‘ಸ್ವಾಯತ್ತ ಪ್ರಜ್ಞೆ’ ಸಮಕಾಲೀನ ಸಮಾಜಕ್ಕೊಂದು ಸಾಹಿತ್ಯಕ ಸ್ಪಂದನೆ- ಹಿರಿಯ ಲೇಖಕ, ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಪ್ರಬಂಧ ಸಂಕಲನ. ಕೃತಿಯ ಕುರಿತು ಬರೆಯುತ್ತಾ ‘ಇತ್ತೀಚೆಗೆ ನಾವು ಎದುರಿಸುತ್ತಿರುವ ಸೂಕ್ಷ್ಮವಾದ ಹಾಗೂ ಬಹುಮುಖ್ಯವಾದ ಆತಂಕವೆಂದರೆ ಪ್ರಭುತ್ವ ಸದ್ದಿಲ್ಲದೆ ಸ್ವಾಯತ್ತತೆಯ ಮೇಲೆ ಆಕ್ರಮಣ ನಡೆಸುತ್ತಿರುವುದು. ಜೊತೆಗೆ ಸ್ವತಂತ್ರವಾಗಿ ಆಲೋಚಿಸುವ ಸಮುದಾಯದ ದನಿ ಅಡಗಿಸುವ ಪ್ರಯತ್ನ ಮಾಡುತ್ತಿರುವುದು. ಪ್ರಜಾಪ್ರಭುತ್ವದ ಮೂಲ ಶಕ್ತಿಯೇ ಸ್ವಾಯತ್ತತೆ. ನಮ್ಮ ಅನೇಕ ಸಾರ್ವಜನಿಕ ಸಂಸ್ಥೆಗಳು ತಮ್ಮ ಸ್ವಾಯತ್ತತೆಯನ್ನು ಕಾಪಾಡಿಕೊಂಡು ಬಂದಿವೆ. ಸರಿ ತಪ್ಪುಗಳನ್ನು ವಿವೇಚಿಸಿ ಚರ್ಚಿಸುವ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಬಂದಿವೆ. ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಪ್ರಭುತ್ವ ಈ ಸ್ವಾಯತ್ತತೆಯನ್ನು ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿರುವಂತೆ ತೋರುತ್ತಿದೆ. ಪ್ರಭುತ್ವದ ಈ ಪ್ರಯತ್ನಕ್ಕೆ ಬಂಡವಾಳಶಾಹಿ ಕೈ ಜೋಡಿಸಿದೆ. ಇವೆರಡೂ ಪ್ರಜಾಪ್ರಭುತ್ವದಲ್ಲಿ ಕೈ ಕೈ ಹಿಡಿದು ಸಾಗುತ್ತಿವೆ. ಅಧಿಕಾರ ಕೇಂದ್ರಗಳಾದ ರಾಜಕೀಯ ಹಾಗೂ ಧರ್ಮ ಇವೆರಡೂ ಅಧೀನ ಮನೋಸ್ಥಿತಿಯನ್ನು ಪೋಷಿಸುವಂಥವು. ಪ್ರಶ್ನಿಸುವುದನ್ನು ಇವು ಸಹಿಸುವುದಿಲ್ಲ. ಸಾಹಿತ್ಯದ ಶಕ್ತಿಯೇ ಸ್ವಾಯತ್ತತೆ. ಈಗ ಈ ವಲಯವೂ ತನ್ನ ಸ್ವಾಯತ್ತತೆಯನ್ನು ಕಳೆದುಕೊಳ್ಳುತ್ತಿದೆಯೇ? ಎಂದು ಪ್ರಶ್ನಿಸುತ್ತಾರೆ. ಅದೇ ಪ್ರಶ್ನೆಗಳಿಗೆ ಈ ಕೃತಿಯ ಮೂಲಕ ಉತ್ತರದ ಹುಡುಕಾಟ ನಡೆಸುವುದು ಈ ಕೃತಿಯ ಹೆಗ್ಗಳಿಕೆ.
©2024 Book Brahma Private Limited.