‘ಪ್ರಜ್ಞಾನೇತ್ರದ ಬೆಳಕಿನಲ್ಲಿ’ ಲೇಖಕ ಗೌರೀಶ ಕಾಯ್ಕಿಣಿ ಅವರು ಬರೆದಿರುವ ಮೂರು ವಿಮರ್ಶಾ ಪ್ರಬಂಧಗಳ ಸಂಕಲನ. ಕೃತಿಯ ಅರಿಕೆಯಲ್ಲಿ ‘ಈ ಗ್ರಂಥದಲ್ಲಿ ಮೂರು ಪ್ರಬಂಧಗಳು ಗ್ರಥಿತವಾಗಿದೆ. ಸುಮಾರು 25 ವರ್ಷಗಳ ಹಿಂದೆ ಮುಂಬಯಿಯ ಕನ್ನಡಾಭಿಮಾನಿಗಳು ಪೂಜ್ಯ ಶಂ.ಬಾ. ಜೋಶಿಯವರು ವಿಶೇಷ ಸತ್ಕಾರ ಸಮಾಲೋಚನೆಯ ಒಂದು ಪರಿಸಂವಾದವೂ ಆ ಬಳಿಕ ಒಂದು ಸಂಸ್ಮರಣ ಗ್ರಂಥವೂ ಯೋಜಿಸಲ್ಪಟ್ಟಿದ್ದವು. ಅದಕ್ಕಾಗಿ ಸನ್ಮಿತ್ರ ಡಾ.ಎಸ್.ಕೆ. ಹಾವನೂರ ಅವರ ವಿನಂತಿಯಂತೆ ನಾನು ಡಾ.ಜೋಶಿಯವರ ಸಾಮಾಜಿಕ ವಿಚಾರಗಳು ವಿಷಯ ಕುರಿತು ಒಂದು ಪ್ರಬಂಧ ಬರೆದು ಒಪ್ಪಿಸಿದೆ. ಅಂದಿನ ಮಿಂಚಿನ ಬಳ್ಳಿಯಲ್ಲಿ ದಿ.ಬುರ್ಲಿ ಬಿಂದುಮಾಧವರು ಹೊರತಂದ ಶಂ.ಬಾ. ಅವರ ಎರಡು ಪುಸ್ತಕಗಳ ವಿಷಯ ಸಂಗ್ರಹಿಸಿ ಆದರೆ, ಏನೋ ನಮ್ಮ ದುರ್ದೈವದಿಂದ ಆ ಮುಂಬಯಿ ಸಮಾರಂಭ ಕೂಡಿ ಬರಲಿಲ್ಲ. ನನ್ನ ಪ್ರಬಂಧ ಭೂಮರ್ಯಾಂಗದಂತೆ ತಿರುಗಿ ಬಂದು ನನ್ನ ಉಡಿಯಲ್ಲಿ ಬಿದ್ದುಳಿಯಿತು. ಆದರೆ ಅದನ್ನು ಈಚೆಗೆ ಡಾ.ಜಿ.ಎಸ್. ಶಿವರುದ್ರಪ್ಪನವರು ತಮ್ಮ ಕನ್ನಡ ಅಧ್ಯಯನ ಸಂಸ್ಥೆಯ (ಬೆಂಗಳೂರು ಯೂನಿವರ್ಸಿಟಿಯ’) ಸಾಧನೆ ನಿಯತಕಾಲಿಕೆಯಲ್ಲಿ ಪ್ರಕಟಿಸಿ ಅನುಗ್ರಹಿಸಿದರು. ಅದೇ ರೀತಿ ಕರ್ಣಾಟ ಸಂಸ್ಕೃತಿಯ ಪೂರ್ವಪೀಠಿಕೆಯ ಕುರಿತು ಬರೆದ ಪ್ರಬಂಧದ ಕತೆಯೂ ಆಯಿತು. ಆ ಪುಸ್ತಕ ಪ್ರಕಟವಾದ ನಂತರ ಧಾರವಾಡದಲ್ಲಿಯೇ ಈ ನಿಮಿತ್ತ ಡಾ. ಶಂ.ಬಾ. ಅವರ ಸತ್ಕಾರವೂ ಆ ಕೃತಿಯ ಬಗೆಗೆ ವಿಚಾರಗೋಷ್ಠಿಯೂ ಕರ್ನಾಟಕ ವಿಶ್ವವಿದ್ಯಾಲಯದ ಅಂದಿನ ಕುಲಪತಿ ಡಾ.ಡಿ.ಸಿ ಪಾವಟಿ ಅವರ ಹಿರಿಯ ತನದಲ್ಲಿ ಜರುಗಿದವು. ಆಗಲೂ ಏನೇನೋ ವಿರಸವುಂಟಾಗಿ ಡಾ. ಜೋಶಿಯವರ ಪ್ರೀತ್ಯಾರ್ಥ ಪ್ರಕಟವಾಗಬೇಕಾಗಿದ್ದ ಸಂಭಾವನಾ ಗ್ರಂಥ ಹೊರಬರಲೇ ಇಲ್ಲ. ನನ್ನ ಪ್ರಬಂಧ ಮರಳಿ ಬಂದಿತು. ಆದರೆ ಈಚಿಗೆ ಪೂಜ್ಯ ಶಂಬಾ ಅವರ ಕುರಿತು ಡಾ. ಎಂ.ಚಿದಾನಂದಮೂರ್ತಿಯವರು ಸಂಪಾದಕರಾಗಿ ಪ್ರಕಟಗೊಳಿಸಿದ ಅಧ್ಯಯನ ಎಂಬ ಅಭಿನಂದನ ಸಂಪುಟಗಳಲ್ಲಿ ಆ ಪ್ರಬಂಧವು ಬೆಳಕು ಕಂಡಿತು. ಇದೀಗ ಅವೆರಡನ್ನೂ ಒಟ್ಟಾಗಿ ಒಂದು ಪುಸ್ತಕ ರೂಪದಲ್ಲಿ ಹೊರತರಬೇಕೆಂದು ಮಿತ್ರ ಶ್ರೀ ಜ್ಯೋತಿ ಹೊಸೂರು ಅವರು ಯೋಚಿಸಿ ಕರ್ಣಾಟ ಸಂಸ್ಕೃತಿ ಕುರಿತ ಗ್ರಂಥಕ್ಕೂ ಹಿಂದಿನ ಹಾಲುಮತ ದರ್ಶನದ ಬಗೆಗೂ ಒಂದು ಪರಿಚಯಾತ್ಮಕ ಸಮೀಕ್ಷೆ ಬರೆದು ಕೊಡಲು ನನ್ನನ್ನು ಕೇಳಿಕೊಂಡಾಗ ನಾನು ಕೂಡಲೇ ಹಿರಿಹಿಗ್ಗಿನಿಂದ ಒಪ್ಪಿದೆ ಮತ್ತು ಈ ಮೂರೂ ಪ್ರಬಂಧಗಳು ಒಂದೇ ಗ್ರಂಥವಾಗಿ ತ್ರಿದಲಾಕಾರದ ಏಕಬಿಲ್ವದಂತೆ ನನ್ನ ಗುರುವರ್ಯ ಶಂಕರನಿಗೆ ಮುಂದಿಡಲು ಹೀಗೆ ಅನುವು ಮಾಡಿಕೊಟ್ಟದ್ದಕ್ಕಾಗಿ ನಾನು ಪ್ರಿಯ ಶ್ರೀ ಜ್ಯೋತಿ ಹೊಸೂರು ನಾನು ಕೃತಜ್ಞ ಎಂದಿದ್ದಾರೆ.
©2024 Book Brahma Private Limited.