‘ಕುಡಿಯೋಣು ಬಾರಾ’ ವಿಶ್ವೇಶ್ವರ ಭಟ್ ಅವರ ಕೃತಿಯಾಗಿದೆ. ಕೃತಿಯ ಕುರಿತು ಬರೆದಿರುವ ವಿಶ್ವೇಶ್ವರ ಭಟ್ 'ಕುಡಿಯುವವರ ಬಗ್ಗೆ, ಕುಡಿಯದವರಿಗೆ ಏನೋ ಒಂಥರಾ ಅನಾದರ, ಕುಡಿಯದವರ ಬಗ್ಗೆ ಕುಡಿಯುವವರಿಗೆ ಏನೋ ಒಂಥರಾ ತಿರಸ್ಕಾರ ಕುಡಿದು ಜೀವನ ಹಾಳು ಮಾಡಿಕೊಳ್ತಾರೆ ಎಂದು ಕುಡಿಯದವರು ಅಂದುಕೊಳ್ತಾರೆ. ಕುಡಿಯದೇ ಜೀವನವನ್ನು ನಿರರ್ಥಕಗೊಳಸಿಕೊಳ್ಳುತ್ತಾರೆ ಎಂದು ಕುಡಿಯುವವರು ಭಾವಿಸುತ್ತಾರೆ. ಕುಡಿಯುವವರು ಕುಡಿಯುತ್ತಲೇ ಇರುತ್ತಾರೆ. ಕುಡಿಯದವರು ಕುಡಿಯದೇ ಇರುತ್ತಾರೆ. ಇವರಿಬ್ಬರೂ ತಮ್ಮ ತಮ್ಮ ಮೂಗಿನ ನೇರಕ್ಕೆ ಸರಿ ಎಂದು ವಾದಿಸುತ್ತಲೇ ಇರುತ್ತಾರೆ. ಅಸಲಿಗೆ ಕುಡಿತದ ಬಗ್ಗೆ ಕುಡಿಯುವವರಿಗೆ ಮತ್ತು ಕುಡಿಯದವರಿಗೆ ಗೊತ್ತಿರುವುದಿಲ್ಲ. ಕುಡಿತ ಅಂದ್ರೆ ಕಿಕ್ ಎಂದು ಭಾವಿಸಿದವರಿಗೂ, ಸೆಕ್ಸ್ ಅಂದ್ರೆ ಮಕ್ಕಳನ್ನು ಮಾಡುವುದು ಎಂದು ಅಂದುಕೊಂಡವರಿಗೂ ಹೆಚ್ಚು ವ್ಯತ್ಯಾಸವಿಲ್ಲ. ಕುಡಿತದ ದುಷ್ಪರಿಣಾಮದ ಬಗ್ಗೆ ಮಾತಾಡುವವರು, ಕುಡಿತಕ್ಕೂ ಒಂದು ಸಾಂಸ್ಕೃತಿಕ ಆಯಾಮವಿದೆ ಎಂಬುದನ್ನು ಒಪ್ಪಿಕೊಳ್ಳುವುದಿಲ್ಲ. ಬದುಕನ್ನು ಅತಿಯಾಗಿ ಪ್ರೀತಿಸಿದವ ಮಾತ್ರ ಗುಂಡನ್ನು ಕಂಡುಹಿಡಿದಿರಬಹುದು ಎನ್ನುವವರ ಹಾಗೆ, ದೇವತೆಗಳೂ ಸುರಾಪಾನ ಇಷ್ಟಪಡುತ್ತಿದ್ದರು ಮತ್ತು ಕುಡಿದವರು ಸೈತಾನನಿಗೆ ಸಮ ಎಂದು ವಾದ ಮಾಡುವವರು ಇದ್ದಾರೆ. ಅದೇನೇ ಇರಲಿ, ಇದು ಕುಡಿತದ ಪರ-ವಿರೋಧದ ಕೃತಿಯಲ್ಲ. ಶೀರ್ಷಿಕೆ 'ಕುಡಿಯೋಣು ಬಾರಾ' ಎಂದಿದ್ದರೂ, ಕುಡಿತವನ್ನು ಉತ್ತೇಜಿಸುವ ಕೃತಿಯೂ ಅಲ್ಲ ಕುಡಿತದ ಸುತ್ತ ಇರುವ ಬೇರೆಯದೇ ಲೋಕದ ಗುಂಗಿನ ಗಮ್ಮತ್ತು ಹಾಗೂ ಮತ್ತು ಭರಿಸುವ ಒಂದಷ್ಟು ಹರಟೆ, ವಿಷಯ, ವಿಚಾರಗಳ ಕಾಕ್ ಟೇಲ್ ಗಳನ್ನು ನೀವು ಈ ಪುಸ್ತಕದಲ್ಲಿ ನೋಡಬಹುದು.
©2024 Book Brahma Private Limited.