‘ಕಣ್ಣುತೆರೆಸಿದ ಮಕ್ಕಳು’ ವಿ.ಗಣೇಶ್ ಅವರ ಆಯ್ದ ಲಲಿತ ಪ್ರಬಂಧಗಳಾಗಿವೆ. "ತಮ್ಮದು ಯಾವ ಊರು?. ನೀವೂ ನಮ್ಮವರೇ ಎಂದು ಗೊತ್ತಾಯಿತು. ತಮಗೆ ಮದುವೆಯಾಗಿದೆಯೇ?. ಈಗೇನಾದರೂ ಮದುವೆ ಮಾಡಿಕೊಳ್ಳುವ ಯೋಚನೆಯಿದೆಯೇ?” ಎಂದು ಕೇಳಿದರು. ಅವರು ಹಾಗೆ ಕೇಳುತ್ತಿರುವಾಗ ನನ್ನ ಮುಖವೆಲ್ಲ ನಾಚಿಕೆಯಿಂದ ಕೆಂಪಾಗಿ ಹೋಯಿತು. 'ಅವರು ನನಗೆ ತಮ್ಮ ಮಗಳ ಪ್ರಪೋಸಲ್ ಕೊಡಲು ಬಂದಿದ್ದಾರೆ. ಕೇಳಿದರೆ ಏನು ಹೇಳುವುದು? ಅಪ್ಪ-ಅಮ್ಮನನ್ನು ಕೇಳಿ ಹೇಳುತ್ತೇನೆ ಎಂದು ಹೇಳಲೆ, ಅಥವಾ ನನಗೆ ನಿಮ್ಮ ಮಗಳು ಇಷ್ಟವಾಗಿದ್ದಾಳೆ. ಅವಳಿಗೂ ನಾನು ಇಷ್ಟವಾಗಿದ್ದೇನೆ ಎಂದು ಕಾಣಿಸುತ್ತದೆ.' ಹೀಗೆ ಇನ್ನೇನನ್ನೋ ಹೇಳಬೇಕು ಎಂದುಕೊಂಡಿದ್ದೆ. ಆದರೆ ಅವರು, “ಯಾಕೆ ಕೇಳಿದೆನೆಂದರೆ ನಮ್ಮ ಪೈಕಿ ಒಬ್ಬಳು ಹುಡುಗಿ ಇದ್ದಾಳೆ. ಅವಳೂ ಕೂಡಾ ನಿಮ್ಮಂತೆಯೇ ಉಪನ್ಯಾಸಕಿ- ಯಾಗಿದ್ದಾಳೆ. ನೋಡಲೂ ಲಕ್ಷಣವಾಗಿದ್ದಾಳೆ. ತುಂಬಾ ಒಳ್ಳೆಯ ಹುಡುಗಿ. ನಿಮಗೆ ಸರಿಯಾದ ಜೋಡಿಯಾಗಬಹುದು. ನೀವು ಇಷ್ಟಪಡುವುದಾದರೆ ಅವಳ ಫೋಟೋ ಮತ್ತು ಜಾತಕವನ್ನು ತರಿಸಿ ಕೊಡುತ್ತೇನೆ” ಎಂದಾಗ ನೆಲವೇ ಕುಸಿದಂತಾಯಿತು. 'ನಾನೇನೋ ಇವರ ಮಗಳ ಪ್ರಪೋಸಲ್ ಕೊಡಲು ಬಂದಿದ್ದಾರೆ, ಹೇಗೆ ಪ್ರತಿಕ್ರಿಯಿಸುವುದು' ಎಂದು ಯೋಚಿಸುತ್ತಿದ್ದರೆ ಇವರು ಯಾವುದೋ ಬೇರೆ ಪ್ರಪೋಸಲ್ ಕೊಡುತ್ತಿದ್ದಾರೆ. ಈ ಮುದುಕನಿಗೆ ಸ್ವಲ್ಪವೂ ಬುದ್ಧಿ ಬೇಡವೇ? ಮನೆಯಲ್ಲಿ ಬೆಳೆದ ಮಗಳನ್ನಿಟ್ಟುಕೊಂಡು ಬೇರೆಯವರ ಪ್ರಪೋಸಲ್ ಕೊಡುತ್ತಿದ್ದಾರೆ. ಈ ಮನುಷ್ಯನಿಗೆ ಹುಚ್ಚು ಹಿಡಿದಿದೆಯೇ?' ಭಾವಿಸತೊಡಗಿದೆ. (ಆಯ್ದ ಭಾಗ)
©2024 Book Brahma Private Limited.