"ಬೆಳದಿಂಗಳ ಬೇರು" ಲೇಖಕಿ ಶಾಂತಲಾ ಭಂಡಿ ಅವರ ಪ್ರಬಂಧ/ಲಹರಿ ಗುಚ್ಛ. ಲೇಖಕ ಹಾಗೂ ಪತ್ರಕರ್ತ ಜೋಗಿ ಅವರು ಕೃತಿಯ ಕುರಿತು ‘ಇಲ್ಲಿನ ಬರಹಗಳ ವೈಶಿಷ್ಟ್ಯವಿರುವುದು ತಾಯಿಬೇರಿನಲ್ಲಿ. ಅವರು ಖಂಡಾಂತರಕ್ಕೆ ಜಿಗಿದರೂ ಅವರ ಜೀವವಿರುವುದು ಬಾಲ್ಯದಲ್ಲಿ ನೆಟ್ಟುಹೋದ ಪಾರಿಜಾತದ ಗಿಡದಲ್ಲಿ ಅರಳುವ ಒಂದೊಂದೂ ಹೂವಲ್ಲಿ, ಹಾಗಾಗಿ ನಸುಗೆಂಪು ತೊಟ್ಟಿನ ಬಿಳಿಮೈಯ ಹೂವಿನಂಥ ಪ್ರಬಂಧಗಳನ್ನು ಸರಾಗವಾಗಿ ಓದಬಹುದು’ ಎಂದು ಪ್ರಶಂಸಿಸಿ ಪ್ರಬಂಧಗಳ ಸ್ವರೂಪವನ್ನು ತೋರಿದ್ದಾರೆ.
ಸಹಜ ಘಟನೆಗಳು ಹೇಗೆ ಮನಕಲಕುವ, ಮನಮುಟ್ಟುವ ಕೆಲವೊಮ್ಮೆ ಮನಮುದುಡಿಸುವ ನೆನಪುಗಳಾಗಿ ಅಂತರಂಗದೊಳಗೆ ಉಳಿದುಬಿಡುತ್ತವೆ ಎಂಬುದನ್ನು ನವಿರಾಗಿ ಹಾಗೂ ಅಷ್ಟೇ ಭಾವತೀವ್ರತೆಯಿಂದ ಹೇಳುವ ಲೇಖನಗಳಿರುವ ಶಾ೦ತಾಲಾ ಭ೦ಡಿಯವರ ಬೆಳದಿಂಗಳ ಬೇರು' ಮೊದಲ ನೋಟಕ್ಕೇ ನಮ್ಮನ್ನು ಇನ್ನಿಲ್ಲದಂತೆ ಆಕರ್ಷಿಸುತ್ತದೆ. ಈ ಪುಸ್ತಕದಲ್ಲಿ ಏನಿದೆ, ಏನಿಲ್ಲ ಎಂದು ಹೇಳುವುದೇ ಕಷ್ಟ, ಬರೀ ಲೇಖನಗಳು ಎಂದು ಓದತೊಡಗಿದರೆ ಕಥೆಯೊಂದು ಎದುರಿಗೆ ನಿಂತು ನಗುತ್ತದೆ. ಅದೇ ಕಥೆಯಂತಹ ಲೇಖನದೊಳಗೆ ಬೆಳದಿಂಗಳ ಬೇರು ಕವಿತೆಯ ಸಾಲುಗಳು ನಮ್ಮನ್ನು ಕಾಡುತ್ತವೆ. ಕಥೆ, ಕವಿತೆಯ ನೆಲೆಗಟ್ಟಿನಲ್ಲೇ ನಾಟಕದ ಮಾತುಗಳೂ ನಮ್ಮನ್ನು ಕುತೂಹಲಗೊಳ್ಳುವಂತೆ ಮಾಡುತ್ತವೆ. ಪ್ರೀತಿ, ಪ್ರೇಮ, ತಾಯ್ತನ, ಸ್ನೇಹ ಎಲ್ಲ ಸಂಬಂಧಗಳ ಜೊತೆ ಹೆಸರೇ ಬೇಕಿಲ್ಲದ ಸಂಬಂಧವೂ ಇಲ್ಲಿ ಸುಂದರವಾಗಿ ನಿರೂಪಿತವಾಗಿದೆ. ಮರುಗುವ ಮುಸ್ಸಂಜೆಗಳು, ಕಿಂದರಜೋಗಿಯ ಹಾಡಿನ ಹಾಳೆ, ಗುರುಬಿನ ಕೈಸೆ ಗುನಗಾವೆ ಹಾಗೂ ನಾಟಕ ರೂಪದಲ್ಲಿರುವ ಸಂಭಾಷಣೆಯ ಮಾಘಮಾಸದ ಮಳೆ ಈ ಎಲ್ಲವೂ ವಿಚಿತ್ರವಾದ ಸಮ್ಮೋಹಕ ಭಾವವನ್ನು ಓದುಗನಲ್ಲಿ ಹುಟ್ಟು ಹಾಕುತ್ತವೆ. ಲೇಖಕಿಯೇ ಅಲ್ಲಲ್ಲಿ ಹೇಳಿಕೊಳ್ಳುವಂತೆ ಹುಣ್ಣಿಮೆ ಹಾಗೂ ಚಂದ್ರ ಇಷ್ಟ ಎನ್ನುವ ಕಾರಣಕ್ಕಾಗಿ ಹೆಚ್ಚಿನ ಬರಹಗಳಲ್ಲಿ ಇಣುಕುತ್ತ ಬೆಳದಿಂಗಳಾಗುದರ ಜೊತೆಗೇ ಕಾವಲುಗಾರನೇ ಕಳೆದು ಹೋದರೆ ಎಂಬಂತಹ ತೀವ್ರ ವಿಷಾದ ಮನತಟ್ಟುತ್ತದೆ. ಹಾಗೆ ನೋಡಿದರೆ ಇಲ್ಲಿನ ಹೆಚ್ಚಿನ ಲೇಖನಗಳಲ್ಲಿ ವಿಷಾದ, ವಿರಹವೇ ಸ್ಥಾಯಿಭಾವ. ಎಲ್ಲಾ ಲೇಖನಗಳಲ್ಲೂ ಒಂದಲ್ಲ ಒಂದು ಅಂಚಿನಲ್ಲಿ ನಮ್ಮನ್ನು ಈ ಭಾವ ತಟ್ಟುತ್ತ ಮನಸ್ಸನ್ನು ತಲ್ಲಣಗೊಳಿಸುತ್ತವೆ.
( ಬರಹ; ಶ್ರೀದೇವಿ ಕೆರೆಮನೆ)
©2024 Book Brahma Private Limited.