ಮಕ್ಕಳ ರಂಗಭೂಮಿ: ಪ್ರದರ್ಶನ-ಪ್ರಕ್ರಿಯೆ

Author : ನಿಂಗು ಸೊಲಗಿ

Pages 328

₹ 200.00




Year of Publication: 2013
Published by: ಚಿಲಿಪಿಲಿ ಪ್ರಕಾಶನ
Address: #56, 4ನೇ ಅಡ್ಡರಸ್ತೆ , ಶಿವಾನಂದ ನಗರ , ಧಾರವಾಡ - 1

Synopsys

ನಿಂಗು ಸೊಲಗಿಯವರು ಪಿಎಚ್‌ಡಿ ಪದವಿಗಾಗಿ ಸಲ್ಲಿಸಿದ ‘ಮಕ್ಕಳ ರಂಗಭೂಮಿ: ಪ್ರದರ್ಶನ-ಪ್ರಕ್ರಿಯೆ” ವಿಷಯದ ಕುರಿತ ಮಹಾಪ್ರಬಂಧವು ಪುಸ್ತಕ ರೂಪದಲ್ಲಿ ರಂಗಭೂಮಿಗೆ ಅದರಲ್ಲೂ ಮಕ್ಕಳ ರಂಗಭೂಮಿಗೆ ಸಾರ್ಥಕ ಕೊಡುಗೆಯನ್ನು ನೀಡಿದೆ. ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಧನಸಹಾಯ ಪಡೆದು ಧಾರವಾಡದ ಚಿಲಿಚಿಲಿ ಪ್ರಕಾಶನದಿಂದ ಪ್ರಕಟಿತವಾದ ಈ ಕೃತಿ ಮಕ್ಕಳ ರಂಗಭೂಮಿಯ ವಿವಿಧ ಆಯಾಮಗಳನ್ನು ದಾಖಲಿಸುವ ಪ್ರಯತ್ನಮಾಡಿದೆ. ನೇರ ನಿರೂಪಣೆ, ವ್ಯವಸ್ಥಿತವಾದ ವಿಷಯ ಜೋಡಣೆ, ಸರಳ ಭಾಷೆಯ ಬಳಕೆ ಹಾಗೂ ವಸ್ತು ವಿಷಯದ ಕುರಿತ ಆಳವಾದ ಅಧ್ಯಯನಗಳಿಂದಾಗಿ ಈ ಕೃತಿ ನಿಜಕ್ಕೂ ಮಹತ್ವದ್ದಾಗಿದೆ. 320 ಪುಟಗಳ ಈ ಮಹಾಪ್ರಬಂಧವು ಒಟ್ಟಾರೆ ಆರು ಅಧ್ಯಾಯಗಳನ್ನು ಹೊಂದಿದೆ. ಮೊದಲನೆಯ ಅಧ್ಯಾಯ ’ಮಕ್ಕಳ ರಂಗಭೂಮಿಯ ಪ್ರವೇಶ’ ದಲ್ಲಿ ಅಧ್ಯಯನದ ಉದ್ದೇಶ, ವಿಷಯ ವ್ಯಾಪ್ತಿ ಮತ್ತು ಸ್ವರೂಪದ ಕುರಿತು ಚರ್ಚಿಸಲಾಗಿದೆ. ಎರಡನೆಯ ಅಧ್ಯಾಯವಾದ ‘ರಂಗಭೂಮಿ: ಮನೋವಿಕಾಸ’ ದಲ್ಲಿ ಮಕ್ಕಳ ಮನೋವಿಕಾಸದ ನೆಲೆಗಟ್ಟಿನಲ್ಲಿ ಮಕ್ಕಳ ರಂಗಭೂಮಿಯ ಅಗತ್ಯತೆ, ಪರಿಣಾಮ ಹಾಗೂ ಪ್ರಭಾವದ ಕುರಿತು ವಿಶ್ಲೇಷಿಸಲಾಗಿದೆ. ಮೂರನೆಯ ಅಧ್ಯಾಯ ‘ಮಕ್ಕಳ ರಂಗಭೂಮಿ ಬೆಳವಣಿಗೆ’ ಯಲ್ಲಿ ಜನಪದ ಹಾಗೂ ಆಧುನಿಕ ರಂಗಭೂಮಿಯನ್ನು ಪರಿಚಯಿಸುತ್ತಾ ಮಕ್ಕಳ ರಂಗಭೂಮಿಯ ಇತಿಹಾಸ, ಮಹತ್ವ, ವಸ್ತು ವೈವಿಧ್ಯತೆ, ರಂಗ ಸಂಸ್ಥೆಗಳು ಹಾಗೂ ಮಕ್ಕಳ ರಂಗಪ್ರಯೋಗಗಳ ಕುರಿತು ಹಲವಾರು ಮಾಹಿತಿಗಳನ್ನು ದಾಖಲಿಸಲಾಗಿದೆ.

About the Author

ನಿಂಗು ಸೊಲಗಿ

ನಿಂಗು ಸೊಲಗಿ ಅವರು ಮೂಲತಃ ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಕ್ಕಳಿಗೆ ರಂಗಮುಖೇನ ಶಿಕ್ಷಣ ನೀಡಿ, ರಂಗಭಾಷೆಯನ್ನು ಕಲಿಕಾ ಮಾಧ್ಯಮವಾಗಿ ಪರಿಗಣಿಸಿ ಪಾಠಗಳನ್ನು ಹೇಳಿಕೊಡುತ್ತಾ, ಶಾಲಾ ಅಂಗಳದಲ್ಲಿ ರಂಗ ಚಟುವಟಿಕೆಗಳನ್ನು ಸಂಘಟಿಸುತ್ತಾ ಬಂದಿದ್ದಾರೆ. ಹಲವಾರು ಮಕ್ಕಳ ನಾಟಕಗಳನ್ನು ರಚಿಸಿ, ನಿರ್ದೇಶಿಸಿ, ಪ್ರದರ್ಶಿಸುವ ಮೂಲಕ ತಮ್ಮ ರಂಗಭೂಮಿಯ ಅನುಭವಗಳನ್ನು ಗಟ್ಟಿಗೊಳಿಸುತ್ತಾ ಬಂದವರು. ವೃತ್ತಿ ಮತ್ತು ಪ್ರವೃತ್ತಿಗಳನ್ನು ಒಂದು ಮಾಡಿಕೊಂಡು, ಶಾಲೆಯಲ್ಲಿ ಮಕ್ಕಳ ರಂಗಭೂಮಿಯನ್ನು ಕಟ್ಟುತ್ತಾ, ತಮ್ಮ ಎಲ್ಲಾ ನಿರಂತರ ಚಟುವಟಿಕೆಗಳ ಅನುಭವಗಳನ್ನು ಕ್ರೋಢೀಕರಿಸಿ ಈ ಮಹಾಪ್ರಬಂಧವನ್ನು ರಚಿಸಿ ಡಾಕ್ಟರೇಟ್ ಗೌರವಕ್ಕೆ ಪಾತ್ರರಾಗಿದ್ದಾರೆ. ಕೃತಿಗಳು: ಮಕ್ಕಳ ರಂಗಭೂಮಿ: ಪ್ರದರ್ಶನ-ಪ್ರಕ್ರಿಯೆ ...

READ MORE

Reviews

ವಿಮರ್ಶೆ(ಹೊಸತು- ಡಿಸೆಂಬರ್ 2013)

ಮಕ್ಕಳ ರಂಗಭೂಮಿ ? ಹೌದು, ಮಕ್ಕಳು ಅವಕಾಶ ಸಿಕ್ಕಿದರೆ, ನಾವು ಅವರಿಗೆ ಸರಿಯಾದ ತರಬೇತಿ ನೀಡಿದರೆ ಮುಂದೆ ರಂಗ ಪ್ರಕ್ರಿಯೆಗಳಲ್ಲಿ ಪಾಲ್ಗೊಂಡು ಉತ್ತಮ ರಂಗ ಪ್ರದರ್ಶನ ನೀಡಬಲ್ಲರು. ಮಕ್ಕಳು ಎಳವೆಯಲ್ಲೇ ಆಟ ಪಾಠಗಳೊಂದಿಗೆ ಪಾತ್ರಾಭಿನಯ ಮಾಡಿ ತೋರಿಸುತ್ತಾರೆ. ಅದು ಕೋಲು ಹಿಡಿದು ಸೊಂಟ ಬಗ್ಗಿಸಿ ನಡೆವ ಅಜ್ಜನ ಪಾತ್ರ ಆಥವಾ ಸೆರಗು ಹೊದೆದು ನೀರಿನ ಬಿಂದಿಗೆ ಸೊಂಟಕ್ಕಿಟ್ಟು ನಡೆವ ಅವನ ಅಮ್ಮನ ಪಾತ್ರ ಇರಬಹುದು. ಇದು ಸೃಜನಶೀಲ ಅನುಕರಣೆಯ ಹಂತ. ನಿಮ್ಮನ್ನು ಅವಮಾನಿಸಲು ಮಗು ಹಾಗೆ ಮಾಡುತ್ತಿಲ್ಲ. ಮಕ್ಕಳಲ್ಲಿನ ಇಂಥ ಪ್ರಾಥಮಿಕ ಆಸಕ್ತಿಯೇನೆಂದು ಗಮನಿಸಿ ಮಕ್ಕಳನ್ನು ರಂಗಭೂಮಿ ಚಟುವಟಿಕೆಗಳ ಕಡೆಗೆ ಸೆಳೆಯುವತ್ತಸಂಶೋಧನೆ ನಡೆಸಿದ ಬೃಹತ್ ಪ್ರಬಂಧವಿದು.ಇದು ಲೇಖಕರಿಗೆ ಪಿಎಚ್. ಡಿ. ಪದವಿ ಲಭಿಸಿದ ಕೃತಿಯೂ ಹೌದು. ಮಕ್ಕಳ ನಾಟಕಗಳ ಮೂಲಕ ಅಭಿನಯದಲ್ಲಿ ಉತ್ಸಾಹ ತುಂಬಿ ಮಕ್ಕಳ ರಂಗಭೂಮಿಯಲ್ಲಿ ಪ್ರತಿಭೆಯನ್ನು ಜಾಗೃತಗೊಳಿಸಿ ಅವರ ಸರ್ವಾಂಗೀಣ ಬೆಳವಣಿಗೆಯನ್ನು ಸಾಧಿಸುವತ್ತ ಬಲವಾದ ಹೆಜ್ಜೆಗಳನ್ನಿಡುವ ಈ ಪುಸ್ತಕ ರಂಗಕರ್ಮಿ ಗಳಿಗೆ ತುಂಬ ಉಪಯುಕ್ತ. ರಂಗಭೂಮಿಯಂಥ ಮಾಧ್ಯಮಗಳು ನಾಟಕಗಳ ಮೂಲಕ ಮನರಂಜನೆ ಯನ್ನೂ ಸಾಮಾಜಿಕವಾಗಿ ಒಳ್ಳೆಯ ಬುದ್ದಿವಾದವನ್ನೂ ಹೇಳುವಂಥ ವಾಗಬೇಕು. ಅಲ್ಲಿ ಜನವಿದೂರವಾದ ಯಾವುದೇ ಅಂಶ ಇರಕೂಡದು. ಕೆಟ್ಟ ಅಥವಾ ಜನರನ್ನು ಮೋಸಗೊಳಿಸುವ ಯಾವುದೇ ವಿಚಾರವಿದ್ದರೂ ಕೂಡ ಮಕ್ಕಳು ಮಾತ್ರವಲ್ಲದೆ ಹಿರಿಯರು ಕೂಡ ಅತ್ತ ವಾಲುವ ಅಪಾಯವಿರುತ್ತದೆ. ಹೀಗಾಗಿ ಒಂದು ರಂಗಭೂಮಿ ಮಾಧ್ಯಮ ಏನೇನನ್ನು ಜನರಿಗೆ ತಿಳಿಸಬಲ್ಲುದೆಂದೂ ಅದಕ್ಕಾಗಿ ಮಕ್ಕಳನ್ನು ತರಬೇತಿಗೊಳಿಸುವ ವಿಧಾನವೇನು ಎಂದು ಹೇಳಲ್ಪಟ್ಟ ಅಪರೂಪದ ಕೃತಿ.

Related Books