ಮೈ, ಶ್ರೀ. ನಟರಾಜ ಅವರು ಬಹುಮುಖ ಆಸಕ್ತಿಯುಳ್ಳವರು. "ಕರಗಿಸುವ ಕಡಾಯಿ ಕೋಸುಂಬರಿ ಕುಕ್ಕೆ'ಯಲ್ಲಿ ವಿವಿಧ ಬಗೆಯ ಲೇಖನಗಳಿವೆ. ಇತಿಹಾಸದ ಗತಿ ಅರಿಯುವ ಪ್ರಯತ್ನವಿದೆ. ಸಂಸ್ಕೃತಿ ಪಲ್ಲಟವನ್ನು ಹಿಡಿಯುವ ತುಡಿತವಿದೆ. ಸಾಮಾಜಿಕ ಬದುಕಿನ ಸ್ಥಿತ್ಯಂತರಗಳ ಸೂಕ್ಷ್ಮ ಪರಿಶೀಲನೆಯಿದೆ. ಸಾಹಿತ್ಯಾಧ್ಯಯನದ ಒಳನೋಟಗಳಿದೆ. ಇದೆಲ್ಲದರ ಹಿಂದೆ ಬದಲಾಗುತ್ತಿರುವ ಬದುಕಿನಲ್ಲಿ ಎದುರಾಗುತ್ತಿರುವ ಸಂಕಟಗಳಿಗೆ ಪರಿಹಾರದ ಸಾಧ್ಯತೆಗಳನ್ನು ಕಂಡುಕೊಳ್ಳುವ ಕಾಳಜಿಯಿದೆ.
ಅಪರಿಚಿತ ಪರಿಸರದಲ್ಲಿ ತಮ್ಮ ಸೃಜನಶೀಲತೆಯನ್ನು ಕಾಪಾಡಿಕೊಳ್ಳಲು ಅವರು ನಡೆಸಿದ ಹೋರಾಟ ನಮ್ಮ ಸಾಂಸ್ಕೃತಿಕ ಚರಿತ್ರೆಯ ಒಂದು ಪ್ರಮುಖ ಅಧ್ಯಾಯ. ಡಯೋಸ್ಪೋರಾ ಸಿದ್ಧಾಂತಕ್ಕೆ ಉಜ್ಜಲ ನಿದರ್ಶನ. ನಟರಾಜರ ಕವಿತೆ, ಕತೆ, ನಾಟಕ, ಪ್ರಬಂಧ, ಅಂಕಣಬರಹ... ಹೀಗೆ ಅನೇಕ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ. ಇವೆಲ್ಲವುಗಳ ಪದಪಾಕ 'ಕರಗಿಸುವ ಕಡಾಯಿ'ಯಲ್ಲಿದೆ. ಅವರ ನವಿರಾದ ಹಾಸ್ಯ, ಸ್ವವಿಮರ್ಶೆಯ ಎಚ್ಚರ, ಪದ್ಯಗಂಧಿಯಾದ ಗದ್ಯ, ಸೃಜನಶೀಲತೆಯ ಬಗೆಗಿನ ಗಾಢ ನಂಬಿಕೆ, ಕಹಿಯಾಗದೆ - ಲವಲವಿಕೆಯ ಜೀವನೋತ್ಸಾಹದ ಮನಸ್ಸು ಅಲ್ಲಿನ ಬರವಣಿಗೆಯ ವಿನ್ಯಾಸವನ್ನು ರೂಪಿಸಿರುವುದರಿಂದ ಸಹಜವಾಗಿಯೇ ನಟರಾಜರ ಈ ಪುಸ್ತಕದ ಓದು ಒಂದು ಉಲ್ಲಾಸದಾಯಕ ಅನುಭವದ ಜೊತೆಗೆ ನಮ್ಮನ್ನು ಸೆಳೆಯುತ್ತದೆ’ ಎನ್ನುವ ಮೆಚ್ಚುಗೆಯ ನುಡಿಗಳು ವಿಮರ್ಶಕರಾದ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರದ್ದು.
©2024 Book Brahma Private Limited.