ಕತೆಗಾರ, ಲೇಖಕ ಕೆ. ಸತ್ಯನಾರಾಯಣ ಅವರ ’ಸ್ಕೂಲು ಬಿಡುವ ಸಮಯ’ ಕೃತಿಯು ಇಪ್ಪತೈದು ಪ್ರಬಂಧಗಳ ಸಂಗ್ರಹ. ಈ ಪ್ರಬಂಧಗಳಲ್ಲಿಯೂ ಎಂದಿನ ಸುಲಲಿತ ಶೈಲಿಯೇ ಇದೆ. ಮಾನವೀಯ ಸಂಬಂಧದ ತಂತುವೊಂದು ಇವರ ಎಲ್ಲ ಬರಹಗಳೊಳಗೆ ಅದೃಶ್ಯವಾಗಿ ಸಂಚರಿಸುತ್ತ ಅವುಗಳ ಆಶಯಗಳನ್ನು ಜಾಗೃತವಾಗಿರಿಸುತ್ತದೆ. ಸತ್ಯನಾರಾಯಣ ಅವರ ಪ್ರಬಂಧ ಮತ್ತು ಆತ್ಮಕಥನಗಳಲ್ಲಿಯೂ ಅನೇಕ ಸಮಾನ ಅಂಶಗಳಿವೆ.
ಪ್ರೊ. ವಿ. ಕೃಷ್ಣಮೂರ್ತಿರಾವ್ ಅವರು ಈ ಕೃತಿಯ ಬಗ್ಗೆ ಹೇಳುತ್ತಾ ’ ಓದುಗನನ್ನು ಚಿರಪರಿತನಾದ ಸ್ನೇಹಿತನಂತೆ ಭಾವಿಸಿ, ಪಕ್ಕದಲ್ಲಿ ಕುಳ್ಳಿರಿಸಿ ಸ್ವಂತ ವಿಚಾರ ಅನುಭವಗಳನ್ನು ಹೇಳುವ ಇದರ ಆಪ್ತತೆಯ ಧಾಟ ಚಾರ್ಲ್ಸ್ ಲ್ಯಾಂಬ್ನ 'ಪರ್ಸನಲ್ ಎಸ್ಥೆ'ಯನ್ನು ನೆನಪಿಗೆ ತರುತ್ತದೆ. ಸೂಕ್ಷ್ಮ ವಿವರಗಳು, ಶಿಸ್ತುಬದ್ಧ ವರ್ಣನೆ, ಉತ್ತೇಕ್ಷೆಯಿರದ ಸಹಜತೆ ಇಲ್ಲಿಯ ಪ್ರಬಂಧಗಳ ಹೆಗ್ಗಳಿಕೆ. ಸತ್ಯನಾರಾಯಣರ ಪ್ರಬಂಧಗಳು ಹದಿನೆಂಟನೆಯ ಶತಮಾನದ ರಿಚರ್ಡ್ ಸ್ಟೀಲ್, ಜೋಸೆಫ್ ಅಡಿಸನ್ ಅವರ ಪ್ರಬಂಧಗಳಿಗಿಂತಲೂ ಹೆಚ್ಚಿನ ಸೂಕ್ಷ್ಮತೆಯಿಂದ ನಮ್ಮ ಕಾಲಘಟ್ಟದ ಜನರ ರೀತಿ-ರಿವಾಜುಗಳನ್ನು ವಿಶ್ಲೇಷಣೆ ಮಾಡುತ್ತದೆ’ ಎಂದಿದ್ದಾರೆ. ”
ಡಾ. ಸುಧಾಕರ ದೇವಾಡಿಗ ಅವರು ’ಇಲ್ಲಿನ ಪ್ರಬಂಧಗಳು ನಮ್ಮ ಅನುಭವಕ್ಕೆ ಬಂದಿರುವ ಸಂಗತಿಗಳನ್ನೆಲ್ಲ ಭಿನ್ನ ಲೋಕದೃಷ್ಟಿಯಿಂದ ಮಂಡಿಸುತ್ತದೆ. ಮನುಷ್ಯ ಸ್ವಭಾವವನ್ನು ಸೂಕ್ಷ್ಮವಾಗಿ ನಿರ್ವಚಿಸುತ್ತಲೇ ಬದುಕಿನ ವಿರಾಟ ಸ್ವರೂಪವನ್ನು ಅರಿಯುವ ಹಾಗೂ ಮಿತಿಗಳನ್ನು ಗುರುತಿಸುವ ಕ್ರಮ ಈ ಬರವಣಿಗೆಯದು. ಇಲ್ಲಿನ ಪ್ರಬಂಧಗಳ ವೈಶಿಷ್ಟ್ಯತೆಯೆಂದರೆ ಆಯ್ದುಕೊಂಡ ವಸ್ತುವಿನ ವಕಾಲತ್ತು ವಹಿಸುವ ಕ್ರಮವನ್ನು ಮೀರುವುದು. ಸತ್ಯನಾರಾಯಣರಿಗೆ ಪ್ರಬಂಧದ ಬಂಧದ ಬಗ್ಗೆ ಇರುವ ಶ್ರದ್ಧೆ ಎಲ್ಲಿಯೂ ಅದು ಸಡಿಲವಾಗದಂತೆ ಎಚ್ಚರ ವಹಿಸಿದೆ’ ಎಂಬ ಅಭಿಪ್ರಾಯ ತಿಳಿಸಿದ್ದಾರೆ.
©2024 Book Brahma Private Limited.