ಪ್ರಸ್ತುತ ಸಂಕಲನ ಆಪ್ತವಾದ ಬಾಲ್ಯಕಾಲದ ಜೀವನಾನುಭವಗಳಿಂದ ಆತ್ಮಕಥನವನ್ನು ಮಂಡಿಸುವಂತೆ ತೆರೆದುಕೊಳ್ಳತ್ತದೆ. ಎಲ್ಲೂ ಬಿಳಿಗೆರೆ ಈರ್ಷೆಯ ವಿಷಯಗಳತ್ತ ತಿರುಗಿಯೂ ನೋಡುವುದಿಲ್ಲ. ಕೃಷ್ಣಮೂರ್ತಿ ಅಳಿವಿನ ಅಂಚಿನ ವೃಕ್ಷ ಸಂಹಿತೆಯ ಬಗ್ಗೆ ಗಾಢವಾದ ವಿಷಾದ ವ್ಯಕ್ತಪಡಿಸುತ್ತಾರೆ. ಮರಗಿಡಗಳ ಬಗ್ಗೆ ಇರುವಷ್ಟು ವಿಶ್ವಾಸ ಖಂಡಿತ ಮನುಷ್ಯರ ಬಗ್ಗೆ ಇಲ್ಲ. ಅಷ್ಟರ ಮಟ್ಟಿಗೆ ಜೀವ ಜಾಲದ ಅಖಂಡತೆಯನ್ನು ಆವಾಹಿಸಿಕೊಂಡಿರುವ ಲೇಖಕರು ಹೇಳಬೇಕಾದ ಕಥನವನ್ನು ಪರಿಣಿತ ಕಥೆಗಾರರ ದಾಟಿಯಲ್ಲಿ ನಿರೂಪಿಸುತ್ತಾರೆ. ತೇಜಸ್ವಿ ಅವರ ಪ್ರಭಾವ ಅವರ ಮೇಲೆ ಇರುವಂತೆ ಕಾಣುತ್ತದೆ. ಛಿದ್ರ ಸಮಾಜಗಳ ಬಗ್ಗೆ ಎಷ್ಟು ಬರೆದರೂ ಅಷ್ಟೆಯೇ ಎಂಬಂತಿರುವ ಈ ಕಾಲದಲ್ಲಿ ನಮ್ಮನ್ನೆಲ್ಲ ಹಡೆದು ಸಲಹುತ್ತಲೇ ಬಂದಿರುವ ಭೂಮಿಗೆ ಆಳವಾದ ಗಾಯಗಳಾಗಿ ಬಿಟ್ಟರೆ ಯಾರು ಮುದ್ದಿಕುವವರು ಯುದ್ಧಗಳಿಂದಾದ ಅಣು ಬಾಂಬುಗಳ ಗಾಯಗಳು ಇನ್ನೂ ವಾಸಿ ಆಗಿಲ್ಲವಲ್ಲ ನಾಳೆ ಇನ್ನೇನೇನು ಮಹಾಗಾಯಗಳು ಮಹಾಯುದ್ಧಗಳಿಂದ ಆಗಬಲ್ಲವು ಎಂಬ ಆತಂಕವನ್ನು ಬಿಳಿಗೆರೆ ಸೂಕ್ಷ್ಮವಾಗಿ ಮುಟ್ಟಿಸುತ್ತಾರೆ. ಭೂಮಿಯ ಮೇಲಿನ ಮೂಲ ಜೈವಿಕ ಗುಣ ಎಂದರೆ ಬೀಜೋತ್ಪತ್ತಿ, ಭೂಮಿಯೇ ತನಗಾಗಿ ಸೃಷ್ಟಿಸಿಕೊಂಡಿದ್ದ ಬೀಜಗಳಿಂದ ಪರಿಸರದಲ್ಲಿ ಸಮತೋಲನ ಇತ್ತು. ಈಗ ಹೈಬ್ರಿಡ್ ಬೀಜಗಳಿಂದ ಏನೇನಾಗುತ್ತಿದೆ ಎಂದು ಎಲ್ಲೆಲ್ಲಿಗೋ ಜಿಗಿದು; ಇಡೀ ಭೂಮಿಯೇ ಒಂದು ಆಕಾಶ ಬೀಜ ಈ ಬೀಜ ಬರಡಾಗಿ ಚಂದ್ರನಂತೆ ಒಣ ಗುಂಡಾದರೆ ಆಗ ಏನು ಮಾಡುವುದು ಎಂಬ ಎಚ್ಚರಿಕೆಯನ್ನು ಬಿಳಿಗೆರೆ ಈ ಬರಹಗಳಿಂದ ನೀಡುತ್ತಾರೆ ಎನ್ನುತ್ತಾರೆ ಮೊಗಳ್ಳಿ ಗಣೇಶ್.
©2024 Book Brahma Private Limited.