗಿ, ಮಂಗಳೂರಿನ ICFAI National Collegeಗಳಲ್ಲಿ Soft Skills Trainer ಆಗಿ, ಟೀಚರ್ ಫೌಂಡೇಶನ್ ಎಂಬ ಸಂಸ್ಥೆಯಲ್ಲಿ ಶಿಕ್ಷಕರ ತರಬೇತುದಾರೆಯಾಗಿ, ತುಮಕೂರಿನ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ವಿದ್ಯಾವಾಹಿನಿ ಪದವಿಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ದುಡಿದಿದ್ದಾರೆ.
ಪ್ರಸ್ತುತ ವಿದ್ಯಾನಿಧಿ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕಿಯಾಗಿದ್ದಾರೆ. ಬಾಲ್ಯದಿಂದಲೇ ಯಕ್ಷಗಾನದೊಂದಿಗೆ ನಿಕಟವಾಗಿ ತೊಡಗಿಸಿಕೊಂಡ ಆರತಿ ಕಾಲೇಜಿನಲ್ಲಿರುವಾಗಲೇ ಮಂಗಳೂರು ವಿವಿ ಮಟ್ಟದ ಯಕ್ಷಗಾನ ಸ್ಪರ್ಧೆಯಲ್ಲಿ ವೈಯುಕ್ತಿಕ ಛಾಂಪಿಯನ್ ಶಿಪ್ ಪಡೆದಿದ್ದರು. 2014ರಲ್ಲಿ ತುಮಕೂರಿನಲ್ಲಿ ಯಕ್ಷದೀವಿಗೆ ಎಂಬ ಸಂಸ್ಥೆಯನ್ನು ಆರಂಭಿಸಿ ತುಮಕೂರಿನ ಆಸಕ್ತರಿಗೆ ಯಕ್ಷಗಾನದ ತರಬೇತಿ ನೀಡುತ್ತಿದ್ದಾರೆ. ಬಯಲುಸೀಮೆಯಲ್ಲಿ ಯಕ್ಷಗಾನವು ತೆರೆಮರೆಗೆ ಸರಿಯುತ್ತಿರುವಾಗ ತುಮಕೂರಿನಲ್ಲಿ ತಮ್ಮದೇ ಆದ ತಂಡವನ್ನು ಕಟ್ಟಿಕೊಂಡು ಅನೇಕ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಸಾಮಾನ್ಯವಾಗಿ ‘ಗಂಡುಕಲೆ’ ಎಂದು ಕರೆಸಿಕೊಳ್ಳುವ ಯಕ್ಷಗಾನವನ್ನು ಮಹಿಳೆಯೊಬ್ಬರು ಕರಗತ ಮಾಡಿಕೊಂಡು ತಮ್ಮದೇ ಸಂಸ್ಥೆಯನ್ನು ರೂಪಿಸಿಕೊಂಡಿರುವುದು ಗಮನಾರ್ಹ. ಪ್ರಸ್ತುತ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಯಕ್ಷಗಾನದ ಬಗ್ಗೆ ಪಿಎಚ್.ಡಿ ಸಂಶೋಧನೆಯನ್ನು ನಡೆಸುತ್ತಿದ್ದಾರೆ. ಆರತಿಯವರು ಲೇಖಕಿ ಹಾಗೂ ಕವಯಿತ್ರಿಯಾಗಿಯೂ ಗುರುತಿಸಿಕೊಂಡಿದ್ದಾರೆ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಅವರ ಲೇಖನ, ಕತೆ, ಕವಿತೆಗಳು ಪ್ರಕಟವಾಗಿವೆ. ಪ್ರಜಾವಾಣಿ ದೈನಿಕದಲ್ಲಿ ಮೂರು ವರ್ಷ ಅಂಕಣಕಾರ್ತಿಯಾಗಿದ್ದರು. ಕಳೆದ 6 ವರ್ಷಗಳಿಂದ ‘ಉತ್ಥಾನ’ ಮಾಸಪತ್ರಿಕೆಗೆ ‘ಮನೆ ಮಾನಿನಿ’ ಎಂಬ ಅಂಕಣವನ್ನು ಬರೆಯುತ್ತಿದ್ದಾರೆ. ‘ಎಲ್ಲಿಹಳು ನನ್ನ ಛಾಯಾ?’ (ಕವನ ಸಂಕಲನ), ‘ನವೋತ್ಥಾನದ ಹರಿಕಾರ ಸ್ವಾಮಿ ವಿವೇಕಾನಂದ’ ಹಾಗೂ ‘ಬದುಕು ನಂಬಿಕೆಯ ಕಡಲು’ ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ.