ಡಾ. ಲಕ್ಷ್ಮಣ ಎಸ್. ಚೌರಿ ಅವರ ಪ್ರಬಂಧಗಳ ಸಂಕಲನ-ಹರದಾರಿ ಮಾತು. ಅನುಭವ, ಅನುಭಾವ, ಉದಾರತೆ, ಸಾಮಾಜಿಕ ಚಿಂತನೆಗಳನ್ನು ಒಳಗೊಂಡ ಪ್ರಬಂಧಗಳಿವೆ. ಸಾಹಿತಿ ಪ್ರಕಾಶ ಕೋಟಿನತೋಟ ಕೌಜಲಗಿ ಅವರು ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ. ಪ್ರತಿ ಪ್ರಬಂಧದಲ್ಲಿ ವಸ್ತುವೈವಿಧ್ಯತೆ ಇದೆ. ಶೈಲಿಯೂ ಸಹ ಓದುಗರನ್ನು ಆಕರ್ಷಿಸುತ್ತದೆ.
ಬಸ್ಸು ತಪ್ಪಿಸಿಕೊಂಡಾಗ... 1976ರಲ್ಲಿ ನಾನು ಆರನೆಯ ತರಗತಿಯಲ್ಲಿ ಸರಕಾರಿ ಪ್ರಾಥಮಿಕ ಶಾಲೆ ಅಡಿಹುಡಿಯಲ್ಲಿ ಓದುತ್ತಿದ್ದೆ. ಪಂಚಮಿ ಹಬ್ಬ ಸಮೀಪಕ್ಕೆ ಬಂದಂತೆ ಅಳ್ಳು ಉಂಡಿ, ಚೂಡಾ, ಚಕ್ಕುಲಿ, ಸುರಗಿ ಹೋಳಿಗೆ, ಬೂಂದಿ ಉಂಡಿ, ಕೊಬ್ಬರಿ ಉಂಡಿ, ಉಸಳಿ, ಕೋಡಬಳಿ ಮಾಡಬೇಕಾಗಿತ್ತು. ಪಂಚಮಿ ಮರುದಿನ ಇದ್ದರೂ ನಮ್ಮ ಮನೆಯಲ್ಲಿ ಇನ್ನೂ ಸಂತೆ ಮಾಡಿರಲಿಲ್ಲ. ಬಡತನದ ಬಾಳ್ವೆ, ನಾವೆಲ್ಲ ಸಣ್ಣ ಮಕ್ಕಳು ಅವ್ವನಿಗೆ ಕಾಡಿ ಬೇಡಿದ್ದೆವು. ನಮ್ಮ ಬೇಡಿಕೆಗಳ ಪಟ್ಟಿ ಹೇಳಿ ಆಗಿತ್ತು. ಗುರುವಾರ ಜಮಖಂಡಿ ಸಂತೆ. ಅರಿಷಿಣ ಮತ್ತು ಹೆಸರು ಮಾರಿಕೊಂಡು ಬಂದು ಪಂಚಮಿ ಹಬ್ಬದ ಸಂತೆ ಮಾಡಬೇಕೆಂದು ಅಪ್ಪನ ಆಜ್ಞೆಯಾಗಿತ್ತು. ಅಂದು ಅಪ್ಪನು ನನಗೆ ಕರೆದು ನಾಳೆ ನಿಮ್ಮವ್ವನೊಂದಿಗೆ ಜಮಖಂಡಿ ಸಂತೆಗೆ ಹೋಗಿ, ಸಂತೆ ತರಬೇಕು ಎಂದಾಗ ಆಗಲಿ ಅಪ್ಪಾ’ ಎಂದು ಗೋಣು ಅಲ್ಲಾಡಿಸಿದೆ. ಸಾವಕಾಶ ಅವ್ವನಿಗೆ ಹೇಳಿದೆ... ನಾಳೆ ನಮ್ಮ ಶಾಲೆಯಲ್ಲಿ ಸರಸ್ವತಿ ಪೂಜಾ ಇದೆ. ತರಗತಿಯ ಮುಖಂಡ ನಾನೇ ಇರುವುದರಿಂದ ದುಡ್ಡು ನನ್ನ ಕಡೆಗೆ ಇವೆ. ನಾಳೆ ತಪ್ಪದೆ ಶಾಲೆಗೆ ಹೋಗಲೇಬೇಕೆಂದು ಹೇಳಿದೆ. ಆಗ ಅವ್ವ ಬೇಡ! ಬೇಡ! ಮಗು! ನಿನ್ನ ಹಾಗೂ ನನ್ನ ಪರಿಣಾಮ ಸರಿಯಾಗುವುದಿಲ್ಲ. ಮುಂಜಾನೆ ಬೇಗನೆ ನೀನು ತಯಾರಾಗಿ ಶಾಲೆಗೆ ಹೋಗು! ನಿಮ್ಮ ವರ್ಗದ ಗುರುಗಳಿಗೆ ದುಡ್ಡು ಕೊಟ್ಟು ನಿನ್ನ ಜವಾಬ್ದಾರಿ ಬೇರೆಯವರಿಗೆ ವಹಿಸಿ ಬಿಟ್ಟು ಬಸ್ಸ್ಟ್ಯಾಂಡಿಗೆ ಬಾ. ನಾನು ನೀನು ಕೂಡಿಕೊಂಡು ಜಮಖಂಡಿಗೆ ಹೋಗಿ ಸಂತೆ ಮಾಡಿಕೊಂಡು ಬರೋಣ ಎಂದಾಗ ಖುಷಿಯಿಂದ ಒಪ್ಪಿಕೊಂಡು ಮಲಗಿಕೊಂಡೆ. ಬೆಳಿಗ್ಗೆ 6 ಗಂಟೆಗೆ ಸಂತೆ ಗಂಟನ್ನು ತೆಗೆದುಕೊಂಡು ಬಸ್ ನಿಲ್ದಾಣದಲ್ಲಿಟ್ಟು ಶಾಲೆಗೆ ಹೋದೆ. ಇನ್ನೂ ವರ್ಗದ ಗುರುಗಳು ಬಂದಿರಲಿಲ್ಲ. ನನ್ನ ಜವಾಬ್ದಾರಿಯನ್ನು ಗೆಳೆಯರಿಗೆ ಒಪ್ಪಿಸಿದೆ. ಗುರುಗಳ ಮನೆಗೆ ಹೋಗಿ ವಿಷಯ ತಿಳಿಸಿ, ಓಡಿ ಓಡಿ ಬರುವಷ್ಟರಲ್ಲಿ ಅವ್ವ ನನ್ನ ದಾರಿ ನೋಡಿ ನೋಡಿ ಗಂಟು ತೆಗೆದುಕೊಂಡು ಬಸ್ಸಿಗೆ ಹೋಗಿದ್ದಳು. ಅವ್ವನ ಎದೆಯಲ್ಲಿ ತಳಮಳ, ನನ್ನ ಕಣ್ಣಲ್ಲಿ ನೀರು... ತುಂಬಾ ಹೆದರಿಕೆಯಾಗಿ ಅಪ್ಪನಿಗೆ ಗೊತ್ತಾದರೆ ಅವ್ವನಿಗೂ ನನಗೂ ಮನೆಯಿಂದ ಹೊರ ಹಾಕುವನು. ಬಸ್ಸಿಗೆ ಕಾಸಿಲ್ಲ. ಬೇರೆಯವರನ್ನು ಕೇಳಿದರೆ, ಅಪ್ಪನಿಗೆ ಹೇಳುವರು. ಮತ್ತೊಂದು ಬಸ್ಸು ಕೂಡಾ ಇಲ್ಲ. ಧೈರ್ಯ ತೆಗೆದುಕೊಂಡು ಜಮಖಂಡಿವರೆಗೂ ಜೋರಾಗಿ ಓಡೇ ಓಡಿದೆ. ಸುಮಾರು 30 ಕಿ.ಮೀ ದೂರ ಹೇಗೆ ಓಡಿದೆನೋ ಏನೋ ಸ್ವಲ್ಪವೂ ಗೊತ್ತಾಗಲಿಲ್ಲ. ಹನ್ನೆರಡು ವರ್ಷದ ಬಾಲ್ಯದಲ್ಲಿ ಒಂದು ಗಂಟೆಯಲ್ಲಿ ಅಡಿಹುಡಿಯಿಂದ ಜಮಖಂಡಿ ತಲುಪಿದ್ದು ನನ್ನ ಜೀವನದಲ್ಲಿ ಮರೆಯಲಾಗದ ಮೈಲುಗಲ್ಲಾಗಿದೆ. ನೆರೆದ ಜನಸಂದಣಿಯಲ್ಲಿ ಹುಡುಕುವಷ್ಟರಲ್ಲಿ ಅವ್ವ ದೊರೆತಳು. ಬೆವರಿನಿಂದ ಮೈ ತೊಯ್ದಿತ್ತು. ಅವ್ವ ನನ್ನನ್ನು ಅಪ್ಪಿಕೊಂಡಳು. ನನ್ನ ಅವಸ್ಥೆ ಕಂಡು ಕಣ್ಣೀರು ಸುರಿಸಿದಳು. ತಿನಿಸು ಕೊಡಿಸಿದಳು. ಅರಿಷಿಣ ಮತ್ತು ಹೆಸರು ಮಾರಾಟ ಮುಗಿದು ಹೋಯ್ತು. ಅವ್ವ ಬೇಗ ಸಂತೆ ಮಾಡಿ ಕಟ್ಟಿಕೊಂಡಳು. ಮತ್ತೆ ಸಂಜೆ ಬಸ್ಸು ಹಿಡಿದು ಊರಿಗೆ ಬಂದೆವು. ಮನೆಯಲ್ಲಿ ಅಪ್ಪ, ಅವ್ವ, ಅಜ್ಜಿ, ಇಬ್ಬರು ಅಕ್ಕಂದಿರು, ನಾವು ಆರು ಜನ ಅಣ್ಣ ತಮ್ಮಂದಿರು ಕೂಡಿಕೊಂಡು ಅವ್ವ ಹಂಚಿದ ಸಿಹಿಯನ್ನು ಪ್ರೀತಿಯಿಂದ ತಿಂದೆವು. ಅಪ್ಪ ನನಗೆ ಸಂತೆ ಲೆಕ್ಕ ವಿವರ ಕೇಳಿದ. ಎಲ್ಲವನ್ನೂ ಬಿಡಿಬಿಡಿಯಾಗಿ ತಿಳಿಸಿದೆ. ನೋಡಪ್ಪ ನಾವೊಂದ, ಸಾಲಿ ಕಲ್ತಿರಲಿಲ್ಲ. ನಿನ್ನ ಸಾಲಿ ಕಲಿಸಿದ್ದಕ್ಕ ಸಾರ್ಥಕವಾಯಿತು. ಬಾಳ ಜಾಣನಾಗಿರುವಿ ಶಭಾಷ್! ಎಂದರು. ಎಲ್ಲರೂ ಮಾತಾಡುತ್ತಾ ಕುಳಿತುಕೊಂಡಾಗ ಅಪ್ಪ ತನ್ನ ಕಿಸೆಯಿಂದ ಒಂದು ಪತ್ರ ನನ್ನ ಕೈಗೆ ಕೊಟ್ಟನು. ಬೀಳಗಿಯಿಂದ ದೊಡ್ಡವ್ವ ದೊಡ್ಡಪ್ಪನಿಂದ ಬಂದಿದೆ ಎಂದು ಓದಿ ಹೇಳಿದೆ - ಕೇಳಿ ಎಲ್ಲರೂ ಆನಂದಿಸಿದರು. ಊಟ ಮಾಡಿದೆವು. ಎಲ್ಲರೂ ಕೂಡಿಕೊಂಡು ಪಂಚಮಿ ಮಜಕೂರ ಬಗ್ಗೆ ಮಾತಾಡುತ್ತಿದ್ದೆವು. ಅಪ್ಪನು ಮಂಚದ ಮೇಲೆ ಮಲಗಿಕೊಂಡರು. ರಾತ್ರಿಯಲ್ಲೂ ಅವ್ವ, ಚಿಕ್ಕಮ್ಮ, ದೊಡ್ಡಮ್ಮ, ಅವ್ರ-ಇವ್ರ ಸೇರಿದರು. ಸಿಹಿ ಸಿಹಿ ಪದಾರ್ಥಗಳನ್ನು ತಯಾರಿಸಿದರು. ಎಲ್ಲರೂ ಓಡಾಡಿ ಜೋಕಾಲಿ ಆಡಿದರೆ ನಾನು ಮಬ್ಬಾಗಿ ಕುಳಿತುಕೊಂಡಿದ್ದೆ. ನಿನ್ನೆ ಓಡಿದ... ನನ್ನ ವೀರ ಸಾಹಸದ ಕಥೆಯನ್ನು ಅವ್ವ ಎಲ್ಲರ ಮುಂದೆ ಹೇಳಿ ಸಂತೋಷಪಟ್ಟಳು. ಅಪ್ಪನ ಅಂಜಿಕೆ ಅವ್ವನ ಪ್ರೀತಿ ಬಹಳಷ್ಟು ಮುಖ್ಯ. ಇವೆರಡರ ಮಧ್ಯ ವ್ಯಕ್ತಿಯ ವಿಕಾಸ ಅಡಗಿದೆ ಎಂಬ ಮಾತು ನಿಜವೆಂದು ಅನಿಸುತ್ತದೆ. ಆ ಮಾತು, ಆ ಮುತ್ತು, ಆ ತುತ್ತು, ನನ್ನ ತಾಯಿಯ ಮಹದುಪಕಾರ ಅದನ್ನು ನಾನೆಂದೂ ಮರೆಯಲಾರೆ. ತಂದೆಯ ಅಂಜಿಕೆ ತಾಯಿಯ ಪ್ರೀತಿಯು ನಾನು ಶಿಕ್ಷಕನಾಗಲು ಸಾಧನವಾಯಿತು. ಹಾಗೆಯೇ ಹಿರಿಯರ ಅವಶ್ಯಕತೆ ಇಂದಿನ ಸಮಾಜಕ್ಕೆ ಬಹಳವಿದೆ. ನಾನೀಗ 56ರ ಪ್ರಾಯಕ್ಕೆ ಬಂದರೂ ಪ್ರತಿ ಹೆಜ್ಜೆ ಹೆಜ್ಜೆಗಳಲ್ಲೂ ತಂದೆ ತಾಯಿಯವರು ಹಾಕಿ ಕೊಟ್ಟ ಮಾರ್ಗವು ಜೀವನಕ್ಕೆ ಬೆಳಕು ಕೊಟ್ಟಿದೆ. ಬಾಲ್ಯದಲ್ಲಿ ಯಾವ ತಂದೆ-ತಾಯಿ ಸರಿಯಾದ ಮಾರ್ಗದರ್ಶನ ನೀಡುವರೋ ಅವರ ಬದುಕು ಪರಿಪೂರ್ಣ ಅನುಭವದಿಂದ ಕೂಡಿರುತ್ತದೆ. ಆದರ್ಶ ದಂಪತಿಯ ಮಕ್ಕಳು ಆದರ್ಶರಾಗಿ ಹೊರಹೊಮ್ಮುತ್ತಾರೆ. ನಾನು ಬೇಗ ಮಲಗಿ, ಬೇಗ ಏಳಲು, ಸೂಕ್ಷ್ಮವಾಗಿ ವರ್ತಿಸಲು, ಸರಳತೆಯನ್ನು ರೂಢಿಸಿಕೊಳ್ಳಲು, ಗೌರವದಿಂದ ಬಾಳಲು, ಹಿರಿಯರಿಗೆ ಗೌರವ, ಕಿರಿಯರಿಗೆ ಪ್ರೀತಿ ಕೊಡುವ ಗುಣ, ತಂದೆ ತಾಯಿ ಕಲಿಸಿದ ಪಾಠ ಎಂದು ಹೇಳಲು ಸಂತೋಷ. ಅದೇ ವೇದ ವಾಕ್ಯ... ನನ್ನ ತಂದೆ-ತಾಯಿ ಕಡುಬಡವರಿದ್ದರೂ ಸಿರಿವಂತ ಗುಣಗಳನ್ನು ನಮಗೆ ಧಾರೆ ಎರೆದರು. ಹಣಕ್ಕೆ ಬೆಲೆ ಕೊಡಲಿಲ್ಲ. ಸತ್ಯ ಭವ್ಯ ಗುಣಗಳಿಂದಲೇ ಅವರು ಸಮಾಜಕ್ಕೆ ದಾರಿದೀಪ..
-ಡಾ. ಲಕ್ಷ್ಮಣ ಎಸ್. ಚೌರಿ
©2024 Book Brahma Private Limited.